ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು, ಕಲ್ಯಾಣಕ್ಕೆ ಭರ್ಜರಿ ಕೊಡುಗೆ: ₹5,701 ಕೋಟಿ ಮೊತ್ತ ಯೋಜನೆಗೆ ಒಪ್ಪಿಗೆ

₹5,701 ಕೋಟಿ ಮೊತ್ತದ 13 ಯೋಜನೆಗಳಿಗೆ ಸಂಪುಟ ಒಪ್ಪಿಗೆ
Last Updated 22 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಳಗಾವಿ: ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಬಹುದಿನಗಳ ಬೇಡಿಕೆಯಾಗಿರುವ ವಿವಿಧ ಏತ ನೀರಾವರಿ, ಕೆರೆ ತುಂಬಿಸುವ ಮಹತ್ವದ ಯೋಜನೆಗಳಿಗೆ₹5,701 ಕೋಟಿ ಅನುದಾನ ಒದಗಿಸಲು ಗುರುವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಭಾಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಬಹುಕೋಟಿ ಮೊತ್ತದ ಮಹತ್ವದಯೋಜನೆಗಳಿಗೆ ಒಪ್ಪಿಗೆ ನೀಡಿದೆ.

ಒಟ್ಟು 13 ಪ್ರಮುಖ ನೀರಾವರಿ ಯೋಜನೆಗಳಿಗೆ ಈ ಮೊತ್ತವನ್ನು ಬಳಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಯೋಜನೆಗಳು ಯಾವುದು:

*ಮೆಳ್ಳಿಗೇರಿ–ಹಲಗಲಿ ಏತ ನೀರಾವರಿ: ಬಾಗಲಕೋಟೆ ಜಿಲ್ಲೆ ಮುಧೋಳ ಮತ್ತು ಬೀಳಗಿ ತಾಲ್ಲೂಕಿನ ವ್ಯಾಪ್ತಿಯಡಿ ಬರುವ ಗಲಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನೆತ್ತಿ 3,535 ಹೆಕ್ಟೇರ್‌ ಭೂಮಿಗೆ ಮುಂಗಾರು ಹಂಗಾಮಿನ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು ಮತ್ತು 5 ಕೆರೆಗಳನ್ನು ತುಂಬಿಸುವ ಯೋಜನೆ. ₹197 ಕೋಟಿ ವೆಚ್ಚದಲ್ಲಿ 2 ಹಂತದಲ್ಲಿ ಕಾರ್ಯಗತಗೊಳಿಸಲಾಗುವುದು.

*ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನೀರಾವರಿ ವಂಚಿತ 9950 ಹೆಕ್ಟೇರ್‌ ಪ್ರದೇಶಕ್ಕೆ ಸಮುದಾಯ ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು 17 ಕೆರೆಗಳನ್ನು ತುಂಬಿಸಲು ₹1486.41 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

*ಅರಭಾವಿ ಕ್ಷೇತ್ರದ 20 ಕೆರೆಗಳನ್ನು ತುಂಬಿಸುವ ಯೋಜನೆ: ಬೆಳಗಾವಿ ಜಿಲ್ಲೆಯ ಅರಭಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 20 ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ₹323.87 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

*ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ:ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಹಾಲಿ ಇರುವ ಕಲ್ಲೋಳ–ಯಡೂರ್‌ ಬ್ಯಾರೇಜಿನ ಮೇಲ್ಭಾಗದಲ್ಲಿ ದೂದ್‌ಗಂಗಾ ನದಿಯಿಂದ ನೀರನ್ನೆತ್ತಿ ಸುಮಾರು 6,400 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ₹382.30 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.


*ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ: ಬೆಳಗಾವಿ ಜಿಲ್ಲೆ ಸವದತ್ತಿ ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕಿನ 31 ಗ್ರಾಮಗಳಿಗೆ ಸುಮಾರು 11,600 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯದ ₹520 ಕೋಟಿ ಯೋಜನೆಗೆ ಒಪ್ಪಿಗೆ.

*ಸತ್ತೀಗೇರಿ ಏತ ನೀರಾವರಿ ಯೋಜನೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ 6,678 ಹೆಕ್ಟೇರ್‌ ಕ್ಷೇತ್ರಕ್ಕೆ ಘಟಪ್ರಭಾ ನದಿ
ಪಾತ್ರದಿಂದ 0.98 ಟಿಎಂಸಿ ನೀರನ್ನು ಎತ್ತಿ ನೀರಾವರಿ ಸೌಲಭ್ಯಕ್ಕೆ ಒಳಪಡಿಸುವ ಈ ಯೋಜನೆಗೆ ₹546 ಕೋಟಿಗೆ ಒಪ್ಪಿಗೆ.

*ಔರಾದ್‌ ತಾಲ್ಲೂಕಿನ 36 ಕೆರೆಗಳ ತುಂಬಿಸುವ ಯೋಜನೆ: ಬೀದರ್‌ ಜಿಲ್ಲೆಯ ಔರಾದ ತಾಲ್ಲೂಕಿನ ಬಳತ(ಬಿ) ಹತ್ತಿರ ಹಾಳಹಳ್ಳಿ ಬ್ಯಾರೇಜ್‌ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿಎಂಸಿ ಅಡಿ ನೀರನ್ನೆತ್ತಿ 36 ಕೆರೆಗಳನ್ನು ತುಂಬಿಸುವ ₹560.70 ಕೋಟಿ ಮೊತ್ತದ ಯೋಜನಾ ವರದಿಗೆ ಒಪ್ಪಿಗೆ.

*ಮೆಹಕರ್‌ ಏತ ನೀರಾವರಿ ಯೋಜನೆ: ಬೀದರ್‌ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಜೀರಗ್ಯಾಳ ಬ್ಯಾರೇಜ್‌ ಮೇಲ್ಬಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿಎಂಸಿ ನೀರನ್ನೆತ್ತಿ 12 ಗ್ರಾಮಗಳ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ₹762 ಕೋಟಿ ಯೋಜನೆಗೆ ಒಪ್ಪಿಗೆ.

*ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ: ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮದ ಬಳಿ ಹುನಗುಂಟಾ ಗ್ರಾಮದ ಹತ್ತಿರ ಕಾಗಿಣಾ ನದಿಯ ಬಲದಂಡೆಯಲ್ಲಿ ಜಾಕ್ವೆಲ್‌ ಕಂ ಪಂಪ್‌ಹೌಸ್‌ ನಿರ್ಮಿಸಿ 1.624 ಟಿಎಂಸಿ ಅಡಿ ನೀರನ್ನೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ ₹365 ಕೋಟಿ ಯೋಜನೆಗೆ ಒಪ್ಪಿಗೆ.

*ಧಾರವಾಡ ಜಿಲ್ಲೆಯ ಅಣ್ಣಿಗೇರಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯ ಕೆರೆಗಳ ಪುನರುಜ್ಜೀವನಕ್ಕಾಗಿ ಅಮೃತ ಸರೋವರ ನಿರ್ಮಾಣ ಯೋಜನೆಗೆ ₹30 ಕೋಟಿಗೆ ಅನುಮತಿ.

*ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಮತ್ತು ಮದುನೂರು ಗ್ರಾಮ ಪಂಚಾಯಿತಿ ಹಾಗೂ ಮುಂಡಗೋಡ ತಾಲ್ಲೂಕಿನ ಗುಂಜಾವತಿ ಮತ್ತು ಮೈನಳ್ಳಿ ಪಂಚಾಯಿತಿಗಳ ವ್ಯಾಪ್ತಿಯಡಿ ಬೇಡ್ತಿ ನದಿ ಪಾತ್ರದಿಂದ ನೀರನ್ನು ಲಿಫ್ಟ್‌ ಮಾಡಿ ಒಟ್ಟು 100 ಕೆರೆಗಳನ್ನು ತುಂಬಿಸಲು ₹274.50 ಕೋಟಿ ಅನುದಾನಕ್ಕೆ ಒಪ್ಪಿಗೆ.

*ಆಳಂದ ತಾಲ್ಲೂಕಿನ ವ್ಯಾಪ್ತಿಯ 8 ಕೆರೆಗಳಿಗೆ ಭೋರಿನದಿಯಿಂದ ನೀರು ತುಂಬಿಸುವ ಪೈಪ್‌ಲೈನ್‌ ಯೋಜನೆಯ ₹49.50 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿಗೆ ಒಪ್ಪಿಗೆ.

*ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಐನಾಪುರ ಮತ್ತು ಇತರೆ 17 ಗ್ರಾಮಗಳ ಸುಮಾರು 3710 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ₹204 ಕೋಟಿ ಮೊತ್ತದ ಏತ ನೀರಾವರಿ ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ.

ಪೊಲೀಸ್‌ ಸಿಬ್ಬಂದಿ ವರ್ಗಾವಣೆ ನಿಯಮಕ್ಕೆ ಅಸ್ತು

ಪೊಲೀಸ್‌ ಸಿಬ್ಬಂದಿ ಮತ್ತು ಲಿಪಿಕ ಸಿಬ್ಬಂದಿ ವರ್ಗಾವಣೆ ಸಂಬಂಧ ವಿಶೇಷ ನಿಯಮ 2022 ಕರಡು ಅಧಿಸೂಚನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸ್ವಯಂ ಕೋರಿಕೆಯ ಮೇರೆಗೆ ಸಿ ಮತ್ತು ಡಿ ವರ್ಗಕ್ಕೆ ಸೇರಿದ ಸಿಬ್ಬಂದಿಯನ್ನು ಒಂದು ಜೇಷ್ಠತಾ ಘಟಕದಿಂದ ಇನ್ನೊಂದು ಜೇಷ್ಠತಾ ಘಟಕ ಸಮಾನ ಹುದ್ದೆಗೆ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇಲಾಖೆಗೆ ಮಾತ್ರ ಅನ್ವಯವಾಗುವಂತೆ ಅಂತರ ಜಿಲ್ಲಾ ಅಥವಾ ಅಂತರ್ ವಲಯ ವರ್ಗಾವಣೆಗೆ ಅವಕಾಶ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT