ಶನಿವಾರ, ಅಕ್ಟೋಬರ್ 1, 2022
25 °C

ಅತಿವೃಷ್ಟಿಯಿಂದ 1.37 ಲಕ್ಷ ಹೆಕ್ಟೇರ್‌ ಬೆಳೆ ನಾಶ: ಆರ್‌.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ತಿಂಗಳ ಮಳೆ ಮತ್ತು ಪ್ರವಾಹದಿಂದ ಈವರೆಗೆ ಒಟ್ಟು 1,37,029 ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, ಮಳೆ ಮುಗಿಯುತ್ತಿದ್ದಂತೆ ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಅತಿವೃಷ್ಟಿಯ ಸ್ಥಿತಿಗತಿಯ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಕೃಷಿ ಬೆಳೆಗಳು 1,29,087 ಹೆಕ್ಟೇರ್‌ ಮತ್ತು ತೋಟಗಾರಿಕಾ ಬೆಳೆಗಳು 7,942 ಹೆಕ್ಟೇರ್‌ನಷ್ಟು ನಷ್ಟವಾಗಿದೆ. 14 ಜಿಲ್ಲೆಗಳು ಮತ್ತು 161 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಈ ಅವಧಿಯಲ್ಲಿ ಒಟ್ಟು 73 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿವರ ನೀಡಿದರು.

ಈ ಬಾರಿಯೂ ಬೆಳೆ ಹಾನಿ ಪರಿಹಾರ ಸಹಾಯಧನವನ್ನು ಪರಿಷ್ಕರಿಸಲಾಗಿದೆ. ಅದರ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಹೆಕ್ಟರ್‌ಗೆ ₹13,800, ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ₹25,500 ಮತ್ತು ಬಹುವಾರ್ಷಿಕ ಬೆಳೆ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ ₹28,000 ನಿಗದಿ ಮಾಡಲಾಗಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಒಟ್ಟು ₹857 ಕೋಟಿ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಲಭ್ಯವಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ₹86 ಕೋಟಿ, ಬಾಗಲಕೋಟೆ ₹23 ಕೋಟಿ, ವಿಜಯಪುರ ₹28 ಕೋಟಿ, ಬೀದರ್‌ ₹20 ಕೋಟಿ ಇದೆ. ಪರಿಹಾರ ಕಾರ್ಯಕ್ಕೆ ಬಿಡಿಗಾಸೂ ಇಲ್ಲ ಎಂದು ವಿರೋಧಪಕ್ಷಗಳ ಟೀಕೆಯಲ್ಲಿ ಯಾವುದೇ ಹುರುಳಿಲ್ಲ. ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿ ಕಾರಿದರು.

ಮೂಲ ಸೌಕರ್ಯಕ್ಕೆ ಹಾನಿ: ರಾಜ್ಯದಲ್ಲಿ ಒಟ್ಟು 11,768 ಕಿ.ಮೀ, ಸೇತುವೆ, ಕಿರು ಸೇತುವೆಗಳು 1,152, ಹಾನಿಗೊಳಗಾದ ಶಾಲೆಗಳು 4,561, ಅಂಗನವಾಡಿ ಕೇಂದ್ರಗಳು 2,249, ವಿದ್ಯುತ್‌ ಕಂಬಗಳು 17,066, ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು 1,472 ಹಾನಿಗೊಳಗಾಗಿವೆ ಎಂದು ಅಶೋಕ ತಿಳಿಸಿದರು.

ಪ್ರವಾಹ ಪರಿಹಾರಕ್ಕಾಗಿ 26 ಜಿಲ್ಲೆಗಳಿಗೆ ಜುಲೈ 8 ರಂದು ₹55 ಕೋಟಿ, ಆಗಸ್ಟ್‌ 4 ರಂದು ಮನೆಗಳ ಹಾನಿಗಳ ಪರಿಹಾರಕ್ಕಾಗಿ ₹300 ಕೋಟಿ ಹಾಗೂ ಆ.6 ರಂದು 21 ಜಿಲ್ಲೆಗಳಿಗೆ ಒಟ್ಟು ₹200 ಕೋಟಿ ಬಿಡುಗಡೆ ಮಾಡಲಾಗಿದೆ. 

ಪರಿಹಾರ: 2021 ರಲ್ಲಿ ಅತಿವೃಷ್ಟಿಯಿಂದ 14,93,811 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಆಗಿತ್ತು. ಒಟ್ಟು 18.52 ಲಕ್ಷ ರೈತರಿಗೆ ₹2,446.08 ಕೋಟಿ ಪರಿಹಾರವನ್ನು ನೀಡಲಾಗಿದೆ. ಇದರಲ್ಲಿ ಎಸ್‌ಡಿಆರ್‌ಎಫ್‌ ವತಿಯಿಂದ ₹1285.58 ಕೋಟಿ, ಹೆಚ್ಚುವರಿಯಾಗಿ ₹1960 ಕೋಟಿ ಪರಿಹಾರ ನೀಡಲಾಗಿತ್ತು. ಇಡೀ ದೇಶದಲ್ಲಿ ಹೆಚ್ಚುವರಿ ಬೆಳೆ ಪರಿಹಾರ ನೀಡಿದ್ದು ನಮ್ಮ ರಾಜ್ಯದಲ್ಲಿಯೇ ಎಂದು ಅಶೋಕ ಹೇಳಿದರು.

ಸಂತ್ರಸ್ತರಿಗೆ ‘ಕಾಳಜಿ ಕಿಟ್‌’ 

ಮಳೆ, ಪ್ರವಾಹ ಮತ್ತು ಭೂಕುಸಿತ ಪ್ರದೇಶದಲ್ಲಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯದೇ ಸ್ನೇಹಿತರು ಅಥವಾ ಸಂಬಂಧಿ ಮನೆಗಳಲ್ಲಿ ಉಳಿದುಕೊಳ್ಳುವ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಒಳಗೊಂಡ ಕಾಳಜಿ ಕಿಟ್‌ ವಿತರಿಸಲಾಗುವುದು ಎಂದು ಸಚಿವ ಅಶೋಕ ತಿಳಿಸಿದರು.

ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದು ಮರಳಿ ಮನೆಗಳಿಗೆ ಹೋದವರಿಗೂ ಮನೆಗಳನ್ನು ಸುಸ್ಥಿತಿಗೆ ತರುವವರೆಗೂ ಕಾಳಜಿ ಕಿಟ್‌ಗಳನ್ನು ನೀಡಲಾಗುವುದು. ಇದರಲ್ಲಿ 10 ಕೆ.ಜಿ.ಅಕ್ಕಿ, ತೊಗರಿಬೇಳೆ, ಉಪ್ಪು,ಸಕ್ಕರೆ, ಅಡುಗೆ ಎಣ್ಣೆ, ಕಾರದಪುಡಿ, ಸಾಸಿವೆ, ಜೀರಿಗೆ, ಸಾಂಬಾರ್‌ಪುಡಿ, ಟೀಪುಡಿ, ಅರಿಶಿನಪುಡಿ ನೀಡಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು