ಸೋಮವಾರ, ಮೇ 23, 2022
21 °C

ಹೆಚ್ಚುವರಿಯಾಗಿ 2 ಲಕ್ಷ ಟನ್‌ ರಾಗಿ ಖರೀದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರೈತರಿಂದ 2 ಲಕ್ಷ ಟನ್‌ ರಾಗಿ ಹೆಚ್ಚುವರಿಯಾಗಿ ಖರೀದಿಸಲು ಆದೇಶ ಹೊರಡಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಬೆಳಿಗ್ಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ರಾಗಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಶುಕ್ರವಾರದಿಂದಲೇ ನೋಂದಣಿ ಆರಂಭಿಸಲು ಆದೇಶ ನೀಡಲಾಗಿದೆ. ನೋಂದಣಿಯ ಬಳಿಕ ಖರೀದಿ ಆರಂಭವಾಗಲಿದೆ’ ಎಂದರು.

‘ಬಜೆಟ್‌ ಘೋಷಣೆಯ ಯೋಜನೆಗಳ ಬಗ್ಗೆ ಇವತ್ತು ಕೂಡಾ ಸಭೆ ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನಕ್ಕೆ ಹಲವು ಸಲಹೆ, ಸೂಚನೆಗಳನ್ನು ಮತ್ತು ಕಾಲಮಿತಿಯನ್ನು ಕೊಟ್ಟಿದ್ದೇನೆ’ ಎಂದರು.

ನಿಷ್ಠುರ ತನಿಖೆ: ‘ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಯಾವ ಯಾವ ದೂರು ಬರುತ್ತದೆ ಎಲ್ಲವನ್ನೂ ಪರಿಗಣಿಸುತ್ತೇವೆ. ದಾಖಲೆಗಳನ್ನು ಪರಿಶೀಲಿಸಿ, ಅದನ್ನೂ ತನಿಖೆ ಮಾಡುತ್ತೇವೆ.ಮುಕ್ತವಾದ, ನಿಷ್ಪಕ್ಷಪಾತವಾದ, ನಿಷ್ಠುರವಾದ ತನಿಖೆ ಆಗಬೇಕು ಎನ್ನುವುದು ಸರ್ಕಾರ ನಿಲುವು. ಹಲವು ಅಧಿಕಾರಗಳ ಸಮೇತ ಕಾರ್ಯಾಚರಣೆ ಮಾಡುತ್ತಿದ್ದೇವೆ‘ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ದಿವ್ಯಾ ಹಾರಗಿಯಷ್ಟೆ ಅಲ್ಲ. ಇನ್ನೂ ಹಲವರು ಈ ಪ್ರಕರಣದಲ್ಲಿ ಇದ್ದಾರೆ. ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ.  ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇ ಅದಕ್ಕೆ ಸಾಕ್ಷಿ’ ಎಂದರು

ಆಧಾರರಹಿತ ಆರೋಪ: ‘ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಬಗ್ಗೆ ಕಾಂಗ್ರೆಸ್‌ನವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವಾಗ ಸಣ್ಣ ಸಾಕ್ಷ್ಯವಾದರೂ ಬೇಕು. ಆದರೆ, ಜವಾಬ್ದಾರಿಯುತ ಪಕ್ಷವಾದ ಕಾಂಗ್ರೆಸ್‌ ಹಿಟ್‌ ಆ್ಯಂಡ್‌ ರನ್‌ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಅವಧಿಯಲ್ಲಿ ಹಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಆ ಸಂದರ್ಭದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಪಕ್ಷದ ಕೆಲವರ ಬಂಧನ ಆಗಿದೆ. ಎಲ್ಲಿ ಅವರ ಬಣ್ಣ ಬಯಲಾಗುತ್ತದೊ ಎಂದು ಹೆದರಿ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಮಾತಿಗೆ ಕಿಂಚಿತ್ತೂ ಬೆಲೆ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು