ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪ್ರಕರಣ: ಅಜ್ಞಾತ ಸ್ಥಳ ಸೇರಿದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ

Last Updated 6 ಮಾರ್ಚ್ 2023, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಕಚ್ಚಾವಸ್ತು ಖರೀದಿ ಟೆಂಡರ್‌ ಪ್ರಕ್ರಿಯೆಯಲ್ಲಿನ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ಎದುರು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ.

ಲಂಚ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್‌ ಮಾಡಾಳ್‌ ಅವರನ್ನು ಗುರುವಾರ ಸಂಜೆ ಲೋಕಾ
ಯುಕ್ತ ಪೊಲೀಸರು ಬಂಧಿಸಿದ್ದರು. ಆಗಿನಿಂದಲೂ ತಲೆಮರೆಸಿಕೊಂಡಿರುವ ಶಾಸಕರು, ಲೋಕಾಯುಕ್ತ ಪೊಲೀಸರ ಎದುರು ವಿಚಾರಣೆಗೆ ಹಾಜರಾಗದೇ ಸತಾಯಿಸುತ್ತಿದ್ದಾರೆ. ನಾಲ್ಕು ದಿನಗಳಿಂದ ಅವರ ಪತ್ತೆಗಾಗಿ ಪ್ರಯತ್ನ ನಡೆಸುತ್ತಿರುವ ತನಿಖಾ ತಂಡಕ್ಕೆ ಯಶ ಲಭಿಸಿಲ್ಲ.

‘ಸೋಮವಾರ ಕೂಡ ಕೆಲವು ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಆದರೆ, ವಿರೂಪಾಕ್ಷಪ್ಪ ಅವರ ಸುಳಿವು ಸಿಕ್ಕಿಲ್ಲ. ಆರೋಪಿಯ ಪತ್ತೆಗೆ ಪ್ರಯತ್ನ ಮುಂದುವರಿದಿದೆ’ ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧೆಡೆ ವಶಕ್ಕೆ ಪಡೆದಿರುವ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿ, ವರದಿ ಸಿದ್ಧಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರಕರಣದ ಆಳಕ್ಕಿಳಿದು ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಸೂಚನೆ ನೀಡಿದ್ದು, ಅದಕ್ಕೆ ಪೂರಕವಾಗಿ ಟೆಂಡರ್‌ ಪ್ರಕ್ರಿಯಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐವರ ವಶಕ್ಕೆ ಕೋರಿ ನ್ಯಾಯಾಲಯಕ್ಕೆ ಅರ್ಜಿ
ಲಂಚ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌, ಅವರ ಖಾಸಗಿ ಕಚೇರಿ ಅಕೌಂಟೆಂಟ್‌ ಸುರೇಂದ್ರ, ಸಂಬಂಧಿ ಸಿದ್ದೇಶ್‌ ಅಲಿಯಾಸ್‌ ಅನಿಲ್‌, ಕರ್ನಾಟಕ ಅರೋಮಾಸ್‌ ಕಂಪನಿಯ ನೌಕರರಾದ ಆಲ್ಬರ್ಟ್‌ ನಿಕೋಲಸ್‌ ಮತ್ತು ಗಂಗಾಧರ ಅವರನ್ನು ಹೆಚ್ಚಿನ ತನಿಖೆಗಾಗಿ ಏಳು ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಈ ಎಲ್ಲ ಆರೋಪಿಗಳನ್ನು ಗುರುವಾರ ಬಂಧಿಸಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎಲ್ಲರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿರುವುದು ಸೇರಿದಂತೆ ನಂತರದ ಬೆಳವಣಿಗೆಗಳ ಕುರಿತು ಪ್ರಶ್ನಿಸುವುದಕ್ಕಾಗಿ ಏಳು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡುವಂತೆ ಕೋರಲಾಗಿದೆ.

ಆರೋಪಿಗಳನ್ನು ವಶಕ್ಕೆ ಕೋರಿರುವ ಅರ್ಜಿಯನ್ನು ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ ಮಂಗಳವಾರ ವಿಚಾರಣೆ ನಡೆಸಲಿದೆ.

‘ಲೋಕಾಯುಕ್ತ ಬಿಜೆಪಿ ನಿಯಂತ್ರಣದಲ್ಲಿದೆಯೇ?’
ಬೆಂಗಳೂರು:
‘ಮನಸ್ಸು ಮಾಡಿದ್ದರೆ ಕೇಸ್ ತಡೆಯಬಹುದಾಗಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಅವರ ಮಾತನ್ನೇ ಒಪ್ಪುವುದಾದರೆ, ಲೋಕಾಯುಕ್ತ ಸಂಸ್ಥೆಯನ್ನು ಬಿಜೆಪಿಯವರು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರಾ. ತನಿಖಾ ಸಂಸ್ಥೆಗಳು ಅವರ ನಿಯಂತ್ರಣದಲ್ಲಿ ಇವೆಯೇ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

‘ಮಾಡಾಳ್ ವಿರೂಪಾಕ್ಷಪ್ಪ ಅವರ ಮೇಲಿನ ದೂರು ನಾವು ತಪ್ಪಿಸಬಹುದಿತ್ತು, ಆದರೆ ಆ ರೀತಿ ಮಾಡಿಲ್ಲ’ ಎಂಬ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಲೋಕಾಯುಕ್ತ ಸಂಸ್ಥೆ ತಮ್ಮ ನಿಯಂತ್ರಣದಲ್ಲಿದೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆ. ಬೇರೆ ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್ ಬರೆಸಿದಂತೆ ಈ ಪ್ರಕರಣದಲ್ಲಿ ಬರೆಸಲಿ ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT