ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗಾಲ ಹೊರಸೂಸುವಿಕೆ ತಡೆಗೆ ನೀತಿ

ಮೆಡಿಕಲ್‌ ಗ್ಯಾಸ್‌ ಪೈಪ್‌ಲೈನ್ ಅಳವಡಿಕೆಗೆ ₹222.41 ಕೋಟಿ ಅನುದಾನಕ್ಕೆ ಸಂಪುಟದ ಒಪ್ಪಿಗೆ
Last Updated 18 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣೆ ಮೂಲಕ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ತೀವ್ರತೆ ಕಡಿತಗೊಳಿಸಲು ‘ಕರ್ನಾಟಕ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ನೀತಿ 2021–2026’ ಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ನೀತಿಯ ಕಾರ್ಯ ಯೋಜನೆ ಅನ್ವಯ ಇಂಧನ ದಕ್ಷತೆಯನ್ನು ಸುಧಾರಿಸಲು ಪುರಸಭೆ, ಗೃಹ, ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆಗಳಂತಹ ಐದು ಪ್ರಮುಖ ಕ್ಷೇತ್ರ ಅಥವಾ ವಲಯಗಳ ಮೇಲೆ 74.4 ಕೋಟಿ ಯೂನಿಟ್‌ಗಳಷ್ಟು ಇಂಧನ ಉಳಿತಾಯ ಗುರಿ ಹೊಂದಲಾಗಿದೆ. ಸುಮಾರು 6,10,080 ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಕಡಿಮೆ ಮಾಡುವ ಮೂಲಕ ಎನ್‌ಡಿಸಿ ಗುರಿಯನ್ನು ತಲುಪಲು ಸಹಕಾರಿಯಾಗಲಿದೆ ಎಂದು ಮೂಲಗಳು ಹೇಳಿವೆ.

ಪುರಸಭೆ ವಲಯದಲ್ಲಿ 30.4 ಕೋಟಿ, ಗೃಹವಲಯ 11.7 ಕೋಟಿ, ಕೃಷಿ ವಲಯ 23.0 ಕೋಟಿ, ವಾಣಿಜ್ಯ ವಲಯ 7.9 ಕೋಟಿ ಮತ್ತು ಕೈಗಾರಿಕ ವಲಯದಲ್ಲಿ 1.4 ಕೋಟಿ ಯೂನಿಟ್‌ಗಳಷ್ಟು ಉಳಿತಾಯ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಈ ನೀತಿಯ ಅವಧಿಯಲ್ಲಿ ನಿಗದಿಪಡಿಸಿದ ಗುರಿಯನ್ನು ಸಾಧಿಸಲು ಸುಮಾರು ₹372 ಕೋಟಿ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇಂಧನದ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಕಾರ್ಯ ಯೋಜನೆಯಲ್ಲಿ ಗುರುತಿಸಲಾದ ಹಣದ ಆಗತ್ಯವನ್ನು ವಿವಿಧ ಇಲಾಖೆಗಳು, ಅನುದಾನ, ಸಬ್ಸಿಡಿ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಭರಿಸಲು ಉದ್ದೇಶಿಸಲಾಗಿದೆ.

ಪ್ರಮುಖ ತೀರ್ಮಾನಗಳು:

*ಸರ್ಕಾರಿ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆಗೆ ಪೈಪ್‌ಲೈನ್‌ ಅಳವಡಿಸಲು ಸಿವಿಲ್‌ ಮತ್ತು ವಿದ್ಯುತ್‌ ಕಾಮಗಾರಿಗಳಿಗೆ ಪರಿಷ್ಕೃತ ಅಂದಾಜು ಮೊತ್ತ ₹222.41 ಕೋಟಿ ನೀಡಲು ಆಡಳಿತಾತ್ಮಕ ಅನುಮೋದನೆ.

*2021– 22ನೇ ಸಾಲಿನಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ –ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ.

*ಮೈಸೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿ ಕೈಗೊಂಡಿರುವ ಮೈಸೂರು ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ₹96.66 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.

*ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಬಿ.ಮೂಡ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ₹135 ಕೋಟಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

*ಬೆಂಗಳೂರು ದಕ್ಷಿಣ ತಾಲ್ಲೂಕು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ–275 ರಿಂದ ಕಂಬಿಪುರ ಕಾರುಬೆಲೆ ಜಿಲ್ಲಾ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯ ₹13.88 ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿಗೆ (ಭೂಸ್ವಾಧೀನ ವೆಚ್ಚ ಸೇರಿ) ಅನುಮೋದನೆ.

*ರಾಯಚೂರು ಜಿಲ್ಲೆ ಬಿಚ್ಚಾಲಿ ಗ್ರಾಮದಲ್ಲಿ 2.33 ಎಕರೆ ಸರ್ಕಾರಿ ಜಮೀನು ರಾಘವೇಂದ್ರ ಸ್ವಾಮಿ ಮಠ, ನಂಜನ
ಗೂಡು, ಮಂತ್ರಾಲಯ ಇವರಿಗೆ ಮಂಜೂರು ಮಾಡಲು ಒಪ್ಪಿಗೆ.

*ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಮತ್ತು ಇತರೆ 19 ಜನವಸತಿಗಳಿಗೆ ಜಲಜೀವನ್‌ ಮಿಷನ್‌ ಯೋಜನೆ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ₹10.74 ಕೋಟಿಗಳ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

*ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಚಿಕ್ಕೂಡ್‌ ಮತ್ತು ಇತರೆ 7 ಗ್ರಾಮಗಳಿಗೆ (17 ಜನವಸತಿಗಳು) ಜಲಜೀವನ್‌ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿಗೆ ₹35 ಕೋಟಿಗಳ ಯೋಜನೆ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ.

*ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಆನೆಕನ್ನಂಬಾಡಿ ಮತ್ತು ಇತರೆ 55 ಜನವಸತಿಗಳಿಗೆ ಜಲಜೀವನ್ ಮಿಷನ್‌ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ₹30.23 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT