ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಿ: ಸಚಿವ ಎಸ್‌. ಸುರೇಶ್‌ ಕುಮಾರ್‌

‘ಸಕಾಲ ಸಪ್ತಾಹ’ ಉದ್ಘಾಟಿಸಿದ ಸಚಿವ
Last Updated 30 ನವೆಂಬರ್ 2020, 6:19 IST
ಅಕ್ಷರ ಗಾತ್ರ

ಬೆಂಗಳೂರು: ‘ಸಕಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೈಜೋಡಿಸಬೇಕು. ಅರ್ಜಿಗಳ ಸ್ವೀಕಾರ, ತಿರಸ್ಕಾರ ಮತ್ತು ವಿಲೇವಾರಿ ಬಗ್ಗೆ ಹೆಚ್ಚಿನ ಗಮನಹರಿಸಬೇಕು’ ಎಂದು ಸಕಾಲ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ವಿಧಾನಸೌಧದಲ್ಲಿ ‘ಸಕಾಲ ಸಪ್ತಾಹ’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘2012ರ ಏಪ್ರಿಲ್‌ 2ರಂದು ಯೋಜನೆ ಆರಂಭಗೊಂಡ ಬಳಿಕ ಈವರೆಗೆ 22,88,81,652 ಅರ್ಜಿಗಳು ಬಂದಿವೆ. ಈ ಪೈಕಿ 22,82,55,866 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಯೋಜನೆ ಯಾವುದೇ ಹಂತದಲ್ಲಿ ದುರ್ಬಲ ಆಗಬಾರದು ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸಪ್ತಾಹ ಆಚರಿಸಲಾಗುತ್ತದೆ’ ಎಂದರು.

‘ಆರಂಭದಲ್ಲಿ ಯೋಜನೆಯಡಿ 151 ಸೇವೆಗಳನ್ನು ನೀಡಲಾಗುತ್ತಿತ್ತು. ಈಗ ಅದು 1,025ಕ್ಕೆ ಏರಿಕೆ ಆಗಿದೆ. ಆದರೆ, ಕೋವಿಡ್‌ ಬಂದ ನಂತರ ಸಕಾಲಕ್ಕೆ ಸ್ವಲ್ಪ ಹಿನ್ನೆಡೆಯಾಗಿದೆ. ಹೀಗಾಗಿ, ಯೋಜನೆಯನ್ನು ಮತ್ತೆ ಚುರುಕುಗೊಳಿಸಬೇಕು. ಸಕಾಲದ ಮಹತ್ವವನ್ನು ತಿಳಿಸಬೇಕು ಎಂಬ ಕಾರಣದಿಂದಲೂ ಈ ಸಪ್ತಾಹ ಆಚರಿಸಲಾಗುತ್ತಿದೆ’ ಎಂದರು.

‘ಮೊದಲ ಹಂತದಲ್ಲಿ ನಗರಾಭಿವೃದ್ಧಿ, ಕಂದಾಯ, ಸಾರಿಗೆ ಮತ್ತು ಆಹಾರ ಇಲಾಖೆಯಲ್ಲಿ ಸಕಾಲ ಸಪ್ತಾಹ ಕೈಗೊಳ್ಳಲಾಗುತ್ತದೆ. ಮುಂದಿನ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ತೆಗೆದುಕೊಳ್ಳುತ್ತೇವೆ. ಯಾವುದೇ ನಾಗರಿಕನಿಗೆ ತಮಗೆ ಲಭ್ಯವಿರುವ ಸೇವೆ ಪಡೆಯುವುದು ಅವನ ಹಕ್ಕು. ಅದನ್ನು ಒದಗಿಸುವುದು ಸರ್ಕಾರ ಮತ್ತು ಇಲಾಖೆಯ ಕರ್ತವ್ಯ’ ಎಂದರು.

‘ಸಕಾಲ ಯೋಜನೆಯಡಿಯಲ್ಲೇ ಅರ್ಜಿಗಳನ್ನು ಸ್ವೀಕರಿಸಬೇಕು. ಅನೇಕ ಇಲಾಖೆಗಳಲ್ಲಿ ಈ ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಅದು ಸರಿಯಲ್ಲ. ಅರ್ಜಿಗಳನ್ನು ಸ್ವೀಕರಿಸುವ ಸಂದರ್ಭದಲ್ಲಿಯೇ ಅಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳಬೇಕು. ಸಮರ್ಪಕ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಬಾರದು. ಅರ್ಜಿಗಳ ವಿಲೇವಾರಿ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು’ ಎಂದು ಸಚಿವರು ಸೂಚಿಸಿದರು.

‘ಯೋಜನೆಯ ಅನುಷ್ಠಾನ ಕುರಿತಂತೆ ಈ ಹಿಂದೆ ಮಾಸಿಕ ವರದಿಯನ್ನು ಪಡೆಯಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಅಕ್ಟೋಬರ್‌ ತಿಂಗಳಿನಿಂದ ಮತ್ತೆ ಆರಂಭಿಸಲಾಗಿದೆ. ಯೋಜನೆ ಅನುಷ್ಠಾನದಲ್ಲಿ ಯಾವ ಜಿಲ್ಲೆ, ಯಾವ ತಾಲ್ಲೂಕು, ಯಾವ ಇಲಾಖೆ ಮೊದಲ ಸ್ಥಾನದಲ್ಲಿ ಎಂಬ ಮಾಹಿತಿಯನ್ನು ಇತರ ಇಲಾಖೆಗಳಿಗೆ ಮತ್ತು ಜನರಿಗೆ ನೀಡಲಾಗುವುದು’ ಎಂದು ಅವರು ಹೇಳಿದರು.

ಮಂಡ್ಯಕ್ಕೆ ಮೊದಲ ಸ್ಥಾನ: ‘ಯೋಜನೆಯ ಅನುಷ್ಠಾನದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಮಂಡ್ಯ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಕೊನೆಯ ಸ್ಥಾನದಲ್ಲಿ ಬೆಂಗಳೂರು ನಗರ, ಅದಕ್ಕಿಂತ ಮೇಲಿನ ಸ್ಥಾನದಲ್ಲಿ ಬೀದರ್‌, ಅದರ ಮೇಲಿನ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಇದೆ. ಅತೀ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ, ಬೆಳಗಾವಿ ಮತ್ತು ಮೈಸೂರು ಮೊದಲ ಮೂರು ಸ್ಥಾನಗಳಲ್ಲಿವೆ. ಕಂದಾಯ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳಲ್ಲಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದೂ ಸಚಿವರು ಮಾಹಿತಿ ನೀಡಿದರು.

‘ಅರ್ಜಿಗಳ ವಿಲೇವಾರಿಯಲ್ಲಿ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಬೇಕು. ಅನೇಕ ಕಚೇರಿಗಳಲ್ಲಿ ಸಕಾಲ ಕುರಿತು ಮಾಹಿತಿ ನೀಡುವ ಫಲಕಗಳಲೇ ಇಲ್ಲ. ಈ ಸಪ್ತಾಹದ ಅವಧಿಯಲ್ಲಿ ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ಫಲಕಗಳನ್ನು ಹಾಕಬೇಕು. ಯೋಜನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ಮತ್ತು ಅವರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ಆಗಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಸಕಾಲ ಸಮನ್ವಯ ಸಮಿತಿ ಸಭೆ ನಡೆಸಿ ಯೋಜನೆಯ ಅನುಷ್ಠಾನದ ಪರಾಮರ್ಶೆ ನಡೆಸಬೇಕು’ ಎಂದೂ ಅವರು ಸಲಹೆ ನೀಡಿದರು.

‘ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದೂ ಸಚಿವರು ಸಲಹೆ ನೀಡಿದರು.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಮಾತನಾಡಿ, ‘ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು. ಅರ್ಜಿಗಳ ವಿಲೇವಾರಿ ವಿಳಂಬ ಮಾಡಿದವರಿಗೆ ದಂಡ ವಿಧಿಸಲು ಅವಕಾಶ ಇದೆ. ವಿಲೇವಾರಿ ಮಾಡಲು ವಿಳಂಬ ಆದ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಈ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು. ಹೀಗೆ ಸಲ್ಲಿಕೆಯಾದ 1,813 ಮೇಲ್ಮನವಿಗಳು ವಿಲೇವಾರಿ ಬಾಕಿ ಇದೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅರ್ಜಿಗಳನ್ನು ಅಧಿಕಾರಿಗಳು ಉದ್ದೇಶಪೂರ್ವವಾಗಿ ವಿಳಂಬ ಅಥವಾ ತಿರಸ್ಕರಿಸಬಾರದು’ ಎಂದೂ ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT