ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳಿಗೆ ಶೇ 2 ಮೀಸಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

Last Updated 16 ಆಗಸ್ಟ್ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ನೀಡುತ್ತಿರುವ ಮಾದರಿಯಲ್ಲೇ ಇತರ ಇಲಾಖೆಗಳ ಹುದ್ದೆಗಳಲ್ಲೂ ಮೀಸಲಾತಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಪಡೆದ ಕ್ರೀಡಾಪಟುಗಳಿಗೆ ಮತ್ತು ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆಯಾದ 75 ಕ್ರೀಡಾಪಟುಗಳಿಗೆ ಮಂಗಳವಾರ ಏರ್ಪಡಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಮೀಸಲಾತಿ ನೀಡುವ ಕುರಿತ ಕಡತ ನನ್ನ ಮುಂದಿದ್ದು, ಅದಕ್ಕೆ ಆದಷ್ಟು ಬೇಗನೆ ಅನುಮೋದನೆ ನೀಡಲಾಗುವುದು’ ಎಂದರು.

‘ಕೇವಲ ಸರ್ಕಾರಿ ಹುದ್ದೆ ಗಿಟ್ಟಿಸುವುದಕ್ಕಾಗಿ ಕ್ರೀಡಾಪಟುಗಳಾಗಬೇಡಿ. ಕ್ರೀಡಾಪಟುಗಳ ಜೀವನಕ್ಕೆ ಭದ್ರತೆ ಬೇಕು ಎನ್ನುವುದನ್ನು ಸರ್ಕಾರ ಮನಗಂಡಿದೆ. ಕ್ರೀಡೆಯನ್ನು ನನಗೋಸ್ಕರ ಮತ್ತು ದೇಶಕ್ಕಾಗಿ ಪದಕ ಗೆಲ್ಲಲು ಆಡುತ್ತಿದ್ದೇನೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಸಾಧನೆಗಳಿಗೆ ತಕ್ಕಂತೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತೇವೆ.ಪ್ರಶಸ್ತಿ ಮೊತ್ತ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸುತ್ತೇನೆ’ ಎಂದು ಬೊಮ್ಮಾಯಿ ಹೇಳಿದರು.

ಬ್ಯಾಸ್ಕೆಟ್‌ ಬಾಲ್‌ ರಾಜ್ಯ ಕ್ರೀಡೆ: ‘ಬ್ಯಾಸ್ಕೆಟ್‌ ಬಾಲ್‌ ಅನ್ನು ರಾಜ್ಯದ ಕ್ರೀಡೆಯಾಗಿ ಅಳವಡಿಸಿಕೊಳ್ಳುತ್ತೇವೆ. ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ’ ಎಂದರು.

ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ‘ಹಿಂದಿನ ಯಾವುದೇ ಸರ್ಕಾರಗಳು ನೀಡದಷ್ಟು ಪ್ರೋತ್ಸಾಹ ಮತ್ತು ಆರ್ಥಿಕ ನೆರವನ್ನು ನಮ್ಮ ಸರ್ಕಾರ ನೀಡುತ್ತಿದೆ. ಅಮೃತ ಯೋಜನೆಯಡಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದಾರೆ’ ಎಂದು ಹೇಳಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಗುರುರಾಜ್‌ ಪೂಜಾರಿ, ರಾಜೇಶ್ವರಿ ಗಾಯಕ್ವಾಡ್, ಪ್ರಿಯಾಮೋಹನ್‌, ಅಂಕಿತಾ ಸುರೇಶ್‌ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT