ಶನಿವಾರ, ಸೆಪ್ಟೆಂಬರ್ 18, 2021
30 °C

ಅಧಿಕಾರಿಶಾಹಿ ಮನೋಭಾವದಿಂದ ‘ಇ-ವಿಧಾನ್’ ಜಾರಿ ಸಾಧ್ಯವಾಗಿಲ್ಲ: ಕಾಗೇರಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇ-ವಿಧಾನ್ ಅನುಷ್ಠಾನ ಸಾಧ್ಯವಾಗದೇ ಇರಲು ಅಧಿಕಾರಿ ವರ್ಗದ ಮನೋಭಾವ ಕಾರಣ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಎರಡು ವರ್ಷದ ಅವಧಿಯಲ್ಲಿ ವಿಧಾನಸಭೆ ಕಲಾಪವನ್ನು ಸಂಪೂರ್ಣ ಕಾಗದರಹಿತ ಮಾಡುವ ಇ-ವಿಧಾನ್ ಯೋಜನೆ ಜಾರಿಗೊಳಿಸಲು ಮುಂದಾಗಿದ್ದೆ. ಆದರೆ, ಸಾಧ್ಯವಾಗಿಲ್ಲ. ಇ-ವಿಧಾನ್ ಜಾರಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

‘ಹಿಮಾಚಲ‌ಪ್ರದೇಶ, ಕೇರಳ ರಾಜ್ಯಗಳಲ್ಲಿ ಈಗಾಗಲೇ ಇ-ವಿಧಾನ್ ಯೋಜನೆ ಜಾರಿ ಆಗಿದೆ. ಆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಇ-ವಿಧಾನ್ ಜಾರಿ ಆಗದೇ ಇರುವುದು ನೋವಿನ ಸಂಗತಿ. ಹೊಸತನಕ್ಕೆ ಒಗ್ಗಿಕೊಳ್ಳುವ ಮನೋಭಾವ ಕಾರ್ಯಾಂಗ ವ್ಯವಸ್ಥೆಯಲ್ಲಿ ಇಲ್ಲದೇ ಇರುವ ಕಾರಣ ಇ-ವಿಧಾನ್ ಜಾರಿ ಸಾಧ್ಯವಾಗಿಲ್ಲ’ ಎಂದರು.

‘ಕರ್ನಾಟಕ ವಿಧಾನಸಭೆ ಅನುಭವ ಮಂಟಪ ಆಗಬೇಕು ಎಂಬುದು ಎಲ್ಲರ ಆಶಯ.‌ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಯತ್ನಿಸುತ್ತಿದ್ದೇವೆ. ಪ್ರತಿ ವರ್ಷ 60 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಬೇಕು. ಆದರೆ, ಕೋವಿಡ್‌ ಕಾರಣ ಸಾಧ್ಯವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಂಸತ್ ಮಾದರಿಯಲ್ಲಿ ವಿಧಾನಸಭೆ ಸದಸ್ಯರಿಗೂ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ಉದ್ದೇಶಿಸಿಸಲಾಗಿದೆ. ಈ ಕುರಿತು ಮಾರ್ಗಸೂಚಿಗಳನ್ನು ಈಗಾಗಲೇ ಹೊರಡಿಸಲಾಗಿದ್ದು, ಮುಂದಿನ ಅಧಿವೇಶನದ ಸಂದರ್ಭದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದರು.

‘ವಿಧಾನಪರಿಷತ್ ಏಕೆ ಬೇಕು ಎಂಬ ಬಗ್ಗೆ ಪ್ರಶ್ನೆ ಮೂಡುತ್ತಿದೆ. ಅದರ ಬಗ್ಗೆ ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಆತ್ಮಾವಲೋಕನ‌ ಮಾಡಬೇಕು. ಪರಿಷತ್ ಬೇಕು ಎಂಬ ಜನಾಭಿಪ್ರಾಯ ಮೂಡಿಸುವ ಜವಾಬ್ದಾರಿ ವಿಧಾನಪರಿಷತ್ ಸದಸ್ಯರ ಮೇಲಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಭಾಧ್ಯಕ್ಷನಾಗಿ ಮುಂದಿನ ಎರಡು ವರ್ಷ ವಿಧಾನಸಭೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಶ್ಚಯ ನಮ್ಮ ಮುಂದಿದೆ. ಆ ಸಂಬಂಧ ಕಾರ್ಯನಿರ್ವಹಿಸಬೇಕು’ ಎಂದಷ್ಟೆ ಹೇಳಿದರು.

ಬಿಜೆಪಿಯ ಕೆಲವು ಶಾಸಕರು ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಕಚೇರಿಯಲ್ಲಿ ಯಾರು ಬೇಕಾದರೂ ಬಂದು ಭೇಟಿ ಆಗಬಹುದು. ನಾನು ಸಭಾಧ್ಯಕ್ಷನಾದ ಕಾರಣ ಅವರ ಅಭಿಪ್ರಾಯ ಹೇಳಲು ಬರುವುದು ಸಾಮಾನ್ಯ. ಎಲ್ಲ ಪಕ್ಷದವರು ಬಂದು ನನ್ನ ಬಳಿ ಬಂದು ಮಾತನಾಡುತ್ತಾರೆ. ಅದರಲ್ಲಿ ವಿಶೇಷತೆ ಏನೂ ಇಲ್ಲ’ ಎಂದರು.

ಇದನ್ನೂ ಓದಿ... ಅಣ್ಣಾಮಲೈ ಊಟ ಮಾಡಿದರೂ, ಉಪವಾಸ ಮಾಡಿದರೂ ಮೇಕೆದಾಟು ನಮ್ಮ ಹಕ್ಕು: ಸಿಎಂ ಬೊಮ್ಮಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು