ಬುಧವಾರ, ಜೂನ್ 29, 2022
24 °C
ಪ್ರೇಮಾ ಸೇರಿದಂತೆ ಮೂವರು ಲೇಖಕಿಯರಿಗೆ ‘ಪುಸ್ತಕ ಪ್ರಶಸ್ತಿ’

ಲೇಖಕಿಯರ ಸಂಘದ ದತ್ತಿ ಪ್ರಶಸ್ತಿಗಳು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ 2020ನೇ ಸಾಲಿನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳು ಪ್ರಕಟವಾಗಿದ್ದು, ಡಾ.ಎಚ್‌.ಎಸ್. ಪ್ರೇಮಾ ಸೇರಿದಂತೆ ಮೂವರು ಲೇಖಕಿಯರು ‘ಪುಸ್ತಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ ಅವರು ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದಾರೆ. ಪ್ರೇಮಾ ಅವರ ‘ಇಮ್ಯುನಿಟಿಗಾಗಿ ಆಹಾರ’ ವಿಜ್ಞಾನ ಕೃತಿ ‘ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗೆ, ಮಂಜುಳಾ ರಾಜ್ ಅವರ ‘ಜನರೇಶನ್ ಗ್ಯಾಪ್’ ಲಲಿತ ಪ್ರಬಂಧ ‘ನಾಗರತ್ನ ಚಂದ್ರಶೇಖರ ದತ್ತಿ ಪ್ರಶಸ್ತಿ’ಗೆ ಹಾಗೂ ಪ್ರೊ.ಬಿ.ವೈ. ಲಲಿತಾಂಬ ಅವರ ‘ಮೇಘರಾಗ’ ಅನುವಾದಿತ ಕಾದಂಬರಿ ‘ಜಿ.ವಿ. ನಿರ್ಮಲ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿವೆ. 

ಧಾರವಾಡದ ಲಲಿತಾ ಕೆರಿಮನಿ, ಬೆಂಗಳೂರಿನ ವಿಜಯಾ ಗುರುರಾಜ್, ಕಲಬುರಗಿಯ ಕಾವ್ಯಶ್ರೀ ಮಹಾಗಾಂವಕರ್, ಬೆಂಗಳೂರಿನ ಡಾ. ಪದ್ಮಿನಿ ನಾಗರಾಜು, ಹಾಸನದ ಶೈಲಜಾ ಹಾಸನ, ಮುಂಬೈನ ಗಿರಿಜಾ ಶಾಸ್ತ್ರಿ, ಬೆಂಗಳೂರಿನ ಗಾಯತ್ರಿ ರಾಮಣ್ಣ, ದಾವಣಗೆರೆಯ ಮಲ್ಲಮ್ಮ ನಾಗರಾಜ್, ಬೆಳಗಾವಿಯ ದೀಪಿಕಾ ಚಾಟೆ ಹಾಗೂ ಉತ್ತರ ಕನ್ನಡದ ಭಾಗೀರಥಿ ಹೆಗಡೆ ಅವರು ‘ವಿಶಿಷ್ಟ ಲೇಖಕಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

‘ಗೀತಾ ದೇಸಾಯಿ ದತ್ತಿನಿಧಿ ಬಹುಮಾನ’ಕ್ಕೆ ಡಾ. ರಾಧಾ ಕುಲಕರ್ಣಿ ಅವರ ‘ವೈಚಾರಿಕ ಅಭಿವ್ಯಕ್ತಿ’ ಕೃತಿ, ‘ಕಾಕೋಳು ಸರೋಜಮ್ಮ ಕಾದಂಬರಿ ಬಹುಮಾನ’ಕ್ಕೆ ಮಾಧುರಿಕೃಷ್ಣ ಅವರ ‘ಅಸ್ತಮಾನದ ಅಂಚಿನಲ್ಲಿ’ ಕಾದಂಬರಿ, ‘ಸುಧಾಮೂರ್ತಿ ದತ್ತಿನಿಧಿ ತ್ರಿವೇಣಿ ಸಾಹಿತ್ಯ ಪುರಸ್ಕಾರ’ಕ್ಕೆ ಮೀನಾ ಮೈಸೂರು ಅವರ ‘ಲೋಕ ಪಾವನಿ’ ಕಥಾ ಸಂಕಲನ, ‘ಕಮಲಾ ರಾಮಸ್ವಾಮಿ ದತ್ತಿನಿಧಿ ಬಹುಮಾನ’ಕ್ಕೆ ಎಂ. ಜಾನಕಿ ಬ್ರಹ್ಮಾವರ ಅವರ ‘ರಷ್ಯಾದಲ್ಲಿ ಏಳು ದಿನಗಳು’ ‍‍ಪ್ರವಾಸ ಸಾಹಿತ್ಯ, ‘ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ’ಕ್ಕೆ ಮಾಲತಿ ಮುದಕವಿ ಅವರ ‘ಹಾಸ್ಯ ರಂಗೋಲಿ’ ಹಾಸ್ಯ ಕೃತಿ, ಗುಣಸಾಗರಿ ನಾಗರಾಜು ಮಕ್ಕಳ ಸಾಹಿತ್ಯ ದತ್ತಿನಿಧಿ ಬಹುಮಾನ’ಕ್ಕೆ ಡಾ.ಕೆ.ಎಸ್. ಚೈತ್ರಾ ಅವರ ‘ಕಾಮನಬಿಲ್ಲಿನ ಕೊಡೆ ಮತ್ತು ಇತರ ಕಥೆಗಳು’ ಮಕ್ಕಳ ಸಾಹಿತ್ಯ ಕೃತಿ ಆಯ್ಕೆಯಾಗಿವೆ. 

‘ಇಂದಿರಾ ವಾಣಿರಾವ್ ದತ್ತಿನಿಧಿ ಬಹುಮಾನ’ಕ್ಕೆ ಸುಶೀಲಾ ಆರ್‌. ರಾವ್ ಅವರ ‘ಅಮ್ಮಂದಿರ ಆಂದೋಲನ’ ನಾಟಕ, ‘ಡಾ.ಜಯಮ್ಮ ಕರಿಯಮ್ಮ ದತ್ತಿನಿಧಿ ಬಹುಮಾನ’ಕ್ಕೆ ಶಾಂತಿ ನಾಯಕ ಅವರ ‘ಕೆಸು ಪುರಾಣ ಮತ್ತು ವಾಸ್ತವ’ ಸಂಶೋಧನಾ ಕೃತಿ, ‘ಬ.ನ. ಸುಂದರರಾವ್ ದತ್ತಿನಿಧಿ ಬಹುಮಾನ’ಕ್ಕೆ ಡಾ. ಸುಕನ್ಯಾ ಪ್ರಭಾಕರ್ ಅವರ ‘ಹರಿಯನ್ನರಸಿದ ವನಿತೆಯರು’ ಕೃತಿ, ‘ಉಮಾದೇವಿ ಶಂಕರರಾವ್ ದತ್ತಿನಿಧಿ ಬಹುಮಾನ’ಕ್ಕೆ ಉಮಾ ಪ್ರಕಾಶ್ ಶೆಟ್ಟಿ ಅವರ ‘ತೆರೆಯೋ ಬಾಗಿಲನು...’, ‘ನಿರುಪಮಾ ಕಥಾ ಸ್ಪರ್ಧೆ ಬಹುಮಾನ’ಕ್ಕೆ ಜಯಶ್ರೀ ದೇಶಪಾಂಡೆ ಅವರ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಸಣ್ಣಕಥೆ ಹಾಗೂ ‘ಡಾ.ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನ’ಕ್ಕೆ ಎಡೆಯೂರು ಪಲ್ಲವಿ, ಗೀತಾ ಲಕ್ಷ್ಮಿ ಎಲ್., ಮರಿಯಾಂಬಿ, ಅನು ಗೋವೇನಹಳ್ಳಿ ಮತ್ತು ಸುಕನ್ಯಾ ಶಿವಶಂಕರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು