ಶುಕ್ರವಾರ, ಜುಲೈ 1, 2022
27 °C

ಪತ್ನಿಯ ಸಮ್ಮತಿ ಇಲ್ಲದೆ ನಡೆಸುವ ಲೈಂಗಿಕತೆ ಅತ್ಯಾಚಾರಕ್ಕೆ ಸಮ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಂವಿಧಾನದ ಅಡಿಯಲ್ಲಿ ಎಲ್ಲ ಮಾನವಜೀವಿಗಳೂ ಸಮಾನರೇ, ಅವರು ಗಂಡಾಗಿದ್ದರೂ ಸರಿ, ಹೆಣ್ಣಾಗಿದ್ದರೂ ಸರಿಯೇ ಅಥವಾ ಇನ್ಯಾರೇ ಆಗಿದ್ದರೂ ಸೈ, ಸಂವಿಧಾನದ 14ನೇ ವಿಧಿಯ ಅನುಸಾರ ಸಮಾನತೆ ಸಮಾನತೆಯೇ...’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ‘ಪತಿ ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂಬ ಪ್ರಕರಣದಲ್ಲಿ ವಿಚಾರಣೆ ರದ್ದುಪಡಿಸಲು ಕೋರಿದ್ದ ಪತಿಯ ಮನವಿಯನ್ನು ತಳ್ಳಿ ಹಾಕಿದೆ.

‘ನನ್ನ ಹೆಂಡತಿ ನನ್ನ ಮೇಲೆ ಹೊರಿಸಿರುವ ಅತ್ಯಾಚಾರ ಪ್ರಕರಣ ರದ್ದುಗೊಳಿಸಬೇಕು ಹಾಗೂ ಪೋಕ್ಸೊ ಕಾಯ್ದೆಯ ಕಲಂ 29 ಮತ್ತು 30 ಸಂವಿಧಾನದ 14, 19 ಹಾಗೂ 21ಕ್ಕೆ ವಿರುದ್ಧವಾಗಿವೆ ಎಂದು ಘೋಷಿಸಬೇಕು’ ಎಂದು ಕೋರಿ ಹೃಷಿಕೇಶ (43) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಹೆಂಡತಿಯ ಜೊತೆ ನಡೆಸುವ ಲೈಂಗಿಕ ಕ್ರಿಯೆ ಸಮ್ಮತಿಯುಕ್ತವೇ ಹೊರತು ಅತ್ಯಾಚಾರವಲ್ಲ ಎಂದು ವಿವರಿಸುವ ಐಪಿಸಿ ಕಲಂ 375ರ ಕಾನೂನಾತ್ಮಕ ದೋಷವನ್ನು ಸರಿಪಡಿಸಬೇಕು. ಪತ್ನಿಯ ಶರೀರ, ಮನಸ್ಸು ಮತ್ತು ಆತ್ಮದ ಮೇಲೆ ಸವಾರಿ ನಡೆಸುವ ಪುರುಷನ ಪ್ರತಿಗಾಮಿ ಮನೋಧರ್ಮ ಕೊನೆಯಾಗಬೇಕು’ ಎಂದು ಹೇಳಿದೆ.

‘ಪತ್ನಿಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಹಬ್ಬುತ್ತಿವೆ. ಪತ್ನಿಯ ಸಮ್ಮತಿ ಇಲ್ಲದೆ ನಡೆಸುವ ಲೈಂಗಿಕತೆ ಅತ್ಯಾಚಾರಕ್ಕೆ ಸಮಾನ. ಇಂತಹ ನಡವಳಿಕೆ ಆಕೆಯ ಮನಸ್ಸು ಮತ್ತು ಶರೀರದ ಮೇಲೆ ಗಾಢ ಪರಿಣಾಮ ಬೀರಬಲ್ಲದು’ ಎಂದು ವಿವರಿಸಿದೆ.

ಪ್ರಕರಣವೇನು?: ‘ಮದುವೆಯಾದಾಗಿ ನಿಂದಲೂ ಪತಿ ನನಗೆ ಅಶ್ಲೀಲ ವಿಡಿಯೊಗಳನ್ನು ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದರು’ ಎಂದು ಆರೋಪಿಸಿ ಹೃಷಿಕೇಶ್ ಪತ್ನಿ ದೂರು ಸಲ್ಲಿಸಿದ್ದರು.

‘ನನಗೆ ಒಮ್ಮೆ ಗರ್ಭಪಾತವಾಗಿತ್ತು. ವಿಶ್ರಾಂತಿ ಅವಧಿಯಲ್ಲಿ ಪತಿ ಒತ್ತಾಯದಿಂದ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರು. ಮಗಳ ಎದುರೇ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಪೀಡಿಸಿದ್ದಾರೆ. 2ನೇ ತರಗತಿ ಓದುತ್ತಿರುವ ಮಗುವಿನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದ್ದರು.

ದೂರಿನ ಅನುಸಾರ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು