ಮಂಗಳವಾರ, ಜನವರಿ 25, 2022
24 °C
‘ಮುಖ್ಯಮಂತ್ರಿ’ ಬದಲು ವದಂತಿಗೆ ರೆಕ್ಕೆಪುಕ್ಕ ನೀಡಿದ ಸಚಿವ ಈಶ್ವರಪ್ಪ ?

‘ಮುಖ್ಯಮಂತ್ರಿ’ ಬದಲು ವದಂತಿ | ಹೊಣೆ ನಿಭಾಯಿಸುವೆ–ನಿರಾಣಿ; ಅಪ್ರಸ್ತುತ–ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುರುಗೇಶ ನಿರಾಣಿ

ಬೆಂಗಳೂರು: ‘ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಆದಷ್ಟು ಬೇಗ ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಯಿಂದ, ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ವದಂತಿಗೆ ಮತ್ತೆ ರೆಕ್ಕಪುಕ್ಕ ಬಂದಿದೆ.

ಬಿಟ್‌ ಕಾಯಿನ್‌ ಹಗರಣ, ವಿವಿಧ ಕಾಮಗಾರಿಗಳ ಟೆಂಡರ್‌ ಮೊತ್ತದಲ್ಲಿ ಶೇ 40ರಷ್ಟು ಕಮಿಷನ್‌ ಹೋಗುತ್ತಿದೆ ಎಂದು ಆರೋಪಿಸಿ ಪ್ರಧಾನಿಗೆ ಗುತ್ತಿಗೆದಾರರ ಸಂಘ ಬರೆದ ಪತ್ರ ಬಹಿರಂಗಗೊಂಡ ಬೆನ್ನಲ್ಲೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಲಾಗುತ್ತದೆ ಎಂಬ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ  ಶುರುವಾಗಿದೆ ಎಂಬ ಸುದ್ದಿ ಹರಡಿತ್ತು. ಈಗ ಈಶ್ವರಪ್ಪ ಆಡಿರುವ ಮಾತು, ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಮುರುಗೇಶ ನಿರಾಣಿ, ‘ಹಿರಿಯರಾದ ಈಶ್ವರಪ್ಪನವರು ನಾನು ಮುಖ್ಯಮಂತ್ರಿ ಆಗುತ್ತೇನೆಂದು ಅಭಿಮಾನ ಪೂರ್ವಕವಾಗಿ ಹೇಳಿರಬಹುದು. ಅವರು ಹಾಗೆ ಹೇಳಿದ್ದಕ್ಕೆ ಋಣಿ. ಆದರೆ, ನನ್ನ ಹಿರಿಯ ಅಣ್ಣ
ನಂತಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದರು.

‘ಬಸವರಾಜ ಬೊಮ್ಮಾಯಿ ಅವರು ನಮಗೆ ಸಹಕಾರ ಕೊಡುತ್ತಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯಲ್ಲಿ ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ. 2023ಕ್ಕೆ 150 ಸ್ಥಾನಗಳ ಗೆದ್ದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವುದು ನಮ್ಮ ಗುರಿ’ ಎಂದರು.

‘2023ರಲ್ಲಾದ್ರೂ ನಿರಾಣಿ ಸಿಎಂ ಆಗಬಹುದಾ’ ಎಂಬ ಪ್ರಶ್ನೆಗೆ, ‘ಹಾಗೊಂದು ವೇಳೆ ಮುಂದೆ ನನ್ನನ್ನು ಮುಖ್ಯಮಂತ್ರಿ ಮಾಡಿದರೂ 2028ರ ನಂತರವೇ. ಪಕ್ಷದ ಹಿರಿಯರು ಕೊಡುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಿದ್ದೇನೆ’ ಎಂದರು.

ಅಪ್ರಸ್ತುತ: ವಿಜಯಪುರದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಮುಖ್ಯಮಂತ್ರಿ ಬದಲಾವಣೆ ವಿಷಯ ಅಪ್ರಸ್ತುತ. ಬೊಮ್ಮಾಯಿ ದಕ್ಷವಾಗಿ ಆಡಳಿತ ನಡೆಸುತ್ತಿದ್ದಾರೆ’ ಎಂದರು.

‘ಕೋವಿಡ್‌, ನೆರೆ ಸೇರಿದಂತೆ ಸಂಕಷ್ಟಗಳಿವೆ. ಈಗ ಜನರಿಗೆ ನೆರವಾಗಬೇಕಾಗಿರುವುದು ಮುಖ್ಯವೇ ಹೊರತು, ಮುಖ್ಯಮಂತ್ರಿ ಬದಲಾವಣೆ ವಿಷಯವಲ್ಲ’ ಎಂದು ಈಶ್ವರಪ್ಪ ಅವರಿಗೆ ಕಿವಿಮಾತು ಹೇಳಿದರು.

‘ಬೊಮ್ಮಾಯಿ ರಾಜೀನಾಮೆ ಕೊಡಲಿ’

ವಿಜಯಪುರ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಂಪುಟದ ಸಚಿವರಿಗೇ ವಿಶ್ವಾಸ ಇಲ್ಲ ಎಂದಾದ ಮೇಲೆ ಅವರು ರಾಜೀನಾಮೆ ಕೊಟ್ಟು ಹೊರಬರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

ಈಶ್ವರಪ್ಪ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಶಾಸಕರು, ಸಚಿವರು ವಿಶ್ವಾಸ ಇಲ್ಲ ಎಂದಾಗ ಅವರು ರಾಜೀನಾಮೆ ನೀಡಿದರು. ಅದೇ ರೀತಿ ಬೊಮ್ಮಾಯಿ ಮೇಲೂ ಸಚಿವರು, ಶಾಸಕರಿಗೆ ವಿಶ್ವಾಸ ಇಲ್ಲ ಎಂದಾದ ಮೇಲೆ ಅವರು ಆ ಜಾಗದಲ್ಲಿ ಇರಬಾರದು’ ಎಂದರು.

‘ಮೊದಲಿನಿಂದಲೂ ಬಿಜೆಪಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಜನರ ನೋವು ಗೊತ್ತಿಲ್ಲ. ಬಿಜೆಪಿಯಲ್ಲಿ ಒಬ್ಬರಿಗಿಂತ ಒಬ್ಬರಿಗೆ ಅಧಿಕಾರ ದಾಹ ಜಾಸ್ತಿ ಇದೆ’ ಎಂದು ಟೀಕಿಸಿದರು.

* ಮುಂದಿನ ಮುಖ್ಯಮಂತ್ರಿ ಮುರುಗೇಶ ನಿರಾಣಿ ಎಂದು ತಮಾಷೆಗೆ ಹೇಳಿರುವುದಾಗಿ ಈಶ್ವರಪ್ಪ ಅವರೇ ತಿಳಿಸಿದ್ದಾರೆ. ಅದರ ಬಗ್ಗೆ ಮತ್ಯಾಕೆ ಪ್ರತಿಕ್ರಿಯೆ.

-ಬಿ.ಎಸ್‌. ಯಡಿಯೂರಪ್ಪ, ಶಾಸಕ

* ಮುಂದಿನ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ ಹೊರತು ಈಗಲೇ ಅಲ್ಲ. ನಾಳೆಯೇ ಆಗುತ್ತಾರೆ ಎಂದು ಹೇಳಿಲ್ಲ.

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು