ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಗೋಹತ್ಯೆಗೆ 7 ವರ್ಷ ಜೈಲು, 5 ಲಕ್ಷದವರೆಗೆ ದಂಡ

ಮಸೂದೆ ಪ್ರತಿ ಹರಿದ ಸಿದ್ದರಾಮಯ್ಯ: ಸಭಾತ್ಯಾಗದ ಮಧ್ಯೆ ಮಸೂದೆ ಅಂಗೀಕಾರ
Last Updated 9 ಡಿಸೆಂಬರ್ 2020, 20:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ಮಾಡಿದವರಿಗೆ 7 ವರ್ಷದವರೆಗೆ ಜೈಲು ಮತ್ತು ಗರಿಷ್ಠ ₹10 ಲಕ್ಷದವರೆಗೆ ದಂಡ ವಿಧಿಸುವ ‘ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ’ಗೆ ವಿರೋಧ ಪಕ್ಷಗಳ ಆಕ್ರೋಶ ಮತ್ತು ಸಭಾತ್ಯಾಗದ ಮಧ್ಯೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿತು.

ಕೇಸರಿ ಶಾಲುಗಳನ್ನು ಹೊದ್ದಿದ್ದ ಬಿಜೆಪಿ ಶಾಸಕರು ಮತ್ತು ಸಚಿವರು ಮಸೂದೆ ಅಂಗೀಕಾರವಾಗುತ್ತಿದ್ದಂತೆ ‘ಗೋ ಮಾತೆಗೆ ಜೈ’, ‘ಜೈಶ್ರೀರಾಮ್‌’ ಇತ್ಯಾದಿ ಅಬ್ಬರದ ಘೋಷಣೆಗಳನ್ನು ಕೂಗಿದರು.

ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಮಸೂದೆಯನ್ನುಮಧ್ಯಾಹ್ನ ಮಂಡಿಸಿದರು. ಇದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸಿಟ್ಟಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಸೂದೆ ಪ್ರತಿ ಹರಿದು ಮೇಲಕ್ಕೆ ತೂರಿದರು.

‘ಕಲಾಪ ಸಲಹಾ ಸಮಿತಿಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸುವ ವಿಷಯವನ್ನೇ ಪ್ರಸ್ತಾಪಿಸಿರಲಿಲ್ಲ. ಇದ್ದಕ್ಕಿದ್ದಂತೆ ಮಸೂದೆ ಹೇಗೆ ಮಂಡಿಸುತ್ತಿದ್ದೀರಿ’ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮಹತ್ವದ ಮಸೂದೆ ಇದ್ದರೆ ಮಂಡಿಸಲಾಗುವುದು ಎಂದು ಸಭೆಯಲ್ಲಿ ಎಲ್ಲರ ಗಮನಕ್ಕೆ ತರಲಾಗಿತ್ತು’ ಎಂದರು.

ಪೂರ್ವಭಾವಿಯಾಗಿ ಸದನದ ಗಮನಕ್ಕೆ ತರದೇ, ಕಾರ್ಯಸೂಚಿ ಪಟ್ಟಿಯಲ್ಲೂ ಸೇರಿಸದೇ, ಮಸೂದೆ ಪ್ರತಿಗಳನ್ನು ವಿತರಿಸದೇ ಏಕಾಏಕಿ ಮಸೂದೆ ಮಂಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆಯಿತು.

‘ನಮಗೂ ಈ ವಿಷಯದ ಬಗ್ಗೆ ಚರ್ಚೆ ಮಾಡಬೇಕಾಗಿದ್ದು, ನಾಳೆ ವಿಷಯವನ್ನು ಕೈಗೆತ್ತಿಕೊಳ್ಳಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ಆದರೆ, ಆಡಳಿತ ಪಕ್ಷ ಇದಕ್ಕೆ ಒಪ್ಪಲಿಲ್ಲ. ‘ಇವತ್ತೇ ಮಸೂದೆಯನ್ನು ಅಂಗೀಕರಿಸಬೇಕು’ ಎಂದು ಪಟ್ಟು ಹಿಡಿದರು. ಧಿಕ್ಕಾರ ಮತ್ತು ಘೋಷಣೆಗಳ ಮಧ್ಯೆಯೇ ಕಾನೂನು ಸಚಿವ ಸಚಿವ ಜೆ.ಸಿ.ಮಾಧುಸ್ವಾಮಿ, ಮಸೂದೆಯ ಉದ್ದೇಶಗಳನ್ನು ಸದನಕ್ಕೆ ವಿವರಿಸಿದರು.

ಮಸೂದೆ ಮಂಡನೆಯ ವಿಧಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಇನ್ನು ಸದನಕ್ಕೆ ಬರುವುದಿಲ್ಲ ಎಂದು ಹೇಳುತ್ತಾ ಸಭಾತ್ಯಾಗ ನಡೆಸಿದರು.

ಮಸೂದೆಯ ಪ್ರಮುಖ ಅಂಶಗಳು:

*ಜಾನುವಾರು ವ್ಯಾಪ್ತಿಯಲ್ಲಿ ಹಸು,ಕರು, ಎಮ್ಮೆ, ಎತ್ತು ಸೇರಿವೆ. 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಒಳಗೊಂಡಿವೆ.

* ಗೋಹತ್ಯೆ ಮಾಡಿದರೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ

*ಒಂದು ಜಾನುವಾರು ಹತ್ಯೆ ಮಾಡಿದರೆ ₹50 ಸಾವಿರದಿಂದ ₹5 ಲಕ್ಷದವರೆಗೆ ದಂಡ

* ಎರಡು ಅಥವಾ ಹೆಚ್ಚಿನ ಅಪರಾಧಕ್ಕೆ ₹1 ಲಕ್ಷದಿಂದ ₹10 ಲಕ್ಷ ದಂಡ ಮತ್ತು 7 ವರ್ಷ ಕಾರಾಗೃಹ ವಾಸ

*ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ

* ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ

* 13 ವರ್ಷಕ್ಕೆ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಕಡ್ಡಾಯ

* ಗೋಹತ್ಯೆಯ ಉದ್ದೇಶದಿಂದ ಹೊರ ರಾಜ್ಯಗಳಿಗೆ ಸಾಗಣೆ ನಿಷೇಧ

*ಸಬ್‌ ಇನ್ಸ್‌ಪೆಕ್ಟರ್‌ ದರ್ಜೆಯ ಅಧಿಕಾರಿಗಳಿಗೆ ಪೂರ್ಣಾಧಿಕಾರ

* ಇನ್ಸ್‌ಪೆಕ್ಟರ್ ದರ್ಜೆಗಿಂತ ಮೇಲ್ಪಟ್ಟ ಪೊಲೀಸ್‌ ಅಧಿಕಾರಿಗೆ ಶೋಧಿಸುವ ಮತ್ತು ಜಪ್ತಿ ಮಾಡುವ ಅಧಿಕಾರ

* ವಶಕ್ಕೆ ಪಡೆದ ವಿಚಾರವನ್ನು ಕೂಡಲೇ ಉಪವಿಭಾಗಾಧಿಕಾರಿ ಮ್ಯಾಜಿಸ್ಟ್ರೇಟರ್‌ಗಳಿಗೆ ತಿಳಿಸಿ ಜಾನುವಾರು ಮುಟ್ಟುಗೋಲು ಹಾಕಿಕೊಳ್ಳುವುದು

*ಗೋಮಾಂಸ ವಶಕ್ಕೆ ಪಡೆದರೆ ಅದು ಮನುಷ್ಯನ ಉಪಭೋಗಕ್ಕೆ ಅಲ್ಲ ಎಂದು ಪರಿಗಣಿಸಿ ನಾಶಪಡಿಸಬಹುದು

* ವಶಕ್ಕೆ ತೆಗೆದುಕೊಂಡ ಹಸುಗಳನ್ನು ಹರಾಜು ಹಾಕಬಹುದು. ಸೆಕ್ಷನ್‌ 19 ರ ಪ್ರಕಾರ ವಶಕ್ಕೆ ಪಡೆದ ಹಸುಗಳನ್ನು ಆರೋಪಿಗಳಿಗೆ ವಾಪಸ್‌ ಮಾಡುವಂತಿಲ್ಲ

*ಸೆಷನ್‌ ನ್ಯಾಯಾಧೀಶರ ಹಂತದಲ್ಲೇ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಆರೋಪ ಸಾಬೀತಾದರೆ ಹಸು, ಸಾಗಣೆಗೆ ಬಳಸಿದ ವಾಹನ ಮತ್ತು ಜಾನುವಾರು ಕಟ್ಟಿಹಾಕಿದ್ದ ಸ್ಥಳ ಮುಟ್ಟುಗೋಲು ಹಾಕಿಕೊಳ್ಳಬಹುದು

*ಕರ್ನಾಟಕ ಸೊಸೈಟಿ ಕಾಯ್ದೆಯ ಪ್ರಕಾರ ನೋಂದಾಯಿತ ಸಂಸ್ಥೆಗಳಿಗೆ ಮಾತ್ರ ಗೋ ಶಾಲೆ ನಡೆಸಲು ಅವಕಾಶ

ಜನತಾ ನ್ಯಾಯಾಲಯಕ್ಕೆ ಹೋಗ್ತೇವೆ: ಸಿದ್ದರಾಮಯ್ಯ

‘ಕರ್ನಾಟಕದ ಇತಿಹಾಸದಲ್ಲಿ ಇಂತಹದ್ದು ನಡೆದಿಲ್ಲ. ಕಲಾಪದ ನಿಯಮಗಳನ್ನೇ ಬುಲ್ಡೋಜ್‌ ಮಾಡಿ ಮಸೂದೆ ಅಂಗೀಕರಿಸಿದ್ದಾರೆ. ಇನ್ನು ಮುಂದೆ ಸದನವನ್ನೇ ಬಹಿಷ್ಕಾರ ಮಾಡುತ್ತೇನೆ. ಸ್ವೇಚ್ಛಾಚಾರವಾಗಿ ವರ್ತಿಸುವ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸವಿಲ್ಲ. ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗೋಪೂಜೆ ಮಾಡಿದ ಸಚಿವ

ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ ಬಳಿಕ ಸಚಿವ ಪ್ರಭು ಚವ್ಹಾಣ್ ಅವರು ವಿಧಾನಸೌಧದ ಪೂರ್ವ ದ್ವಾರದಲ್ಲಿ ಗೋ ಪೂಜೆ ಮಾಡಿದರು.

ಸದನದಲ್ಲಿ ಗದ್ದಲ ಇದ್ದ ಕಾರಣ ಸಭಾಧ್ಯಕ್ಷರು 10 ನಿಮಿಷ ಕಲಾಪ ಮುಂದೂಡಿದ್ದರು. ಈ ಸಮಯದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಶಾಸಕರ ಜತೆ ಚವ್ಹಾಣ್ ಗೋ ಪೂಜೆ ಮಾಡಿದರು. ಮತ್ತೆ ಸದನ ಸೇರಿದಾಗ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಶಾಸಕರು ಮತ್ತು ಸಚಿವರ ಹೆಗಲ ಮೇಲೆ ಕೇಸರಿ ಶಾಲುಗಳು ಇದ್ದವು. ಆದರೆ, ಕಾನೂನು ಸಚಿವ ಮಾಧುಸ್ವಾಮಿ ಮತ್ತು ಒಂದಿಬ್ಬರು ಶಾಸಕರು ಕೇಸರಿ ಶಾಲು ಹಾಕಿಕೊಂಡಿರಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT