ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ

ಔರಾದ್‌ನಲ್ಲಿ ಪ್ರಜಾ ಧ್ವನಿ ಯಾತ್ರೆ ಭವ್ಯ ಸಮಾವೇಶ; ಸಿದ್ದರಾಮಯ್ಯ ವಿಶ್ವಾಸ
Last Updated 4 ಫೆಬ್ರುವರಿ 2023, 13:28 IST
ಅಕ್ಷರ ಗಾತ್ರ

ಔರಾದ್: ‘ಈಗ ರಾಜ್ಯದ ಎಲ್ಲೆಡೆ ಚುನಾವಣೆ ಕಾವು ಶುರುವಾಗಿದೆ. ಕಾಂಗ್ರೆಸ್‌ನ ಪ್ರಜಾ ಧ್ವನಿ ಯಾತ್ರೆಯಲ್ಲಿ ಲಕ್ಷ ಲಕ್ಷ ಜನ ಹರಿದು ಬರುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಈ ವರ್ಷದ ಮೇ ಒಳಗೆ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿನ ಮೈದಾನದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಈಗ ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಎದ್ದಿದೆ. ಹೀಗಾಗಿ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ನಮ್ಮ ಸರ್ಕಾರ ಬರುವುದೂ ಅಷ್ಟೇ ಸತ್ಯ’ ಎಂದು ಹೇಳಿದರು.

ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ‘ಇದು ಅನೈತಿಕ ಸರ್ಕಾರ. ಒಬ್ಬೊಬ್ಬ ಶಾಸಕ, ಸಚಿವರಿಗೆ ₹ 25ರಿಂದ 30 ಕೋಟಿ ಕೊಟ್ಟು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಇಂತಹ ಕೆಟ್ಟ ಸರ್ಕಾರದಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ’ ಎಂದು ಗುಡುಗಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದೆ. ನಾವು ಕೊಟ್ಟ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 20 ಹೊಸ ಕಾರ್ಯಕ್ರಮಗಳು ಕೊಟ್ಟಿದ್ದೇವೆ. ಆದರೆ ಬಿಜೆಪಿಯವರು ಕೊಟ್ಟ 600 ಭರವಸೆಗಳಲ್ಲಿ 50-60 ಭರವಸೆ ಈಡೇರಿಸಲೂ ಆಗಿಲ್ಲ. ಇವರು ಬರೀ ಸುಳ್ಳು ಹೇಳಿ ಅಧಿಕಾರ ನಡೆಸುತ್ತಿದ್ದಾರೆ. ಇದೊಂದು ಪರ್ಸೆಂಟೇಜ್ ಸರ್ಕಾರ. ಇವರ ಭ್ರಷ್ಟಾಚಾರಕ್ಕೆ ಅನೇಕರು ಬಲಿಯಾಗಿದ್ದಾರೆ’ ಎಂದು ದೂರಿದರು.

‘ನಮ್ಮ ಸರ್ಕಾರ ಐದು ವರ್ಷದಲ್ಲಿ 15 ಲಕ್ಷ ಮನೆ ಮಂಜೂರು ಮಾಡಿದೆ. ಆದರೆ ಇವರು ಮಂಜೂರು ಮಾಡಿದ ಮನೆಗೆ ಅನುದಾನ ಕೊಟ್ಟಿಲ್ಲ. ಬಡವರಿಗಾಗಿ ನಾನು ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೂಡ ಕಡಿಮೆ ಮಾಡಿದರು. ಅನೇಕ ಕಡೆ ಇಂದಿರಾ ಕ್ಯಾಂಟೀನ್ ಬಂದ್ ಆಗಿವೆ’ ಎಂದು ಟೀಕಿಸಿದರು.

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ‘ಪ್ರಧಾನಿ ಮೋದಿ ಅವರ ಒಳ್ಳೆ ದಿನ ಯಾವಾಗ ಬರುತ್ತೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ಎಲ್ಲಿ ಹೋಯಿತು. ಈ ಸರ್ಕಾರ 23ಕ್ಕೂ ಹೆಚ್ಚು ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣ ಮಾಡಿ ಯುವಕರಿಗೆ ಅನ್ಯಾಯ ಮಾಡಿದೆ. ದಿನ ಬಳಕೆ ವಸ್ತುಗಳ ಬೆಲೆ ವಿಪರೀತ ಜಾಸ್ತಿ ಮಾಡಿ ಬಡವರ ಹೊಟ್ಟೆಗೆ ಹೊಡೆದಿದೆ’ ಎಂದು ದೂರಿದರು.

ಕೆಪಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ ‘ಈ ಬಾರಿ ಎಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ಔರಾದ್‌ನಿಂದಲೇ ಬದಲಾವಣೆ ಶುರುವಾಗಬೇಕು. ಪ್ರಭು ಚವಾಣ್ ಅವರಿಗೆ ಈ ಸಲ ಸೋಲಿನ ರುಚಿ ತೋರಿಸಬೇಕು’ ಎಂದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಪ್ರಕಾಶ ರಾಠೋಡ, ಬಸವರಾಜ ರಾಯರಡ್ಡಿ, ಜಮೀರ್ ಅಹ್ಮದ್‌, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಮಾಜಿ ಶಾಸಕ ಕೆ. ಪುಂಡಲೀಕರಾವ, ವಿಜಯಸಿಂಗ್, ನರಸಿಂಗರಾವ ಸೂರ್ಯವಂಶಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಶರಣಕುಮಾರ ಮೋದಿ, ಗೀತಾ ಚಿದ್ರಿ, ವಿಜಯಕುಮಾರ ಕೌಡಾಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವಾಣ್, ಡಾ. ಲಕ್ಷ್ಮಣ ಸೋರಳಿಕರ್, ಶಂಕರರಾವ ದೊಡ್ಡಿ, ಬಂಟಿ ದರಬಾರೆ, ಗೋಪಿ ಕೃಷ್ಣ, ಭೀಮಸೇನ ಸಿಂಧೆ, ರಾಮಣ್ಣ ಒಡೆಯರ್ ಇದ್ದರು.

‘ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ ಶೂರನೂ ಅಲ್ಲ’

ಔರಾದ್: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಅಂಗವಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.

‘ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿಯಾಗಲು ಬೆಂಬಲಿಸಿತು. ಆದರೆ, ಅವರಿಗೆ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ ಶೂರನೂ ಅಲ್ಲ’ ಎಂದು ಅಲ್ಲಮ ಪ್ರಭುಗಳ ವಚನ ಉಲ್ಲೇಖಿಸಿ ಟೀಕಿಸಿದರು.

‘ದೇವೇಗೌಡರು ಹಾಗೂ ಕುಮಾರಸ್ವಾಮಿ ಆಗಾಗ ಕಣ್ಣೀರು ಹಾಕುತ್ತಾರೆ. ಈ ಕಣ್ಣೀರು ಯಾಕೆ ಹಾಕುತ್ತಾರೆ ಎಂಬುದು ಜನರಿಗೆ ಗೊತ್ತಾಗಿದೆ. ಕಷ್ಟ ಬಂದಾಗ ಅವರು ಕಣ್ಣೀರು ಹಾಕುತ್ತಾರೆ’ ಎಂದು ವ್ಯಂಗ್ಯ ಮಾಡಿದರು.

‘ನಾನು ಪೂರ್ಣ ಬಹುಮತದೊಂದಿಗೆ ಐದು ವರ್ಷ ಸರ್ಕಾರ ನಡೆಸಿದ್ದೇನೆ. ದೇವರಾಜ ಅರಸು ನಂತರ ಈ ರಾಜ್ಯದಲ್ಲಿ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದು ನಾನೇ. ಮುಂದೆಯೂ ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT