ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಔಷಧಗಳ ರಿಯಾಯಿತಿ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈ ಕೋರ್ಟ್

Last Updated 4 ಡಿಸೆಂಬರ್ 2022, 4:54 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸ್‌ರ್ ಪೀಡಿತರ ಪಾಲಿನ 42 ವಿಧವಾದ ಅವಶ್ಯಕ ಔಷಧಗಳ ದರಕ್ಕೆ ಶೇ 30ರಷ್ಟು ರಿಯಾಯಿತಿ ನೀಡಿದ್ದ ಆದೇಶವನ್ನು ಪ್ರಶ್ನಿಸಲಾಗಿದ್ದ ರಿಟ್ ಅರ್ಜಿಯೊಂದನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್(ಎಚ್‌ಸಿಜಿ) ಕಂಪನಿಯ ಬೆಂಗಳೂರು ಶಾಖೆಯ ಪ್ರತಿನಿಧಿ ಸಲ್ಲಿಸಿದ್ದ ಅರ್ಜಿ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ನವೆಂಬರ್ 15ರಂದು ಪ್ರಕಟಿಸಿದೆ.

‘ಕ್ಯಾನ್ಸ್‌ರ್ ರೀತಿಯ ಮಾರಕ ರೋಗ ಗುಣಪಡಿಸಲು ಬಳಸಲಾಗುವ ಔಷಧಗಳ ಬೆಲೆಯ ಮೇಲೆ ನಿಯಂತ್ರಣ ಹೇರದೇ ಹೋದಲ್ಲಿ ಬಹುಸಂಖ್ಯಾತ ಬಡವರ ಜೀವಕ್ಕೆ ಕುತ್ತು ಉಂಟಾಗಲಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಕಾನೂನು ರೂಪಿಸುತ್ತವೆ. ಕಾನೂನು ಬದ್ಧ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಗತ್ಯ ಅಥವಾ ಸೂಕ್ತವೆಂದು ಭಾವಿಸುವ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಅರ್ಹವಾಗಿರುತ್ತವೆ. ಹೀಗಾಗಿ ಕ್ಯಾನ್ಸರ್ ನಿಯಂತ್ರಣಕ್ಕೆ ಬಳಸಲಾಗುವ ವಿವಿಧ ಔಷಧಿಗಳ‌ ದರಗಳ ಮೇಲೆ ನಿಯಂತ್ರಣ ಹೇರಿರುವ ರಾಷ್ಟ್ರೀಯ ಔಷಧೀಯ ದರನಿಗದಿ ಪ್ರಾಧಿಕಾರದ ಕ್ರಮ ಸರಿಯಾಗಿಯೇ ಇದೆ. ಚಿಲ್ಲರೆ ಮಾರಾಟದಲ್ಲಿ ಶೇ 30ರಷ್ಟು ರಿಯಾಯಿತಿ ನೀಡಿ ಮಾರಾಟ ಮಾಡಬೇಕೆಂಬ ನಿಯಂತ್ರಣದ ಹೆಜ್ಜೆ ಕಾನೂನು ಬದ್ಧವಾಗಿಯೇ ಇದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ– ಅಂಶಗಳ ಪ್ರಕಾರ ಕ್ಯಾನ್ಸರ್ ಪ್ರಮುಖ ರೋಗವಾಗಿದ್ದು, ವಿಶ್ವದಲ್ಲಿ 18 ಮಿಲಿಯನ್ ಮತ್ತು ಭಾರತವೊಂದರಲ್ಲೇ 1.5 ಮಿಲಿಯನ್ ಪ್ರಮಾಣದಷ್ಟು ಜನರು ಈ ಮಾರಕ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಈ ಪ್ರಮಾಣ ಮುಂದಿನ 15 ವರ್ಷಗಳಲ್ಲಿ ದುಪ್ಪಟ್ಟಾಗುವ ಅಂದಾಜಿದೆ. ಹೀಗಾಗಿ, ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗಾಗಿ ನೀಡಲಾಗುವ ಔಷಧಗಳು ಜನಸಾಮಾನ್ಯರ ಕೈಗೆ ಎಟಕುವಂತಿರಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?:

‘ಕ್ಯಾನ್ಸರ್ ನಿಯಂತ್ರಣಕ್ಕಾಗಿ ಬಳಸಾಗುವ 42 ವಿವಿಧ ಔಷಧಿಗಳ ದರದ ಮೇಲೆ ಉತ್ಪಾದಕರು ಶೇ 30ರಷ್ಟು ರಿಯಾಯಿತಿ ನೀಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ 2019ರ ಫೆಬ್ರುವರಿ 27ರಂದು ಆದೇಶ ಹೊರಡಿಸಿತ್ತು. ರಾಷ್ಟ್ರೀಯ ಔಷಧಿ ದರ ನಿಗದಿ ಪ್ರಾಧಿಕಾರದ ಶಿಫಾರಸಿನ ಅನುಸಾರ ಹೊರಡಿಸಲಾದ ಈ ರಿಯಾಯಿತಿಯ ಶೇ 30ರ ಮಿತಿ ಏಕಪಕ್ಷೀಯ ಮತ್ತು ಸಕಾರಣ ರಹಿತವಾಗಿದೆ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ವಾದವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ ಅವರು, ‘ಕೆಲವು ಔಷಧಗಳ ಮೇಲೆ ಉತ್ಪಾದಕರು ಶೇ 900ರಷ್ಟು ಹೆಚ್ಚಿನ ದರ ವಿಧಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರ ಈ ದಿಸೆಯಲ್ಲಿ ಹೇರಲಾಗಿರುವ ನಿಯಂತ್ರಣ ಸಕಾರಣವಾಗಿಯೇ ಇದೆ’ ಎಂದು ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT