ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಣದ ಅದಿರು ಸಾಗಣೆಗೆ ಮಾರ್ಗಸೂಚಿ

Last Updated 13 ಜೂನ್ 2022, 16:10 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬಿಣದ ಅದಿರನ್ನು ರಾಜ್ಯ, ಹೊರ ರಾಜ್ಯಗಳ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಾಗೂ ವಿದೇಶಗಳಿಗೆ ರಫ್ತುಮಾಡಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವುದರಿಂದ ಅದಿರಿನ ಸಾಗಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭಾನುವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಲಭ್ಯವಿರುವ ಕಬ್ಬಿಣದ ಅದಿರನ್ನು ಸುಪ್ರೀಂ ಕೋರ್ಟ್‌ ನೇಮಿಸಿರುವ ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲೇ ರಾಜ್ಯದಲ್ಲಿ ಇ–ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಗಣಿ ಮಾಲೀಕರ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್‌, ಗಣಿ ಮಾಲೀಕರಿಂದ ಕಬ್ಬಿಣದ ಅದಿರಿನ ನೇರ ಮಾರಾಟ ಹಾಗೂ ರಫ್ತು ಮಾಡುವುದಕ್ಕೂ ಅನುಮತಿ ನೀಡಿ ಮೇ 20ರಂದು ಆದೇಶಿಸಿತ್ತು. ಅದಕ್ಕೆ ಪೂರಕವಾಗಿ ಸಾಗಣೆ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಗಣಿ ಮಾಲೀಕರು ರಾಜಧನ, ಜಿಲ್ಲಾ ಖನಿಜ ನಿಧಿ ವಂತಿಕೆ ಸೇರಿದಂತೆ ಎಲ್ಲ ಬಗೆಯ ಶುಲ್ಕಗಳನ್ನು ಪಾವತಿಸಿದ ಬಳಿಕವೇ ಅದಿರು ಸಾಗಣೆಗೆ ಪರವಾನಗಿ ವಿತರಿಸಬೇಕು. ಸಾಗಣೆ ಪರವಾನಗಿ ಅಗತ್ಯವಿರುವ ಅದಿರನ್ನು ಗುತ್ತಿಗೆದಾರರು ಪ್ರತ್ಯೇಕವಾಗಿ ಇರಿಸಬೇಕು.ಸಗಟು ಪರವಾನಗಿ ಕೋರುವವರು ಅದಿರಿನ ರಾಸಾಯನಿಕ ವಿಶ್ಲೇಷಣಾ ವರದಿ ಮತ್ತು ರಾಶಿಯ ಜಿಪಿಎಸ್‌ ಮಾಹಿತಿಯನ್ನೂ ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಗಣಿ ಇಲಾಖೆಯ ಉಪ ನಿರ್ದೇಶಕರು, ಹಿರಿಯ ಭೂವಿಜ್ಞಾನಿಗಳು ಅದಿರಿನ ದಾಸ್ತಾನನ್ನು ಪರಿಶೀಲಿಸಿದ ಬಳಿಕವೇ ಪರವಾನಗಿ ನೀಡಬೇಕು. ರಾಜ್ಯ ಮತ್ತು ದೇಶದೊಳಗೆ ಕಬ್ಬಿಣದ ಅದಿರಿನ ಬಳಕೆಗೆ ನೋಂದಣಿ ಮಾಡಿಸಿಕೊಂಡಿರುವ ಉದ್ದಿಮೆಗಳಿಗಷ್ಟೇ ಪೂರೈಸಲು ಅನುಮತಿ ನೀಡಬೇಕು. ರಫ್ತು ಉದ್ದೇಶಕ್ಕೆ ಸಾಗಣೆ ಪರವಾನಗಿ ಪಡೆಯುವವರು ಖರೀದಿದಾರರ ವಿವರ, ವಹಿವಾಟು ದಾಖಲೆ, ಶಿಪ್ಪಿಂಗ್‌ ಬಿಲ್‌, ರಫ್ತು ಬಿಲ್‌ ಸಲ್ಲಿಸುವುದು ಕಡ್ಡಾಯ.

‘ಎ’ ಮತ್ತು ‘ಬಿ’ ದರ್ಜೆಯ ಗಣಿಗಳಿಂದ ಅದಿರು ಸಾಗಿಸಲು ಪರವಾನಗಿ ನೀಡುವ ಮೊದಲು ಗಣಿ ಬಾಧಿತ ಪ್ರದೇಶಗಳ ಪರಿಸರ ಪುನಶ್ಚೇತನಕ್ಕಾಗಿ ರೂಪಿಸಿರುವ ವಿಶೇಷ ವಾಹಕಕ್ಕೆ ನಿಗದಿತ ಮೊತ್ತವನ್ನು ಸಂದಾಯ ಮಾಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ‘ಸಿ’ ದರ್ಜೆ ಗಣಿಗಳಿಂದ ಶೇಕಡ 25ರಷ್ಟು ಮೊತ್ತ ಈ ನಿಧಿಗೆ ಪಾವತಿ ಆಗಬೇಕು. ಮೇಲುಸ್ತುವಾರಿ ಸಮಿತಿಯ ಹೆಸರಿನಲ್ಲಿರುವ ಅಧಿಕೃತ ಬ್ಯಾಂಕ್‌ ಖಾತೆಗೆ ಈ ಮೊತ್ತವನ್ನು ಪಾವತಿಸಬೇಕು ಎಂದು ಮಾರ್ಗಸೂಚಿ ಹೇಳಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಅಥವಾ ಹಿರಿಯ ಭೂ ವಿಜ್ಞಾನಿಗಳು ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರುವ ಸಂಪೂರ್ಣ ಹೊಣೆ ಹೊಂದಿರುತ್ತಾರೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT