ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮಹಿಳೆ ವೀಸಾ ಅವಧಿ ವಿಸ್ತರಣೆಗೆ ಹೈಕೋರ್ಟ್ ನಕಾರ

Last Updated 7 ಡಿಸೆಂಬರ್ 2021, 17:03 IST
ಅಕ್ಷರ ಗಾತ್ರ

ಬೆಂಗಳೂರು: ‘ವೀಸಾ ಅವಧಿ ಮುಗಿದ ಮೇಲೂ ಭಾರತದ ನೆಲದಲ್ಲಿ ವಾಸಿಸುತ್ತಿರುವ ಚೀನಾದ ಪ್ರಜೆ, ಯಾವ ಕಾರಣಕ್ಕಾಗಿ ನನ್ನನ್ನು ದೇಶ ಬಿಟ್ಟು ತೆರಳುವಂತೆ ನೋಟಿಸ್‌ ನೀಡಿದ್ದೀರಿ ಎಂಬ ವಿವರಣೆ ಕೇಳುವುದು ಉದ್ಧಟತನ ಮಾತ್ರವಲ್ಲ; ಅದು ಈ ನೆಲದ ಸಾರ್ವಭೌಮತ್ವವನ್ನೇ ಪ್ರಶ್ನಿಸಿದಂತೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೋವಿಡ್‌ ನೆಪವೊಡ್ಡಿ ವೀಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲೇ ನೆಲೆಯೂರಿದ್ದ 42 ವರ್ಷದ ಚೀನಾದ ಮಹಿಳೆಯೊಬ್ಬರ ವೀಸಾ ಅವಧಿ ವಿಸ್ತರಣೆ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವೀಸಾ ಅವಧಿ ಮುಗಿದ ಮೇಲೂ ಇಲ್ಲಿಯೇ ನೆಲೆಸಿರುವವರ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕೇಂದ್ರಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ.

ಈ ಸಂಬಂಧದ ರಿಟ್‌ ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ನ್ಯಾಯಪೀಠ,‘ವೀಸಾ ಅವಧಿ ಮುಗಿದ ಕೂಡಲೇ ತೆರಳದಿದ್ದರೆ ಅಂತಹವರನ್ನು ಜೈಲಿಗೆ ಕಳುಹಿಸುವ ಇಲ್ಲವೇ ಭಾರಿ ಜುಲ್ಮಾನೆ ವಿಧಿಸುವ ಕ್ರಮಗಳು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಜಾರಿಯಲ್ಲಿವೆ. ಅಂತರರಾಷ್ಟ್ರೀಯ ಕಾನೂನಿನ ಅನುಸಾರ ವಿದೇಶಿಯರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌, ‘ಅರ್ಜಿದಾರ ಚೀನಾ ಪ್ರಜೆ, 2019ರ ಅಕ್ಟೋಬರ್ 30ರಂದು ನೀಡಲಾದ ಲೀವ್‌ ಇಂಡಿಯಾ ನೋಟಿಸ್‌ ಅನ್ನು ಪ್ರಶ್ನಿಸುತ್ತಿರುವ ಕ್ರಮ ಕಾನೂನು ಬಾಹಿರವಾಗಿದೆ. ಈಕೆ ಒಂದಲ್ಲಾ ಒಂದು ಕಾರಣಕ್ಕಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ಹಿಂದೆಯೇ ರಿಟ್‌ ಅರ್ಜಿಯೊಂದನ್ನು ಹಾಕಿಕೊಂಡು ತಮ್ಮ ವೀಸಾ ಅವಧಿ ವಿಸ್ತರಿಸಿಕೊಂಡಿದ್ದಾರೆ. ಈಗಾಗಲೇ ಮಾನವೀಯ ಆಧಾರದಲ್ಲಿ ಒದಗಿಸಿರುವ ವಿಸ್ತರಿತ ಅವಧಿಯನ್ನು ಪುನಃ ವಿಸ್ತರಿಸುವಂತೆ ಕೋರುತ್ತಿರುವುದು ಮಾನವೀಯ ಔದಾರ್ಯದ ದುರುಪಯೋಗ’ ಎಂದು ಬಲವಾಗಿ ಆಕ್ಷೇಪಿಸಿದ್ದರು.

ಸದ್ಯ ಮಂಡ್ಯದ ಸ್ಕಾಟ್ಸ್‌ ಬಂಗಲೆಯಲ್ಲಿ ವಾಸವಾಗಿರುವಲಿ ಡೊಂಗ್‌ ಎಂಬ 42 ವರ್ಷದ ಚೀನಾದ ಮಹಿಳೆ, ‘ನನ್ನ ಕಾನೂನುಬದ್ಧ ವೀಸಾ ಅವಧಿ ಮುಗಿದಿದ್ದು ನನಗೀಗ ಭಾರತದಿಂದ ತೆರಳುವಂತೆ ‘ಲೀವ್‌ ಇಂಡಿಯಾ ನೋಟಿಸ್‌’ ನೀಡಲಾಗಿದೆ. ಆದರೆ ಸದ್ಯ ಇದು ಸಾಧ್ಯವಿಲ್ಲದ ಕಾರಣ ಅನಿಶ್ಚಿತ ಅವಧಿಯವರೆಗೆ ವೀಸಾ ವಿಸ್ತರಿಸಲು ಕೋರಿರುವ ನನ್ನ ಮನವಿಯನ್ನು ಪರಿಗಣಿಸಲು ವಿದೇಶಾಂಗ ವ್ಯವಹಾರಗಳ ಇಲಾಖೆ ಹಾಗೂ ಬೆಂಗಳೂರಿನ ವಿದೇಶಿ ನೋಂದಣಿ ಪ್ರಾದೇಶಿಕ ಕಚೇರಿಗೆ (ಎಫ್‌ಆರ್‌ಆರ್‌ಒ) ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT