ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Elections 2023 | ಬಿಜೆಪಿಗೆ ಸೋಲಿನ ಭೀತಿ -ಡಿ.ಕೆ.ಶಿವಕುಮಾರ್‌

Last Updated 19 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿದೆ. ಅದಕ್ಕಾಗಿಯೇ ಬಿಜೆಪಿಯ ರಾಷ್ಟ್ರೀಯ ನಾಯಕರು ವಿಧಾನಸಭಾ ಕ್ಷೇತ್ರಗಳ ಹಂತಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನು ವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಚಿಕ್ಕಮಗಳೂರು ನಗರಸಭೆಯ ಮಾಜಿ ಅಧ್ಯಕ್ಷ ಎಚ್‌.ಡಿ.ತಮ್ಮಯ್ಯ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ನೋಡಿರುವ ಜನರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮತಗಟ್ಟೆಗಳ ಹಂತದಿಂದಲೂ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಜನರು ಬದಲಾವಣೆ ಬಯಸಿರುವುದರ ಸಂಕೇತ. ಮುಂದಿನ ದಿನಗಳಲ್ಲಿ ಮತಷ್ಟು ಜನರು ಕಾಂಗ್ರೆಸ್‌ ಸೇರಲಿದ್ದಾರೆ’ ಎಂದರು.

‘ಸೋಮವಾರ ಕೂಡ ಇತರ ಪಕ್ಷಗಳ ಕೆಲವು ಮುಖಂಡರು ನಮ್ಮ ಪಕ್ಷ ಸೇರಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕರು ಮತ್ತು ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಪಕ್ಷಗಳ ಹಲವು ಮಂದಿ ಹಾಲಿ ಶಾಸಕರು ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಆದರೆ, ಎಲ್ಲರಿಗೂ ಸ್ಥಾನಮಾನ ಕಲ್ಪಿಸುವುದು ಕಷ್ಟ. ಕೆಲವರಿಗೆ ನೀಡಬಹುದು. ಆದ್ದರಿಂದ, ಪಕ್ಷ ಸೇರಲು ಬಯಸಿದವರ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ’ ಎಂದು ಶಿವಕುಮಾರ್‌ ಹೇಳಿದರು.

‘ಚಿಕ್ಕಮಗಳೂರಿನಲ್ಲಿ ದತ್ತಪೀಠದ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಯವರು ರಾಜಕೀಯ ಮಾಡುತ್ತಿದ್ದಾರೆ. ಈಗ ಜನರಿಗೆ ಬದುಕು ಕಟ್ಟಿಕೊಳ್ಳುವುದು ಮುಖ್ಯವಾಗಿದೆ. ಬಿಜೆಪಿ ಕೇವಲ ಭಾವನೆ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ನಾವು ಬದುಕಿನ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತೇವೆ. ಜನರು ಕೂಡ ಅವರ ಹೊಟ್ಟೆಪಾಡಿನ ಬಗ್ಗೆಯೇ ಪ್ರಶ್ನಿಸುತ್ತಿ
ದ್ದಾರೆ’ ಎಂದರು.

ಶಿವಮೊಗ್ಗದಲ್ಲಿ ಭಾವನಾತ್ಮಕ ವಿಚಾರದಿಂದ ಅಶಾಂತಿ ಹೆಚ್ಚಾಗಿದೆ. ಪರಿಣಾಮವಾಗಿ ಅಲ್ಲಿ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಬಿಜೆಪಿ ನಾಯಕರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದಾರೆ. ಜನರು ಭಾವನೆಗಳಿಗಿಂತ ಬದುಕಿನ ಬಗ್ಗೆ ಹೆಚ್ಚು ಯೋಚಿಸುತ್ತಿ
ದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT