ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌–ರಷ್ಯಾ ಸಂಘರ್ಷ: ಬಂಕರ್‌ಗಳಲ್ಲಿ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರು

ನೆರವಿಗೆ ಮನವಿ ಮಾಡಿದ ವಿದ್ಯಾರ್ಥಿಗಳು
Last Updated 28 ಫೆಬ್ರುವರಿ 2022, 0:55 IST
ಅಕ್ಷರ ಗಾತ್ರ

ನವದೆಹಲಿ: ಯುದ್ಧಪೀಡಿತ‌ ಉಕ್ರೇನ್ ನ ಕಾರ್ಖೀವ್ ನಗರದಲ್ಲಿನ ಮೆಟ್ರೋ ನಿಲ್ದಾಣದ ಬಂಕರ್ ಗಳಲ್ಲಿ ಆಶ್ರಯ ಪಡೆದಿರುವ ಸಾವಿರಾರು ಭಾರತೀಯರ‌ ಪೈಕಿ ರಾಜ್ಯದ 250ಕ್ಕೂ‌ಅಧಿಕ ವಿದ್ಯಾರ್ಥಿಗಳು ಇದ್ದಾರೆ.

ರಷ್ಯಾದ ಕ್ಷಿಪಣಿ ದಾಳಿಯಿಂದ ರಕ್ಷಣೆ ಪಡೆಯಲೆಂದು ಬಂಕರ್ ಗಳಲ್ಲೇ ಕಳೆದ ಮೂರು ದಿನಗಳಿಂದ‌ ಕಾಲ ಕಳೆಯುತ್ತಿರುವ‌ ಅವರು, ಆಹಾರ, ಕುಡಿಯುವ ನೀರು ಶುದ್ಧ ಗಾಳಿ ದೊರೆಯದೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ವಿದ್ಯಾರ್ಥಿನಿಯರಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗಿದ್ದು, ನೈಸರ್ಗಿಕ ಕರೆಗೆ‌ ಓಗೊಡುವುದಕ್ಕೂ ಆಗದೆ‌ ಜೀವವನ್ನು ಕೈಲಿ ಹಿಡಿದು ಕಾಲ ಕಳೆಯುವಂತಾಗಿದೆ. ಬಂಕರ್ ಗಳಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲದ್ದರಿಂದ ಅಲ್ಲಿರುವ ಸಾವಿರಾರು ಜನರ‌ ಪೈಕಿ ಒಬ್ಬರ ಮುಖ ಒಬ್ಬರಿಗೆ ಕಾಣದೆ ಪರದಾಡುವಂತಾಗಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಕೆಲವು ಹಿರಿಯ ವಿದ್ಯಾರ್ಥಿಗಳು ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಕಳುಹಿಸಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರಾಯಭಾರಿ ಕಚೇರಿ ಸಿಬ್ಬಂದಿಗೆ‌ ಸೂಚಿಸಿ‌ ಆದಷ್ಟು ಶೀಘ್ರ ತೆರವಿಗೆ‌ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಎರಡು ಮೂರು ಬಾರಿ ಸ್ಪೋಟ‌ ಸಂಭವಿಸಿದ್ದರಿಂದ‌ ಜೀವ ಉಳಿಯುವ ಸಾಧ್ಯತೆಯೂ ಕ್ಷೀಣಿಸಿದೆ ಎಂದು ರಾಜ್ಯ ಮೂಲದ ಸುಮನ್ ಶೇಖರ್, ನೇಹಾ, ಲೇಖನಾ ಮತ್ತಿತರರು ಅಳಲು ತೋಡಿಕೊಂಡಿದ್ದಾರೆ.

ಕಾರ್ಖೀವ್ ಮತ್ತು ಕೀವ್ ನಗರಗಳಲ್ಲೇ 3500ಕ್ಕೂ ಹೆಚ್ಚು ಭಾರತೀಯರಿದ್ದು, ಕರ್ನಾಟಕ ಮೂಲದವರ ಸಂಖ್ಯೆಯೂ ಅಧಿಕವಾಗಿದೆ. ಪೋಲಂಡ್, ಹಂಗರಿ, ಸ್ಲೋವಾಕಿಯಾ ಮತ್ತು ರೋಮೆನಿಯಾ‌ ಗಡಿಗಳ ಮೂಲಕ ಸ್ವದೇಶಕ್ಕೆ‌ ತೆರಳುವಂತೆ ಇಲ್ಲಿನ ಸರ್ಕಾರ ಹಾಗೂ ಭಾರತ ಸರ್ಕಾರಗಳು ಹೇಳುತ್ತಿವೆ. ಆದರೆ, ಆ ದೇಶಗಳ ಗಡಿ ತಲುಪಲು ಕನಿಷ್ಠ ಸಾವಿರದಿಂದ ಸಾವಿರದ ಐನೂರು ಕಿಲೋ ಮೀಟರ್ ರಸ್ತೆ ಪ್ರಯಾಣ ಮಾಡಬೇಕಿದೆ. ಅಷ್ಟು ದೂರ‌ ಸಾಗಲು ಸಾರಿಗೆ ಸೌಲಭ್ಯವೂ ಇಲ್ಲ. ಮಾರ್ಗ ಮಧ್ಯೆ ರಕ್ಷಣೆಯೂ ಇಲ್ಲ. ಕೂಡಲೇ ಸರ್ಕಾರ ಗಮನ ಹರಿಸುವ ಮೂಲಕ ನಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಈ‌ ಸಂಬಂಧ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ‌ ಪತ್ರ‌ ಬರೆದು ಮನವಿ ಮಾಡಿದ್ದು,‌ ಕೂಡಲೇ ಭಾರತೀಯರ, ಕನ್ನಡಿಗರ‌ನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಆದ್ಯತೆ ‌ನೀಡುವಂತೆ‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT