ಬುಧವಾರ, ಮೇ 25, 2022
29 °C
ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಕಡ್ಡಾಯ

ಮತಾಂತರ: ಸರ್ಕಾರಿ ಸವಲತ್ತಿಗೆ ಸಂಚಕಾರ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧ ಕಾಯ್ದೆ ಜಾರಿಗಾಗಿ, ರಾಜ್ಯ ಸರ್ಕಾರ ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಸಿದ್ಧತೆ ನಡೆಸುತ್ತಿದೆ. ಆ ಬೆನ್ನಲ್ಲೆ, ಮತಾಂತರಗೊಂಡವರ ಮೂಲ ಜಾತಿ ‘ಮೀಸಲಾತಿ’ ಸೌಲಭ್ಯದ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ವರ್ಗಕ್ಕೆ ಶೇ 3 ಮೀಸಲಾತಿ ಸೌಲಭ್ಯವಿದೆ. ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಪರಿಶಿಷ್ಟರು (ಎಸ್‌ಸಿ, ಎಸ್‌ಟಿ)ಮತಾಂತರವಾದರೆ ಅಂಥವರು ಸರ್ಕಾರದ ಆದೇಶದ ಪ್ರಕಾರ ಮೀಸಲಾತಿಯೂ ಸೇರಿದಂತೆ ಇತರ ಎಲ್ಲ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಮತಾಂತರಗೊಂಡ ಪರಿಶಿಷ್ಟರು ಈ ಮೀಸಲಾತಿ ಅವಕಾಶದ ಬದಲು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುವ ಶೇ 4 ಮೀಸಲಾತಿ ಪಡೆಯಲು ಅರ್ಹರಾಗುತ್ತಾರೆ.

ಮತಾಂತರ ಕಾಯ್ದೆ ಜಾರಿಗೆ ಬಂದರೆ ಮತಾಂತರಗೊಂಡವರು ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮ ಕಡ್ಡಾಯ ಆಗಲಿದೆ. ನೋಂದಣಿಯಾದರೆ ಅಂಥವರ ಜಾತಿ ಪ್ರಮಾಣಪತ್ರ ರದ್ದು ಆಗುತ್ತದೆ ಎನ್ನುವುದು ಸರ್ಕಾರದ ವಾದ. ಆದರೆ, ಜಾತಿ ಮೀಸಲಾತಿ, ಇತರ ಸೌಲಭ್ಯಗಳನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಮತಾಂತರಗೊಂಡ ಬಳಿಕವೂ ತಮ್ಮ ಜಾತಿ ಪ್ರಮಾಣಪತ್ರದಲ್ಲಿ ಮೂಲ ಜಾತಿಯನ್ನೇ ನಮೂದಿಸುತ್ತಿದ್ದಾರೆ. ಅಲ್ಲದೆ, ದಾಖಲೆಗಳಲ್ಲಿರುವ ತಮ್ಮ ಹೆಸರನ್ನು ಕೂಡಾ ಬದಲಾಯಿಸಿಕೊಳ್ಳುವುದಿಲ್ಲ.

‘ಅಸ್ಪೃಶ್ಯತೆ ಸೇರಿದಂತೆ ಸಾಮಾಜಿಕ ಅನಿಷ್ಟಗಳಿಂದ ಮುಕ್ತಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಕಾರಣಕ್ಕೆ ಪರಿಶಿಷ್ಟರಿಗೆ ಹೆಚ್ಚಿನ ಮೀಸಲಾತಿ, ಇತರ ಪ್ರತ್ಯೇಕ ಸೌಲಭ್ಯಗಳನ್ನು ಸಂವಿಧಾನದಡಿಯಲ್ಲಿ ಕಲ್ಪಿಸಲಾಗಿದೆ. ಒಮ್ಮೆ ಧರ್ಮ ಬದಲಾಯಿಸಿದರೆ, ಮತಾಂತರಗೊಂಡ ಧರ್ಮದಲ್ಲಿ ಸಮಾನತೆ ಪಡೆಯುತ್ತಾರೆ. ಕ್ರೈಸ್ತ ಧರ್ಮಕ್ಕೆ ಬದಲಾದ ಅನೇಕರು ಮೀಸಲಾತಿ ಸೌಲಭ್ಯ ಉಳಿಸಿಕೊಳ್ಳಲು, ಮತಾಂತರ ಆಗಿರುವುದನ್ನು ತೋರಿಸಿಕೊಳ್ಳುವುದಿಲ್ಲ. ನಿಯಮದ ಪ್ರಕಾರ, ಧರ್ಮ ಬದಲಾಯಿಸಿದರೆ ಮೀಸಲಾತಿ ಕಳೆದುಕೊಳ್ಳುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಮೇಲ್ವರ್ಗದವರು ಕೂಡಾ ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ, ಧಾರ್ಮಿಕವಾಗಿ ಅಲ್ಪಸಂಖ್ಯಾತರಾಗುತ್ತಾರೆ. ‌ಮತಾಂತರ ಆಗಿದ್ದೇನೆ ಎಂದು ದಾಖಲೆ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಮೀಸಲಾತಿ ಕೊಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಆದರೆ, ಪರಿಶಿಷ್ಟರು ಬೌದ್ಧ ಧರ್ಮಕ್ಕೆ ಹೋದರೆ ಮೀಸಲಾತಿ ಸೌಲಭ್ಯವನ್ನು ಉಳಿಸಿಕೊಳ್ಳುತ್ತಾರೆ. ಯಾಕೆಂದರೆ, ಬೌದ್ಧ ಧರ್ಮ ಹಿಂದೂ ಧರ್ಮದಿಂದ ಪ್ರತ್ಯೇಕವಾದುದು’ ಎಂದರು.

‘ಬೌದ್ಧ, ಸಿಖ್‌ ಮತ್ತು ಹಿಂದೂ ಧರ್ಮದಲ್ಲಿ ಪರಿಶಿಷ್ಟರಿದ್ದಾರೆ. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳ್ಳುವವರ ಪೈಕಿ ಶೇಕಡಾ 80ರಷ್ಟು ಮಂದಿ ಪರಿಶಿಷ್ಟರು. ಉಳಿದ ಶೇ 20ರಷ್ಟು ಮಂದಿ ಇತರ ಧರ್ಮದವರು. ಆದರೆ, ಮತಾಂತರದಿಂದ ಸಾಮಾಜಿಕವಾಗಿ ಸ್ಥಾನಮಾನ ಪಡೆದು, ಗುರುತಿಸಿಕೊಳ್ಳಲು ಪರಿಶಿಷ್ಟರಿಗೆ ಸಹಾಯ ಆಗುತ್ತದೆ. ಹೀಗಾಗಿ, ಧರ್ಮ ಬದಲಿಸಿಕೊಂಡರೂ ಅದನ್ನು ತೋರಿಸಿಕೊಳ್ಳದೆ ಜಾತಿ ಕಾಲಂನಲ್ಲಿ ತಮ್ಮ ಮೂಲ ಜಾತಿಯನ್ನೇ (ಎಸ್‌ಸಿ, ಎಸ್‌ಟಿ) ನಮೂದಿಸುತ್ತಾರೆ. ಜೊತೆಗೆ, ಎಲ್ಲ ಮೀಸಲಾತಿ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತಾರೆ.’

‘ಇತ್ತೀಚೆಗೆ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ‘ಮರಳಿ ಮನೆಗೆ’ ಎಂದು ಬೌದ್ಧ ಧರ್ಮದ ಕಡೆಗೆ ಹೋಗುತ್ತಿದ್ದಾರೆ. ಕೆಲವು ಕಡೆ ಪರಿಶಿಷ್ಟರು ಸಾಮೂಹಿಕವಾಗಿ ಬೌದ್ಧ ಧರ್ಮದ ಕಡೆಗೆ ಮುಖ ಮಾಡುತ್ತಿದ್ದಾರೆ. ಅದು ಮತಾಂತರ ಅಲ್ಲ, ಧರ್ಮ ಬದಲಾಯಿಸಿದರೆ ಮಾತ್ರ ಮತಾಂತರವಾಗುತ್ತದೆ. ಮತಾಂತರ ಕಾಯ್ದೆ ತರುವ ಹಿಂದೆ, ಮೀಸಲಾತಿ ರದ್ದುಗೊಳ್ಳಲಿದೆ ಎನ್ನುವ ಬೆದರಿಸುವ ತಂತ್ರವಿದೆ ಎಂಬ ಆರೋಪವೂ ಇದೆ. ಮತಾಂತರ ವಿಷಯ ಕೇಂದ್ರ ಸರ್ಕಾರದ ನೀತಿ. ರಾಜ್ಯ ಸರ್ಕಾರ ಏನೂ ಮಾಡಲು ಬರುವುದಿಲ್ಲ’ ಎಂದೂ ಅವರು ಹೇಳಿದರು.

ಮತಾಂತರವಾದರೆ...
‘ಪರಿಶಿಷ್ಟರನ್ನು ಹೊರತುಪಡಿಸಿ ಇತರ ಜಾತಿಯವರು ಮತಾಂತರವಾದರೆ ಯಾವ ಜಾತಿ ಮೀಸಲಾತಿಯ ಪ್ರಮಾಣ ಅನ್ವಯ ಆಗಲಿದೆ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಸದ್ಯದ ಜಾತಿ ಮೀಸಲಾತಿ ಪ್ರಮಾಣದ ಪ್ರಕಾರ ಪ್ರವರ್ಗ 1ರಲ್ಲಿ ಶೇ 4, ಪ್ರವರ್ಗ 2ಎಯಲ್ಲಿ ಶೇ 15, 3ಎಯಲ್ಲಿ ಶೇ 4, ಪ್ರವರ್ಗ 3 ಬಿಯಲ್ಲಿ ಶೇ 5ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಪ್ರವರ್ಗದಲ್ಲಿರುವವರು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ, ಧಾರ್ಮಿಕ ಅಲ್ಪಸಂಖ್ಯಾತರಿರುವ ಪ್ರವರ್ಗ 2ಬಿಯಲ್ಲಿರುವ ಶೇ 4 ಮೀಸಲಾತಿಯನ್ನೇ ನೀಡಬೇಕಾಗುತ್ತದೆಯೇ ಎನ್ನುವ ಬಗ್ಗೆ ಗೊಂದಲವಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಪರಿಶಿಷ್ಟರು ಮತಾಂತರವಾದರೆ ಮೂಲ ಜಾತಿಯಲ್ಲಿ ಇದ್ದಾಗ ಅರ್ಹವಾಗಿ ಪಡೆಯುತ್ತಿದ್ದ ಮೀಸಲಾತಿ ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ. ಅಂಥವರು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ತಿದ್ದುಪಡಿ 2015) ವ್ಯಾಪ್ತಿಯಿಂದ ಹೊರಗುಳಿಯಲಿದ್ದಾರೆ. ಜೊತೆಗೆ, ಆಶ್ರಯ, ಅಂಬೇಡ್ಕರ್‌ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಲಭ್ಯ ಸಹಾಯಧನ, ರಿಯಾಯಿತಿಗಳನ್ನು ಪಡೆಯಲು ಕೂಡಾ ಅನರ್ಹರಾಗುತ್ತಾರೆ’ ಎಂದೂ ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು