ಬುಧವಾರ, ಅಕ್ಟೋಬರ್ 28, 2020
28 °C
ಕರ್ನಾಟಕ ಭವನದ ಹೊಸ ಕಟ್ಟಡ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ

ಕರ್ನಾಟಕ ಭವನ ಎರಡನೇ ಬಾರಿ ಶಿಲಾನ್ಯಾಸ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವದೆಹಲಿಯ ಕರ್ನಾಟಕ ಭವನದ ನಂ.1 (ಕಾವೇರಿ) ಹೊಸ ಕಟ್ಟಡದ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಿದ್ದು, ಸ್ವತಃ ಯಡಿಯೂರಪ್ಪ ಅವರೇ ಈ ಹಿಂದೆ ಕಟ್ಟಡದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

ಈ ಕಟ್ಟಡದ ನಿರ್ಮಾಣಕ್ಕೆ 2019 ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಭೂಮಿ ಪೂಜೆ ನೆರವೇರಿತ್ತು. ಆಗ
ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಅವರೂ ಆಕಸ್ಮಾತ್‌ ಆಗಿ ಅಡಿಗಲ್ಲು ಹಾಕಬೇಕಾದ ಪ್ರಸಂಗ ಒದಗಿ ಬಂದಿತ್ತು.

ಕರ್ನಾಟಕ ಭವನದ ಹಳೇ ಕಟ್ಟಡ ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ದರಾಮಯ್ಯ ಸರ್ಕಾರ ಅನುಮೋದನೆ ನೀಡಿತ್ತು. ಆ ಬಳಿಕ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಹೊಸ ಕಟ್ಟಡದ ಯೋಜನೆಗೆ ಅನುಮತಿ ನೀಡಿ, 2019 ರ ಮಾರ್ಚ್‌ 8 ರ ಸಂಜೆ ಭೂಮಿ ಪೂಜೆಯ ದಿನಾಂಕ ನಿಗದಿ ಮಾಡಲಾಗಿತ್ತು.

ಆದರೆ, ಅಂದಿನ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು, ಸಂಜೆಯ ಮುಹೂರ್ತ ಸರಿಯಿಲ್ಲ. ಬೆಳಿಗ್ಗೆ
ಮುಹೂರ್ತ ಒಳ್ಳೆಯದಿದ್ದು, ಆಸಮಯಕ್ಕೆ ಭೂಮಿ ಪೂಜೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿ ಕಾರ್ಯಕ್ರಮದ ಸಮಯ ಬದಲಾಯಿಸಿದ್ದರು.

ಮಾರ್ಚ್‌ 8 ರ ಬೆಳಿಗ್ಗೆ ರೇವಣ್ಣ ಅವರು ಭೂಮಿ ಪೂಜೆ ನಡೆಸಲು ಪುರೋಹಿತರ ಜತೆ ಬಿಜಿಯಾಗಿದ್ದರು. ಯಡಿಯೂರಪ್ಪ ಅವರು ಬೇರೆ ಕೆಲಸದ ನಿಮಿತ್ತ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿದ್ದರು. ಅವರು ಬೆಳಿಗ್ಗೆ ಕರ್ನಾಟಕ ಭವನದ ಆವರಣದಲ್ಲಿ ವಾಯುವಿಹಾರಕ್ಕೆ‌ ಹೊರಟಿದ್ದರು. ಇದನ್ನು ನೋಡಿದ ರೇವಣ್ಣ ಅವರು ತಕ್ಷಣವೇ ಯಡಿಯೂರಪ್ಪ ಅವರನ್ನು ಕರೆದು ಅಡಿಗಲ್ಲು ಹಾಕುವಂತೆ ಮನವಿ ಮಾಡಿದರು.

ಆಹ್ವಾನ ಪತ್ರಿಕೆಯಲ್ಲಿ ಯಡಿಯೂರಪ್ಪ ಅವರ ಹೆಸರೂ ಇರಲಿಲ್ಲ. ಆದರೂ ರೇವಣ್ಣ ಅವರ ಒತ್ತಾಯಕ್ಕೆ ಮಣಿದು ಅಡಿಗಲ್ಲು ಹಾಕಿದರು. ಅದೇ ದಿನ ಸಂಜೆ ಕುಮಾರಸ್ವಾಮಿ ಅವರು ಸರ್ಕಾರದ ಕಾರ್ಯಕ್ರಮದ ಪ್ರಕಾರ, ಕಟ್ಟಡ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿದರು.

ಕಟ್ಟಡದ ಹಿಂದಿನ ಅಂದಾಜು ವೆಚ್ಚ ₹82 ಕೋಟಿ. ಬಿಜೆಪಿ ಸರ್ಕಾರ ಹೊಸ ವಿನ್ಯಾಸದೊಂದಿಗೆ ₹120 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು