ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎಡಿಬಿ ದರೋಡೆಕೋರ ವರ್ತನೆ ಸಲ್ಲ: ಹೈಕೋರ್ಟ್‌

Last Updated 11 ಫೆಬ್ರುವರಿ 2023, 21:25 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ನಾಗರಿಕರ ಜಮೀನನ್ನು ಸ್ವಾಧೀನಕ್ಕೆ ಪಡೆಯುವಾಗ ದರೋಡೆಕೋರನ ರೀತಿಯಲ್ಲಿ ವರ್ತಿಸುವುದು ಸಲ್ಲ’ ಎಂದು ಕಿಡಿ ಕಾರಿರುವ ಹೈಕೋರ್ಟ್‌, ‘ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಅದರ ಅಧಿಕಾರಿಗಳ ನಡವಳಿಕೆ ತೀವ್ರಗಾಮಿತನದಿಂದ ಕೂಡಿರುವುದು ಪಾಳೆಗಾರಿಕೆಯ ಪ್ರತಿಬಿಂಬದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪರಿಹಾರ ವಿಳಂಬ ಪ್ರಶ್ನಿಸಿ ಬೆಂಗಳೂರಿನ ಜೆ.ಪಿ.ನಗರದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಎಂ.ಗುರುಪ್ರಸಾದ್ ಎಂಬುವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ದೇವನಹಳ್ಳಿ ತಾಲ್ಲೂಕಿನ ಜೊನ್ನಹಳ್ಳಿ ಗ್ರಾಮದಲ್ಲಿ ಗುರುಪ್ರಸಾದ್ 2007ರ ಜನವರಿ 27ರಂದು 5.1 ಎಕರೆ ಜಮೀನು ಹಾಗೂ ನಂದಿನಿ ಅವರು 2006ರ ಡಿಸೆಂಬರ್ 23ರಂದು 38 ಗುಂಟೆ ಜಮೀನು ಖರೀದಿಸಿದ್ದರು. ಈ ಜಮೀನನ್ನು ಕೆಐಎಡಿಬಿ 2007ರ ಮೇನಲ್ಲಿ ಸ್ವಾಧೀನಕ್ಕೆ ಪಡೆದಿತ್ತು. ಕೋಟ್ಯಂತರ ಮೌಲ್ಯದ ಈ ಜಮೀನಿಗೆ ಸಕಾಲದಲ್ಲಿ ಪರಿಹಾರ ಪಾವತಿಸದ ಕಾರಣ ಇದು ಹಲವು ಸುತ್ತಿನ ವ್ಯಾಜ್ಯಕ್ಕೆ ಕಾರಣವಾಗಿತ್ತು.

ಈ ಕುರಿತಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದ ಗುರುಪ್ರಸಾದ್ ಮತ್ತು ನಂದಿನಿ ಅವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ‘ಅರ್ಜಿದಾರರ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು 15 ವರ್ಷಗಳ ಕಾಲ ಕಾಯುವಂತೆ ಮಾಡಿದ ಅಧಿಕಾರಿಗಳ ವರ್ತನೆ ಮತ್ತು ಇಷ್ಟು ಸುದೀರ್ಘ ಅವಧಿಯ ತನಕ ಪರಿಹಾರ ಪಾವತಿಯನ್ನು ಏಕೆ ತಡೆಹಿಡಿಯಲಾಗಿದೆ ಎಂಬುದಕ್ಕೆ ಕೆಐಎಡಿಬಿ ವತಿಯಿಂದ ಸಮಂಜಸವಾದ ವಿವರಣೆಯಿಲ್ಲ. ಹೀಗಾಗಿ, ಅರ್ಜಿದಾ
ರರರಿಗೆ ಶೇ 50ರ ದರದಲ್ಲಿ ಪರಿಹಾರವನ್ನು ಮರು ನಿಗದಿಪಡಿಸಬೇಕು. ಪರಿಹಾರ ಮೊತ್ತದ ಮೇಲೆ ವಾರ್ಷಿಕ ಶೇ 12ರ ಬಡ್ಡಿಯನ್ನು ಎಂಟು ವಾರಗಳ ಒಳಗೆ ಪಾವತಿಸಬೇಕು’ ಎಂದು ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT