ಗುರುವಾರ , ಜೂನ್ 30, 2022
22 °C

ಪಕ್ಷದ ಸದಸ್ಯತ್ವ ಮಾಡಿಸದಿದ್ದರೆ ಟಿಕೆಟ್‌ ಇಲ್ಲ: ಡಿ.ಕೆ. ಶಿವಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಪಕ್ಷದ ಶಾಸಕರು, ಮುಖಂಡರು ಸದಸ್ಯತ್ವ ಹೆಚ್ಚು ಮಾಡಿಸಬೇಕು. ಮಾಡಿಸದಿದ್ದರೆ ಬರುವ ಚುನಾವಣೆಯಲ್ಲಿ ಟಿಕೆಟ್‌ ಕೊಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಎಚ್ಚರಿಕೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ನಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 

‘ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿಯುಬೇಕು. ಮಹಿಳೆಯರ ಸದಸ್ಯತ್ವ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಬ್ಲಾಕ್‌ ಅಧ್ಯಕ್ಷರು, ಕಾರ್ಯಕರ್ತರಿಂದ ಸದಸ್ಯತ್ವ ಮಾಡಿಸಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು. ಈಗಾಗಲೇ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಸದಸ್ಯತ್ವ ನೋಂದಣಿ ಅವಧಿ ವಿಸ್ತರಿಸುವುದಿಲ್ಲ. ಸ್ವತಃ ರಾಹುಲ್‌ ಗಾಂಧಿಯವರೇ ಶಾಸಕರ ಸಾಧನೆ ಪರಿಶೀಲಿಸುತ್ತಾರೆ. ಎಲ್ಲರೂ ಅದಕ್ಕೆ ಸಿದ್ಧರಾಗಿರಬೇಕು’ ಎಂದು ತಿಳಿಸಿದರು.

‘ಮೂರು ದಿನಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಿ, ಸದಸ್ಯತ್ವ ಪ್ರಕ್ರಿಯೆ ಪರಿಶೀಲಿನೆ ನಡೆಸುತ್ತಿರುವೆ. ಕೊಪ್ಪಳ ಮೊದಲ ಸ್ಥಾನದಲ್ಲಿದೆ. ವಿಜಯನಗರ–ಬಳ್ಳಾರಿ ಜಿಲ್ಲೆಯಲ್ಲೂ ಉತ್ತಮ ರೀತಿಯಲ್ಲಿ ಸದಸ್ಯತ್ವ ಮಾಡಿಸಬೇಕು. ತಳಹಂತದಿಂದ ಪಕ್ಷ ಬಲಗೊಳ್ಳಬೇಕು’ ಎಂದು ಹೇಳಿದರು.

‘ಹೊಸ ಮುಖಗಳಿಗೆ ಅವಕಾಶ’

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್‌ ಪಕ್ಷವು ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಲಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಯಾವುದೇ ತೊಂದರೆ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ತಿಳಿಸಿದರು.

‘ನಮ್ಮ ಪಕ್ಷದ ಮುಖ್ಯಮಂತ್ರಿಯಿದ್ದಾಗ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಇಲ್ಲದಾಗ ಎಲ್ಲರೂ ಕೂಡಿಕೊಂಡು ಚುನಾವಣೆ ಎದುರಿಸಿದ್ದೇವೆ. ಈ ಸಲವೂ ಹಾಗೆ ಮಾಡುತ್ತೇವೆ. ನಾನು, ಸಿದ್ದರಾಮಯ್ಯ ಅಷ್ಟೇ ಲೀಡರ್‌ಗಳಲ್ಲ. ನಮ್ಮಲ್ಲಿರುವ ಪ್ರತಿಯೊಬ್ಬರೂ ಲೀಡರ್‌ಗಳೇ’ ಎಂದರು.

ಇದಕ್ಕೂ ಮುನ್ನ ನಗರದ ಟಿ.ಬಿ. ಡ್ಯಾಂ ವೃತ್ತದಿಂದ ನಗರದ ಸಾಯಿಲೀಲಾ ರಂಗಮಂದಿರದ ವರೆಗೆ ಬೈಕ್‌ ರ್‍ಯಾಲಿಯಲ್ಲಿ ಡಿ.ಕೆ. ಶಿವಕುಮಾರ ಅವರನ್ನು ಸ್ವಾಗತಿಸಲಾಯಿತು. ಬೆಳಿಗ್ಗೆ 11ಕ್ಕೆ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಅವರು ವೇದಿಕೆಗೆ ಬಂದಾಗ ಮಧ್ಯಾಹ್ನ 3.30 ಆಗಿತ್ತು.

ಶಾಸಕರಾದ ಎಲ್‌.ಬಿ.ಪಿ. ಭೀಮ ನಾಯ್ಕ, ಬಿ. ನಾಗೇಂದ್ರ, ಈ. ತುಕಾರಾಂ, ಮುಖಂಡರಾದ ವಿ.ಎಸ್‌. ಉಗ್ರಪ್ಪ, ವೆಂಕಟರಾವ್‌ ಘೋರ್ಪಡೆ, ನಾರಾ ಭರತ್‌ ರೆಡ್ಡಿ, ರಾಜಶೇಖರ್‌ ಹಿಟ್ನಾಳ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ್‌ ರಘು, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ, ತಾಲ್ಲೂಕು ಅಧ್ಯಕ್ಷ ವಿನಾಯಕ ಶೆಟ್ಟರ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು