ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಲಾಕ್‌ಡೌನ್: ಪಾತಾಳಕ್ಕೆ ಕುಸಿದ ರಾಜ್ಯದ ಪುಷ್ಪೋದ್ಯಮ

ಹೂ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಬೆಳೆಗಾರರ ಒತ್ತಾಯ
Last Updated 22 ಮೇ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು:ಈಗ ಹೂವುಗಳಿಗೆ ಬಲು ಬೇಡಿಕೆ ಇರಬೇಕಿದ್ದ ಕಾಲ. ಶುಭ ಸಮಾರಂಭಗಳ ಮೆರುಗು ಹೆಚ್ಚಿಸುತ್ತಿದ್ದ ಬಣ್ಣ ಬಣ್ಣದ ಹೂಗಳ ಬೇಡಿಕೆಯಲ್ಲಿ ಹೆಚ್ಚು ಪೂರೈಕೆಯಾಗುತ್ತಿದ್ದುದು ರಾಜ್ಯದಿಂದ. ಆದರೆ, ಕೊರೊನಾ ಹಾಗೂ ಲಾಕ್‌ಡೌನ್‌ಗಳ ಹೊಡೆತದಿಂದಾಗಿ ರಾಜ್ಯದ ಪುಷ್ಪೋದ್ಯಮ ನೆಲಕಚ್ಚಿದೆ.

ಶುಭ ಸಮಾರಂಭಗಳೆಲ್ಲ ಸರಳವಾಗಿ ನೆರವೇರುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳು, ದೇವಸ್ಥಾನಗಳಲ್ಲಿ ಅಲಂಕಾರಗಳು ಸೇರಿದಂತೆ ಹೂವು ಹೆಚ್ಚಾಗಿ ಬಳಕೆಯಾಗುತ್ತಿದ್ದ ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ಅಗತ್ಯ ಸೇವೆಗಳಲ್ಲಿ ಹೂವು ಮಾರಾಟಕ್ಕೆ ಅವಕಾಶವಿದ್ದರೂ, ರಾಜ್ಯದಲ್ಲಿ ಹೂ ಬೆಳೆಗಾರರಿಗೆ ಸಮರ್ಪಕವಾದ→ಮಾರುಕಟ್ಟೆಯ ವ್ಯವಸ್ಥೆಯೇ ಇಲ್ಲ. ಶುಭ ಸಮಾರಂಭಗಳಿಗೆ ಹೂವುಗಳನ್ನು ಪೂರೈಸಲು ಸರ್ಕಾರ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಹೂವು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.

‘ಹೂವು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡುವಂತಹದ್ದಲ್ಲ. ಮಾರುಕಟ್ಟೆಗೆ ತಂದರೂ ಅದನ್ನು ಕೊಳ್ಳುವವರಿಲ್ಲ. ಬೆಳಿಗ್ಗೆ 10ರವರೆಗೆ ಎಷ್ಟರಮಟ್ಟಿಗೆ ವ್ಯಾಪಾರ ನಡೆಯುತ್ತದೆ? ಬರುವ ಗ್ರಾಹಕರು ಬೆರಳೆಣಿಕೆಯಷ್ಟು. ದರ ಪಾತಾಳಕ್ಕೆ ಕುಸಿದಿದೆ. ಬೆಳೆಗೆ ಹಾಕಿದ ಬಂಡವಾಳವೂ ಬರುತ್ತಿಲ್ಲ’ ಎಂದು ಗುಲಾಬಿ ಬೆಳೆಗಾರ ಜನಾರ್ದನ್ ಅಸಹಾಯಕತೆ ತೋಡಿಕೊಂಡರು.

‘ಈಗ ಮಾರುಕಟ್ಟೆಗೆ ಹೂವು ತರುತ್ತಿಲ್ಲ. ತೋಟದಲ್ಲೇ ಹೂವು ಉದುರುತ್ತಿದೆ. ಉತ್ತಮವಾಗಿ ಬೆಳೆದಿರುವ ಹೂಗಳಿಗೆ ಕನಿಷ್ಠ ಬೆಲೆಯೂ ಸಿಗದೆ ಇರುವುದರಿಂದ ಕಣ್ಣೀರು ಬರುತ್ತದೆ. ಸದ್ಯಕ್ಕೆ ಕೊರೊನಾ ಮುಗಿಯುವಂತಿಲ್ಲ. ಹಾಗಾಗಿ, ಗಿಡಗಳನ್ನು ಕಟಾವು ಮಾಡಲು
ನಿರ್ಧರಿಸಿದ್ದೇನೆ’ ಎಂದೂ ಅವರು ತಿಳಿಸಿದರು.

ಹೂ ಮಾರಾಟಕ್ಕೆ ವ್ಯವಸ್ಥೆ ಇಲ್ಲ: ಎರಡನೇ ಅಲೆಯ ಪರಿಣಾಮ ಕೆ.ಆರ್‌.ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿದೆ. ನಾಲ್ಕು ಗಂಟೆ ಮಾತ್ರ ಹೂವು ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಪರ್ಯಾಯ ವ್ಯವಸ್ಥೆಗಳನ್ನೂ ಸೂಚಿಸಿಲ್ಲ’ ಎಂದು ಕೆ.ಆರ್‌.ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದಿವಾಕರ್ ಬೇಸರ ವ್ಯಕ್ತಪಡಿಸಿದರು.

‘ಕೆ.ಆರ್.ಮಾರುಕಟ್ಟೆಯಿಂದ ಪ್ರತಿದಿನ 50 ಸಾವಿರ ಕೆ.ಜಿ.ಗಳಷ್ಟು ವಿವಿಧ ಬಗೆಯ ಹೂಗಳು ಮಾರಾಟ ಆಗುತ್ತಿದ್ದವು. 140 ಹೂವಿನ ವರ್ತಕರು ಇದರಿಂದ ಜೀವನ ನಡೆಸುತ್ತಿದ್ದರು. ಈಗ ಮಳಿಗೆಗಳನ್ನು ಮುಚ್ಚಿ ಬೀದಿಗಳಲ್ಲಿ ಮಾರಾಟಕ್ಕೆ ನಿಂತಿದ್ದಾರೆ. ಲಾಕ್‌ಡೌನ್‌ಗೆ ಹೆದರಿ ಬಹುತೇಕ ಬೆಳೆಗಾರರು ಹೂವು ಪೂರೈಸುತ್ತಿಲ್ಲ. ಬರುವ ಹೂವೂ ಮಾರಾಟವಾಗುತ್ತಿಲ್ಲ. ಅವುಗಳನ್ನು ಕಸದ ಬುಟ್ಟಿಗೆ ಸುರಿಯುತ್ತಿದ್ದಾರೆ. ಸರ್ಕಾರ ನಿಯಮಗಳನ್ನು ಸಡಿಲಿಸಿ, ಹೂವಿನ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅನುಕೂಲ’ ಎಂದು ಮನವಿ ಮಾಡಿದರು.

ಅಂಕಿಅಂಶ

₹3 ಕೋಟಿ - ಪಾಲಿಹೌಸ್ ಹೂಗಳ ವಹಿವಾಟು (ದಿನಕ್ಕೆ)

₹8 ಕೋಟಿ - ಇತರೆ ಹೂಗಳ ವಹಿವಾಟು (ದಿನಕ್ಕೆ)

₹400 ಕೋಟಿ - ಪುಷ್ಪೋದ್ಯಮದ ಮಾಸಿಕ ವಹಿವಾಟು

‘ಹೂ ಬೆಳೆಗಾರರಿಗೆ ಸಹಾಯಧನ ಸಾಲದು’

ಹೂವು ಬೆಳೆಗಾರರಿಗೆ ಸರ್ಕಾರ ಕೋವಿಡ್ ಪರಿಹಾರ ಧನವಾಗಿ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ನೀಡುವುದಾಗಿ ಘೋಷಿಸಿದೆ. ಈ ಸಹಾಯಧನದಿಂದ ತೆರೆದ ಭೂಮಿಯಲ್ಲಿ ಹೂ ಬೆಳೆಯುವವರಿಗೆ ಸಹಾಯವಾಗಬಹುದು. ಅಲಂಕಾರಿಕ ಹೂ ಬೆಳೆಯುವವರು
ಪಾಲಿಹೌಸ್‌ ನಿರ್ಮಾಣಕ್ಕೆ ಲಕ್ಷಾಂತರ ಬಂಡವಾಳ ಹಾಕಿರುತ್ತಾರೆ. ಪಾಲಿಹೌಸ್‌ ನಿರ್ವಹಣೆಗೆ ಒಂದು ದಿನಕ್ಕೆ ₹4 ಸಾವಿರ ಖರ್ಚು ಬರುತ್ತದೆ’ ಎಂದು ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ್‌ ತಿಳಿಸಿದರು.

‘ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ಅಲಂಕಾರಿಕ ಹೂಗಳಿಗೆ ಬೇಡಿಕೆಯೇ ಇಲ್ಲ. ಪಾಲಿಹೌಸ್‌ಗಳಲ್ಲಿ ಸೊಂಪಾಗಿ ಬೆಳೆದ ಹೂಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ, ಬೆಳೆಗಾರ ರಸ್ತೆಗೆ ಚೆಲ್ಲುತ್ತಿದ್ದಾನೆ. ಪರಿಹಾರ ಘೋಷಿಸುವ ಮುನ್ನ ಸರ್ಕಾರ ಪಾಲಿಹೌಸ್‌ ಬೆಳೆಗಾರರ ಸ್ಥಿತಿಗತಿಯನ್ನೂ ಅವಲೋಕಿಸಬೇಕಿತ್ತು’ ಎಂದೂ ಹೇಳಿದರು.

1 ಲಕ್ಷಕ್ಕೆ ಕುಸಿದ ಪಾಲಿಹೌಸ್ ಹೂಗಳ ಪೂರೈಕೆ

ಪಾಲಿಹೌಸ್‌ಗಳಲ್ಲಿ (ಹಸಿರು ಮನೆ) ಬೆಳೆದ ಈ ಹೂಗಳನ್ನು ಅಲಂಕಾರಕ್ಕೆ ಹೆಚ್ಚಾಗಿ ಬಳಸುತ್ತಾರೆ. ಇಂತಹ ಹೂಗಳನ್ನು ಹೆಬ್ಬಾಳದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವು (ಐಎಫ್‌ಎಬಿ) ದೇಶದ ಪ್ರಮುಖ ಭಾಗಗಳಿಗೆ ಸರಬರಾಜು ಮಾಡುತ್ತದೆ. ಈ ಕೇಂದ್ರದಿಂದ ಪ್ರತಿ ದಿನ 3ರಿಂದ 5 ಲಕ್ಷ ಹೂಗಳು ಪೂರೈಕೆಯಾಗುತ್ತಿತ್ತು. ಕೊರೊನಾ ಕಾರಣದಿಂದ ಈಗ ದಿನಕ್ಕೆ 1 ಲಕ್ಷ ಹೂಗಳು ಮಾತ್ರ ಪೂರೈಕೆಯಾಗುತ್ತಿವೆ ಎಂದು ಐಎಫ್‌ಎಬಿ ಮೂಲಗಳು ತಿಳಿಸಿವೆ.

‘ಶುಭ ಸಮಾರಂಭಗಳು ಸರಳವಾಗಿ ನಡೆಯುತ್ತಿದ್ದರೂ ಹೂವಿನ ಅಲಂಕಾರಗಳು ಅಲ್ಲಲ್ಲಿ ನಡೆಯುತ್ತಿವೆ. ಸದ್ಯ ರಾಜ್ಯದ ವಿವಿಧ ಜಿಲ್ಲೆಗಳು, ಹೈದರಾಬಾದ್, ತಮಿಳುನಾಡು, ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಹೂವಿಗೆ ಬೇಡಿಕೆ ಇದೆ. ವಾರದಿಂದ ಹೂ ಸರಬರಾಜು ಚೇತರಿಕೆ ಕಾಣುತ್ತಿದೆ. ಪ್ರತಿ ಹೂವು ಸರಾಸರಿ ₹5ರಂತೆ ಮಾರಾಟವಾಗುತ್ತಿದೆ. ಕಳೆದ ವರ್ಷದಿಂದ ಕೊರೊನಾ ಕಾರಣದಿಂದ ಶೇ 30ರಷ್ಟು ಹೂವಿನ ಉತ್ಪಾದನೆಯೂ ಕಡಿಮೆಯಾಗಿದೆ’ ಎಂದು ಐಎಫ್‌ಎಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT