ಶನಿವಾರ, ಜೂನ್ 12, 2021
24 °C

Covid-19 Karnataka Update: 30,309 ಹೊಸ ಪ್ರಕರಣ, 58,395 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪೀಡಿತರಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳ ಅವಧಿಯಲ್ಲಿ ಚೇತರಿಕೆ ಹೊಂದಿದವರ ಸಂಖ್ಯೆ 60 ಸಾವಿರದ (58,395) ಹತ್ತಿರ ಸಾಗಿದೆ. ಇದರಿಂದಾಗಿ ಆರು ಲಕ್ಷ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 5.75 ಲಕ್ಷಕ್ಕೆ ಇಳಿಕೆಯಾಗಿದೆ.

ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆ ಕಾಣುತ್ತಿರುವ ಕಾರಣ ಕೋವಿಡ್ ಪೀಡಿತರಿಗೆ ಆಸ್ಪತ್ರೆ ಚಿಕಿತ್ಸೆ ಅವಧಿಯನ್ನು ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಅಲ್ಪಾವಧಿಯಲ್ಲಿಯೇ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದಾರೆ. ಈವರೆಗೆ 16.74 ಲಕ್ಷ ಮಂದಿಗೆ ಕಾಯಿಲೆ ವಾಸಿಯಾಗಿದೆ.

ರಾಜ್ಯದಲ್ಲಿ 24 ಗಂಟೆಗಳ ಅವಧಿಯಲ್ಲಿ ನಡೆಸಲಾದ ಪರೀಕ್ಷೆಗಳ ಸಂಖ್ಯೆ 93 ಸಾವಿರಕ್ಕೆ ಇಳಿಕೆಯಾಗಿದೆ. 30,309 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢ ಪಟ್ಟಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 22.72 ಲಕ್ಷ ದಾಟಿದೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 298 ಮಂದಿ ಸೇರಿದಂತೆ ರಾಜ್ಯದಲ್ಲಿ 525 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ 28 ಮಂದಿ, ಉತ್ತರ ಕನ್ನಡದಲ್ಲಿ 22 ಮಂದಿ, ಬೆಂಗಳೂರು ಗ್ರಾಮಾಂತರದಲ್ಲಿ 19 ಮಂದಿ, ಹಾಸನದಲ್ಲಿ 18 ಮಂದಿ, ತುಮಕೂರು ಮತ್ತು ಶಿವಮೊಗ್ಗದಲ್ಲಿ ತಲಾ 15 ಮಂದಿ, ಮೈಸೂರಿನಲ್ಲಿ 13 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಮರಣ ಪ್ರಮಾಣ ದರವು ಶೇ 1.73ಕ್ಕೆ ತಲುಪಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 22,838ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಇಳಿಕೆ ಕಂಡಿದೆ. 8,676 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ಬೆಳಗಾವಿ (2,118), ಮೈಸೂರು (1,916), ಬಳ್ಳಾರಿ (1,799), ತುಮಕೂರು (1,562), ಬೆಂಗಳೂರು ಗ್ರಾಮಾಂತರ (1,339), ಶಿವಮೊಗ್ಗ (1,168), ಕೋಲಾರ (1,021) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ಸೋಂಕಿತರಿಗೆ ಟೆಲಿ ಮೆಡಿಸಿನ್ ಸೇವೆ

ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಸೋಂಕಿತರಿಗೆ ಜೀವ ಸಂಜೀವಿನಿ ತಂತ್ರಾಂಶದ ಮೂಲಕ ನಿತ್ಯ ವೈದ್ಯಕೀಯ ಸಲಹೆ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ನಿಟ್ಟಿನಿಲ್ಲಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕ ಸಿಬ್ಬಂದಿ ತಂತ್ರಾಂಶದ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರನ್ನು ಸೋಂಕಿತರು ಸಂಪರ್ಕಿಸಲು ನೆರವಾಗಬೇಕು. ಮೊಬೈಲ್‌ಗಳ ನೆರವಿನಿಂದ ಜಿಲ್ಲೆಯ ಹಬ್‌ ಸೆಂಟರ್‌ಗಳಿಗೆ ಸಂಪರ್ಕಿಸಿದಲ್ಲಿ ರೋಗಿಯ ಸ್ಥಿತಿಯ ಬಗ್ಗೆ ತಿಳಿಯುವ ಜತೆಗೆ ಹೆಚ್ಚಿನ ಚಿಕಿತ್ಸೆ ಸಹ ತಕ್ಷಣ ದೊರೆಯಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹಬ್ ಸೆಂಟರ್‌ಗಳಾದ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಲ್ಲಿ ತಜ್ಞ ವೈದ್ಯರನ್ನು ಪಾಳಿಯಲ್ಲಿ ನಿಯೋಜಿಸಬೇಕು. ವೈದ್ಯಕೀಯ ಸಲಹೆಗಳನ್ನು ನೀಡಲು ಸೂಚಿಸಿದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಕೂಡ ಸಲಹೆ ನೀಡಬಹುದು. ನಿತ್ಯ ಟೆಲಿ ಮೆಡಿಸಿನ್ ಸೇವೆ ಪಡೆದವರ ಸಂಖ್ಯೆ ಹಾಗೂ ನಿಯೋಜಿತರಾದ ತಜ್ಞರ ವಿವರವನ್ನು ದಾಖಲಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು