ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಅಪರಾಧಿ, ಕೊಲೆಗಡುಕರಿಗೆ ಬಿಡುಗಡೆ ಇಲ್ಲ

ಕೈದಿಗಳ ಅವಧಿಪೂರ್ವ ಬಿಡುಗಡೆ ನಿಯಮಕ್ಕೆ ತಿದ್ದುಪಡಿ– ಸಚಿವ ಸಂಪುಟ ಸಭೆ ತೀರ್ಮಾನ
Last Updated 22 ಜುಲೈ 2022, 17:44 IST
ಅಕ್ಷರ ಗಾತ್ರ

ಬೆಂಗಳೂರು: ಪೋಕ್ಸೊ, ಸ್ತ್ರೀ ಶೋಷಣೆ, ಅತ್ಯಾಚಾರ ಹಾಗೂ ಒಂದಕ್ಕಿಂತ ಹೆಚ್ಚು ಕೊಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುವ ಕೈದಿಗಳಿಗೆ ಇನ್ನು ಮುಂದೆ ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಭಾಗ್ಯ ಇಲ್ಲ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಮಾಡುವ ಮಾರ್ಗಸೂಚಿಗೆ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಯಿತು ಎಂದು
ಹೇಳಿದರು.

ಇತರ ಪ್ರಮುಖ ತೀರ್ಮಾನಗಳು:

* ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಕ್ರಿಯಾ ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ₹20 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಇದೇ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ₹20 ಕೋಟಿ ಅಂದಾಜು ವೆಚ್ಚದ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೂ ಆಡಳಿತಾತ್ಮಕ ಅನುಮೋದನೆ.

* ₹15 ಕೋಟಿ ವೆಚ್ಚದಲ್ಲಿ ರೇಷ್ಮೆ ಇಲಾಖೆಯ ಸಮಗ್ರ ಗಣಕೀಕರಣ

* ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯಿಂದ ನೀರನ್ನು ಎತ್ತಿ ಹುಕ್ಕೇರಿ ತಾಲ್ಲೂಕಿನ 19 ಕೆರೆಗಳಿಗೆ ಒದಗಿಸುವ ಕಾಮಗಾರಿಯನ್ನು ₹42.50 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಒಪ್ಪಿಗೆ

* ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಕೆರೆಗೆ ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆಯ
2 ನೇ ಹಂತದ ಕಾಮಗಾರಿಯನ್ನು ₹49 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ

* ಕೊಪ್ಪಳ ಜಿಲ್ಲೆ ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಹತ್ತಿರ ಹರಿಯುವ ಹಿರೇಹಳ್ಳಕ್ಕೆ ಬ್ಯಾರೇಜ್‌ ನಿರ್ಮಾಣದ ಕಾಮಗಾರಿಯ ₹12.42 ಕೋಟಿಗಳ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ

* ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣಕ್ಕೆ ಒಳ ಚರಂಡಿ ವ್ಯವಸ್ಥೆ ಕಲ್ಪಿಸುವ ₹69.26 ಕೋಟಿ ಯೋಜನೆಗೆ ಒಪ್ಪಿಗೆ.

* ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ದೇವತ್ಕಲ್‌ ಏತ ನೀರಾವರಿ ಯೋಜನೆ, ಕೆ.ತಳ್ಳಹಳ್ಳಿ ಏತ ನೀರಾವರಿ ಯೋಜನೆ, ಏದಲಬಾವಿ ಏತ ನೀರಾವರಿ ಯೋಜನೆ ಮತ್ತು ಬೈರಮಡ್ಡಿ ಫೀಡರ್‌ ಕಾಲುವೆ ನಿರ್ಮಾಣ ಕಾಮಗಾರಿಗಳ ಮೂಲಕ ಪುನಶ್ಚೇತನ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವ ₹119.18 ಕೋಟಿ ಕಾಮಗಾರಿಗೆ ಒಪ್ಪಿಗೆ.

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿಮಾನ ನಿಲ್ದಾಣ’

ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಮತ್ತು ವಿಸ್ತರಣೆಗಾಗಿ ಅಗತ್ಯವಿರುವ 240 ಎಕರೆ ಜಮೀನನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿರುವ ಸಚಿವ ಸಂಪುಟ ಸಭೆ, ಮೈಸೂರು ವಿಮಾನ ನಿಲ್ದಾಣಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಒಪ್ಪಿಗೆ ನೀಡಿದೆ.

ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ನಿವೇಶನ

ಬಳ್ಳಾರಿಯ ಕುವೆಂಪು ನಗರ ಬಡಾವಣೆಯಲ್ಲಿ 24,008 ಚ.ಮೀ ನಾಗರಿಕ ಸೌಲಭ್ಯ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್ತಿಗೆ ಮಂಜೂರು ಮಾಡಲಾಗಿದ್ದು, ಅದಕ್ಕೆ ಮಾರ್ಗಸೂಚಿ ಮೌಲ್ಯಕ್ಕಿಂತ ಶೇ 25 ರಷ್ಟು ರಿಯಾಯಿತಿ ನೀಡಲು ಒಪ್ಪಿಗೆ. ಈ ನಿವೇಶನದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ ಶಾಲೆಯನ್ನು ನಿರ್ಮಿಸಲಿದೆ.

ಜಲಜೀವನ್‌ ಮಿಷನ್‌ಗೆ ₹1,810 ಕೋಟಿ

*ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಹೇರೂರು ಮತ್ತು ಇತರೆ 14 ಗ್ರಾಮಗಳು, ಹುಲಿಹೈದರ್‌ ಮತ್ತು ಇತರೆ 12 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ₹43.15 ಕೋಟಿ, ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಸತ್ತಿ ಮತ್ತು ಇತರೆ 8 ಗ್ರಾಮಗಳಿಗೆ ₹71 ಕೋಟಿ
ವೆಚ್ಚದ ಯೋಜನೆ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕು ಹನೂರು ವಿಧಾನಸಭಾ ಕ್ಷೇತ್ರದ 291 ಜನವಸತಿಗಳಿಗೆ ಹಂತ–2 ರಡಿ ₹268 ಕೋಟಿ ವೆಚ್ಚದ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
ನೀಡಲಾಗಿದೆ.

*ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಮತ್ತು ಇತರೆ 20 ಜನವಸತಿಗಳು ಮತ್ತು ಚನ್ನಗಿರಿ ತಾಲ್ಲೂಕಿನ ಜಿ.ಬಿ.ಹಳ್ಳಿ ಮತ್ತು ಇತರ ಇತರೆ 6 ಜನವಸತಿಗಳಿಗೆ ₹49 ಕೋಟಿ ವೆಚ್ಚದ ಯೋಜನೆ, ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಮತ್ತು ಇತರೆ 29 ಗ್ರಾಮಗಳಿಗೆ ₹34.81 ಕೋಟಿ ವೆಚ್ಚದ ಯೋಜನೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಚಿಕ್ಕಬೆಣಕಲ್‌ ಮತ್ತು 61 ಜನವಸತಿಗಳಿಗೆ ₹110 ಕೋಟಿ ಯೋಜನೆಗೆ ಅನುಮೋದನೆ.

*ಕೊಪ್ಪಳ ಜಿಲ್ಲೆ ಕೆರೆಹಳ್ಳಿ ಮತ್ತು ಇತರೆ 103 ಜನವಸತಿಗಳಿಗೆ ₹260 ಕೋಟಿ ಯೋಜನೆ, ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯರಝರ್ವಿ ಹಾಗೂ ಇತರೆ 30 ಗ್ರಾಮಗಳಿಗೆ (35 ಜನವಸತಿಗಳು), ಬೈಲಹೊಂಗಲ ತಾಲ್ಲೂಕು 55 ಗ್ರಾಮಗಳಿಗೆ (12 ಜನವಸತಿಗಳು) ಮತ್ತು ಎಂ.ಕೆ.ಹುಬ್ಬಳ್ಳಿ ನಗರ ಪ್ರದೇಶಕ್ಕೆ ₹410 ಕೋಟಿ ವೆಚ್ಚದ ಯೋಜನೆ, ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ದೇಗಾಂವ ಮತ್ತು ಇತರೆ 16 ಗ್ರಾಮಗಳಿಗೆ (29 ಜನವಸತಿ), ಖಾನಾಪೂರ ತಾಲ್ಲೂಕಿನಲ್ಲಿ 104 ಗ್ರಾಮಗಳಿಗೆ (135 ಜನವಸತಿ), ಬೆಳಗಾವಿ ತಾಲ್ಲೂಕಿನ 2 ಗ್ರಾಮಗಳ 2 ಜನ ವಸತಿಗಳಿಗೆ, ಕಿತ್ತೂರು ನಗರ ಪ್ರದೇಶಕ್ಕೆ ₹565 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT