ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ತುರ್ತು ಕಾಮಗಾರಿಗೆ ₹ 660 ಕೋಟಿ- ಬಸವರಾಜ ಬೊಮ್ಮಾಯಿ

ಪ್ರವಾಹ ಹಾನಿ ಸಮೀಕ್ಷೆಗೆ ಕೇಂದ್ರ ತಂಡ ಕಳುಹಿಸಲು ಅಮಿತ್ ಶಾಗೆ ಪತ್ರ
Last Updated 1 ಆಗಸ್ಟ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರವಾಹದಿಂದ ಸಂತ್ರಸ್ತರಾದವರಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಮಾದರಿಯಲ್ಲಿಯೇ ಪರಿಹಾರ ನೀಡಲಾಗುವುದು. ಪ್ರವಾಹ ಹಾನಿ ಮತ್ತು ಬೆಳೆಹಾನಿ ಸಮೀಕ್ಷೆಗೆ ಕೇಂದ್ರ ತಂಡ ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ತುರ್ತು ಕಾಮಗಾರಿಗೆ ₹ 660 ಕೋಟಿ ಬಿಡುಗಡೆ ಮಾಡಲು ಮತ್ತು ಮನೆ ಕುಸಿತ, ಬೆಳೆ ನಾಶ ಸಮೀಕ್ಷೆಯನ್ನು 15 ದಿನಗಳ ಒಳಗೆ ಮಾಡಲು ಸೂಚಿಸಲಾಗಿದೆ’ ಎಂದರು.

‘ಕೃಷ್ಣಾ ನದಿಪಾತ್ರ, ಬೆಳಗಾವಿ, ಉತ್ತರಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹದಿಂದ ವಸತಿ ಪ್ರದೇಶ, ಗದ್ದೆಗಳಲ್ಲಿ ನೀರು ನಿಂತಿದೆ. ಅದು ಇಳಿಯಬೇಕಿದೆ. ಮಳೆ, ಪ್ರವಾಹದಿಂದ ಹಾನಿಗೆ ಒಳಗಾದ ಸಂಪರ್ಕ ರಸ್ತೆ, ಸೇತುವೆಗಳ ದುರಸ್ತಿಗೆ ತಕ್ಷಣ ₹ 510 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘ಮಳೆ ಕಡಿಮೆಯಾದ ಬಳಿಕ ಸಂಪರ್ಕ ರಸ್ತೆ, ಸೇತುವೆಗಳ ಕಾಮಗಾರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ನಿಯಮಗಳ ಪ್ರಕಾರ ₹ 150 ಕೋಟಿ ಖರ್ಚು ಮಾಡಲಾಗುವುದು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸುಮಾರು ₹ 700 ಕೋಟಿಗೂ ಹೆಚ್ಚು ಅನುದಾನ ಲಭ್ಯವಿದೆ’ ಎಂದು ಅವರು ವಿವರಿಸಿದರು.

‘ಮನೆ ಕಳೆದುಕೊಂಡವರಿಗೆ ತಕ್ಷಣದ ಪರಿಹಾರವಾಗಿ ₹ 10 ಸಾವಿರ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಕಾಳಜಿ ಕೇಂದ್ರಗಳನ್ನೂ ತೆರೆಯಲಾಗಿದೆ. ಮನೆ ಸಂಪೂರ್ಣ ಕಳೆದುಕೊಂಡವರಿಗೆ ₹ 5 ಲಕ್ಷ, ಭಾಗಶಃ ಹಾನಿಯಾಗಿದ್ದರೆ ₹ 3 ಲಕ್ಷ, ಅಲ್ಪ ಹಾನಿಯಾಗಿದ್ದರೆ ₹50 ಸಾವಿರ ನೀಡಲಾಗುತ್ತದೆ. ಕಳೆದ ವರ್ಷ ಮನೆ ಕಳೆದುಕೊಂಡು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದರೆ ಅದಕ್ಕೆ ಬಾಕಿ ಇರುವ ಹಣವನ್ನು ಪಾವತಿಸಲು ಕೂಡಾ ಆದೇಶ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಹಿಂದಿನ ವರ್ಷದ ಪರಿಹಾರದ ಹಣವನ್ನೇ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಪ್ರವಾಹ ಬಂದಾಗ ತಕ್ಷಣ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಹಿಂದೆ ಅವರು ಯಾವ ರೀತಿ ಮಾಡಿದ್ದಾರೆ ಎಂದು ಗೊತ್ತಿದೆ. ಮುಖ್ಯಮಂತ್ರಿ ಆಗಿದ್ದವರು ಸ್ವಲ್ಪ ಅರ್ಥ ಮಾಡಿಕೊಂಡು ಮಾತಾಡಬೇಕು’ ಎಂದರು. ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT