ಶುಕ್ರವಾರ, ಜನವರಿ 28, 2022
25 °C

ಪದ್ಮನಾಭ ತೀರ್ಥರ ಆರಾಧನೆ: ಮಂತ್ರಾಲಯ-ಉತ್ತರಾದಿ ಮಠಗಳಿಗೆ ಬೆವರಿಳಿಸಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಪ್ರತಿಬಾರಿಯೂ ಕೋರ್ಟ್ ಆದೇಶ ಪಡೆದೇ ಪೂಜೆ, ಆರಾಧನೆ ನಡೆಸಲು ಮುಂದಾಗುವ ನೀವು ಕೋರ್ಟ್ ಎಂದರೆ ಏನೆಂದುಕೊಂಡಿದ್ದೀರಿ' ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠಗಳಿಗೆ ಹೈಕೋರ್ಟ್ ಬೆವರಿಳಿಸಿದೆ.

ಡಿಸೆಂಬರ್ 2, 3 ಮತ್ತು 4ರಂದು ನಡೆಯಲಿರುವ ಮಠದ ಪೂರ್ವ ಯತಿವರೇಣ್ಯ ಪದ್ಮನಾಭ ತೀರ್ಥರ ಆರಾಧನೆಯನ್ನು ಯಾರು ಮೊದಲು ನಡೆಸಬೇಕು ಎಂಬ ತಕರಾರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಉಭಯ ಮಠಗಳ ವ್ಯಾಜ್ಯಕರ್ತರನ್ನು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, 'ಸಂವಿಧಾನದ 226ನೇ ವಿಧಿಯ ಉಪಯೋಗ ಆಗಬೇಕಿರುವುದು ಈ ನೆಲದ ಕೃಷಿಕ, ಕಮ್ಮಾರ, ಚಮ್ಮಾರ, ಗಾಣಿಗ, ಸಿಂಪಿಗರಂತಹ ಶೋಷಿತ ಸಮುದಾಯಗಳಿಗೇ ಹೊರತು ನಿಮ್ಮಂತಹವರ ಈ ರೀತಿಯ ವ್ಯಾಜ್ಯಗಳಿಗಲ್ಲ. ಹೈಕೋರ್ಟ್‌ಗೆ ಪ್ರದತ್ತವಾದ ಸಂವಿಧಾನದ 226ನೇ ವಿಧಿಯ ಅಧಿಕಾರವನ್ನು ನೀವು ಈ ರೀತಿ ಬಳಸಿಕೊಳ್ಳಬಾರದು' ಎಂದು ಚಾಟಿ ಬೀಸಿದೆ.

'ಎರಡೂ ಮಠಗಳಿಗೆ ಮಹಾನ್ ಪರಂಪರೆ ಇದೆ. ಆದರೆ ಇಬ್ಬರೂ ಪ್ರತಿಬಾರಿ ಕೋರ್ಟ್ ಆದೇಶ ಪಡೆದೇ ಆರಾಧನೆ ಮಾಡುವುದನ್ನು ನೋಡಿದರೆ ನೀವು ಮಠ ನಡೆಸುತ್ತಿದ್ದೀರೊ ಅಥವಾ ಯಾವುದಾದರೂ ಕಾಲೇಜು ನಡೆಸುತ್ತಿದ್ದೀರೊ ಎಂಬ ಜಿಜ್ಞಾಸೆ ಉಂಟಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದೆ.

'ನಿಮ್ಮ ಈ ವ್ಯಾಜ್ಯದ ನಡವಳಿಕೆ ಸಹನೀಯವಲ್ಲ. ಅಂತೆಯೇ ಈ ರೀತಿಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದೂ ತರವಲ್ಲ. ಆದಷ್ಟು ಬೇಗ ಎರಡೂ ಬಣಗಳ ವ್ಯವಸ್ಥಾಪನಾ ಮಂಡಳಿಯವರು ಕೋರ್ಟ್ ಬಳಿಯ ಯಾವುದಾದರೂ ಮರದ ನೆರಳಲ್ಲಿ ಕುಳಿತು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಿ..!' ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಮಧ್ಯಂತರ ಆದೇಶ: ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ 2021ರ ಡಿ.2ರಿಂದ ಆರಂಭವಾಗಲಿರುವ ಪದ್ಮನಾಭ ತೀರ್ಥರ 697ನೇ ಆರಾಧನಾ ಮಹೋತ್ಸವದ, 'ಅಗ್ರಪೂಜೆಯನ್ನು ಉತ್ತರಾದಿ ಮಠದವರು ನಡೆಸಬೇಕು ಮತ್ತು ಉತ್ತರಾರ್ಧದ ಒಂದೂವರೆ ದಿವಸವನ್ನು ರಾಘವೇಂದ್ರ ಸ್ವಾಮಿ ಮಠದವರು ನಡೆಸಬೇಕು' ಎಂದು ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಮೊದಲನೇ ಶಿಷ್ಯರಾಗಿದ್ದು ಅವರ ಆರಾಧನೆ ಡಿಸೆಂಬರ್ 2ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು