ಸೋಮವಾರ, ಮಾರ್ಚ್ 20, 2023
24 °C
‘ಪ್ರಜಾಧ್ವನಿ ಯಾತ್ರೆ’ಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ 

ಸಾಲ ಮಾಡಿ ಹೋಳಿಗೆ ತಿನ್ನೋಕೆ ಶುರು ಮಾಡಿಕೊಂಡಿದ್ದೀರಲ್ರೀ ಬೊಮ್ಮಾಯಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಸಿಎಂ ತವರು ಜಿಲ್ಲೆ’ಯಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ ಯಾತ್ರೆ’ ಕಾಂಗ್ರೆಸ್‌ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲರ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದರು. 

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ ಯಾತ್ರೆ’ಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಗುತ್ತಿಗೆದಾರರಿಗೆ ಕೊಡಬೇಕಾದ ₹25 ಸಾವಿರ ಕೋಟಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ರಾಜ್ಯದ ಜನರ ಮೇಲೆ ತೆರಿಗೆ ಭಾರ ಹಾಕಲಾಗಿದೆ. ರಾಜ್ಯದ ಸಾಲದ ಹೊರೆ ದುಪ್ಪಟ್ಟಾಗಿದೆ. ಸಾಲ ಮಾಡಿ ಹೋಳಿಗೆ ತಿನ್ನೋಕೆ ಶುರು ಮಾಡಿಕೊಂಡಿದ್ದೀರಲ್ರೀ ಬೊಮ್ಮಾಯಿ’ ಎಂದು ವಾಗ್ದಾಳಿ ನಡೆಸಿದರು. 

ಮನೆಯ ಒಡತಿಗೆ ₹24 ಸಾವಿರ:

‘ಹೆಣ್ಣು ಮಕ್ಕಳು ಸಂಸಾರ ನಡೆಸೋಕೆ ಕಷ್ಟ ಆಗುತ್ತೆ ಅಂತ ಮನೆಯ ಒಡತಿಗೆ ₹2 ಸಾವಿರ ಘೋಷಣೆ ಮಾಡಲಾಗಿದೆ. ಎಷ್ಟೇ ಹೊರೆಯಾದರೂ, ಮನೆಯ ಒಡತಿಗೆ ವರ್ಷಕ್ಕೆ ₹24 ಸಾವಿರ ಕೊಟ್ಟೇ ಕೊಡ್ತೀವಿ. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್‌ ಕೊಡುತ್ತೇವೆ. ಇದೆಲ್ಲಾ ನಿಮಗೆ ಬೇಕಾದರೆ ಬಿಜೆಪಿಯನ್ನು ಚುನಾವಣೆಯಲ್ಲಿ ಕಿತ್ತೆಸೆಯಿರಿ’ ಎಂದು ಮತದಾರರಿಗೆ ಕರೆ ನೀಡಿದರು. 

ಲಂಬಾಣಿ ಮತದ ಮೇಲೆ ಕಣ್ಣು

‘ಮೋದಿ ಕಲಬುರ್ಗಿಗೆ ಬಂದಿದ್ದಾರೆ. ಲಂಬಾಣಿ ಜನಕ್ಕೆ ಹಕ್ಕುಪತ್ರ ಕೊಡುತ್ತಾರಂತೆ. ‘ಅರಣ್ಯ ಕಾಯ್ದೆ’ಗೆ ತಿದ್ದುಪಡಿ ತಂದು ವಾಸಿಸುವವನೇ ಮನೆಯೊಡೆಯ ಅಂತ ಮಾಡಿದ್ದು ನಾವು. ನಾನು ಸಿಎಂ ಆಗಿದ್ದಾಗ ನರಸಿಂಹಯ್ಯ ಸಮಿತಿ ರಚಿಸಿ ಹಟ್ಟಿ, ತಾಂಡಾ ಎಲ್ಲವನ್ನೂ ಕಂದಾಯ ಗ್ರಾಮ ಮಾಡಬೇಕು ಅಂತ ಮಾಡಿದ್ದು ನಾವು. ಸೇವಾಲಾಲ್‌ ಜಯಂತಿ ಆಚರಣೆ ಮಾಡಿದ್ದು ನಮ್ಮ ಸರ್ಕಾರ. ಇಂಥ ಢೋಂಗಿತನ ನಡೆಯಲ್ಲ ಬಸವರಾಜ ಬೊಮ್ಮಾಯಿ. ಮಾನ ಮರ್ಯಾದೆ ಇದ್ದರೆ ಖುರ್ಚಿ ಮೇಲೆ ಒಂದು ನಿಮಿಷ ಇರಬಾರದು’ ಎಂದು ಸಿದ್ದರಾಮಯ್ಯ ಹರಿಹಾಯ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು