ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ನಗದೀಕರಣಕ್ಕೆ ಮುಂದಾದ ರಾಜ್ಯ

Last Updated 10 ಡಿಸೆಂಬರ್ 2021, 20:02 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ವಲಯದ ಆಸ್ತಿಗಳನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ನೀಡುವ ಮೂಲಕ ಹಣ ಸಂಪಾದಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ‌ಯೋಜನೆಯನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

‘ಆಸ್ತಿಗಳ ನಗದೀಕರಣ ಮತ್ತು ಬಂಡವಾಳ ಹಿಂತೆಗೆತ’ ಯೋಜನೆ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಬಂದರು, ವಿಮಾನ ನಿಲ್ದಾಣ, ರಸ್ತೆ ಸೇರಿದಂತೆ ಸಾರ್ವಜನಿಕ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಅವರು ಈ ಸಂಬಂಧ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಗುರುವಾರ (ಡಿ.9) ನೆನಪೋಲೆ ಬರೆದಿದ್ದಾರೆ.

‘2021ರ ಮಾರ್ಚ್‌ ಹಾಗೂ ಆಗಸ್ಟ್‌ನಲ್ಲಿ ಅರೆ ಸರ್ಕಾರಿ ಪತ್ರಗಳನ್ನು ನಿಮಗೆ ಕಳಿಸಲಾಗಿತ್ತು. ಎಲ್ಲ ರಾಜ್ಯಗಳೂ ‘ಆಸ್ತಿಗಳ ನಗದೀಕರಣ ಮತ್ತು ಬಂಡವಾಳ ಹಿಂತೆಗೆತ’ಕ್ಕಾಗಿಮೂರು ವರ್ಷಗಳ ಯೋಜನೆಯನ್ನು ಸಿದ್ಧಪಡಿಸಿ ನೀತಿ ಆಯೋಗಕ್ಕೆ ಶೀಘ್ರವಾಗಿ ಕಳಿಸಬೇಕಾಗಿದ್ದು, ನಿಮ್ಮ ಇಲಾಖೆಗಳಿಂದ ಸೃಜಿಸಲಾದ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಯೋಜನಾ ಇಲಾಖೆಗೆ ಕಳಿಸಲು ಸೂಚಿಸಲಾಗಿತ್ತು. ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಇಂಧನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಿಂದ ಮಾತ್ರ ಕೆಲವೊಂದು ಮಾಹಿತಿಗಳು ಬಂದಿವೆ. ಎಲ್ಲ ಇಲಾಖೆಗಳವರೂ ಆಸ್ತಿ ನಗದೀಕರಣ ದತ್ತಾಂಶದ ಸಂಪೂರ್ಣ ಮಾಹಿತಿಯನ್ನು ಇದೇ 15ರೊಳಗೆ ಕಳಿಸಬೇಕು’ ಎಂದು ಪತ್ರದಲ್ಲಿ ಸೂಚಿಸಿದ್ದಾರೆ.

ಸ್ವತ್ತುಗಳ ಮೌಲ್ಯಮಾಪನಕ್ಕಾಗಿ ಉಪನೋಂದಣಾಧಿಕಾರಿಗಳು, ಕಂದಾಯ ಇಲಾಖೆಯವರು ಸಿದ್ಧಪಡಿಸಿದ ಮಾರ್ಗಸೂಚಿ ದರವನ್ನು ಬಳಸಲು ಹಾಗೂ ಆಸ್ತಿ ನಗದೀಕರಣಕ್ಕೆ ಸೂಕ್ತ ಯೋಜನೆಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ. ಪತ್ರದ ಜತೆ ಲಗತ್ತಿಸಲಾದ ನಮೂನೆಯಲ್ಲಿ, ಆಸ್ತಿಯ ವಿಧ, ಸ್ಥಳ, ಈ ಆಸ್ತಿಯು ನಗದೀಕರಣದ ಮೌಲ್ಯ ಹೊಂದಿದೆಯೇ ಎಂಬುದನ್ನು ತಿಳಿಸುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT