ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಗೆ ಮಗನನ್ನು ನೋಡುವ ಕಾತುರ: ತಾಯಿಗೆ ಬುದ್ಧಿ ಹೇಳಿದ ಹೈಕೋರ್ಟ್‌

ತಂದೆಗೆ ಮಗನನ್ನು ನೋಡುವ ಕಾತುರ
Last Updated 19 ನವೆಂಬರ್ 2021, 15:40 IST
ಅಕ್ಷರ ಗಾತ್ರ

ಬೆಂಗಳೂರು: ವಿವಾಹ ವಿಚ್ಛೇದನದ ಬಳಿಕ 16 ವರ್ಷದ ತನ್ನ ಮಗನನ್ನು ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದ್ದ ತಂದೆಯ ಬಯಕೆಯನ್ನು ನಿರಾಕರಿಸಿದ ತಾಯಿಗೆ, ಬುದ್ಧಿವಾದ ಹೇಳಿರುವ ಹೈಕೋರ್ಟ್‌, ‘ನೀವು ವಿಚ್ಛೇದನ ಪಡೆದಿರಬಹುದು. ಆದರೆ ಆ ಮಗು ನಿಮ್ಮಿಬ್ಬರ ಸಂಯೋಗದಿಂದಲೇ ಹುಟ್ಟಿದ್ದು ತಾನೆ..? ಯಾಕೆ ತಡೆಯುತ್ತೀರಿ..? ನೋಡಲು ಬಿಡಿ, ಈಗಿನ ಮಕ್ಕಳು ಕೂರಿಸಿಕೊಂಡು ನಿಮಗೇ ಪಾಠ ಹೇಳುವಷ್ಟು ಜಾಣರಿರುತ್ತವೆ’ ಎಂದು ಕುಟುಕಿದೆ.

‘ಚೆನ್ನೈನಲ್ಲಿ ನೆಲೆಸಿರುವ ವಿಚ್ಛೇದಿತ ಪತಿ ತನ್ನ ಹದಿನಾರು ವರ್ಷದ ಮಗನನ್ನು ಭೇಟಿ ಮಾಡಲು ವಿಚ್ಛೇದಿತ ಪತ್ನಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಿದ್ದ ಎಂಎಫ್‌ಎ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ತಂದೆಯ ಪರ ವಕೀಲ ಕೆ.ಎಸ್‌.ಭೀಮಯ್ಯ, ‘ಮಗುವನ್ನು ನೋಡಲು ತಾಯಿ ಬಿಡುತ್ತಿಲ್ಲ’ ಎಂದು ಆಕ್ಷೇ‍ಪಿಸಿದರು.

ಇದಕ್ಕೆ ತಾಯಿಯ ಪರ ವಕೀಲರು, ‘ಮಗುವಿಗೆ 16 ವರ್ಷ. ಈ ವರ್ಷ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಸಿಬಿಎಸ್ಸಿ ಮಧ್ಯಂತರ ಪರೀಕ್ಷೆಗಳು ಇದೇ ತಿಂಗಳ ಕೊನೆಯ ವಾರದಿಂದ ಆರಂಭವಾಗಲಿವೆ. ಈ ಹಂತದಲ್ಲಿ ಅವನನ್ನು ತಂದೆಯ ಬಳಿ ಬಿಟ್ಟರೆ ಅವರ ಮಾನಸಿಕ ಸಂತುಲತೆಯಲ್ಲಿ ವ್ಯತ್ಯಾಸವಾಗಿ ಅದು ಅಭ್ಯಾಸದ ಮೇಲೆ ಪರಿಣಾಮ ಬೀರಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ‘ಅಯ್ಯೋ ನೀವು ಅಂದುಕೊಳ್ಳುತ್ತಿರುವ ರೀತಿ ಏನೂ ಆಗುವುದಿಲ್ಲ.ಈಗಿನ ಕಾಲದ ಮಕ್ಕಳು ಸಾಕಷ್ಟು ಚುರುಕು ಮತ್ತು ಪ್ರಬುದ್ಧರಿರುತ್ತವೆ. ಚಳಿಗಾಲ ಮತ್ತು ಬೇಸಿಗೆಕಾಲದ ರಜೆಯಲ್ಲಿ ಅರ್ಧ ಭಾಗ ತಂದೆಯ ಬಳಿ ಇರಲು ಆದೇಶಿಸುತ್ತೇನೆ ಬಿಡಿ’ ಎಂದರು.

ಇದಕ್ಕೆ ಆಕ್ಷೇಪಿಸಿದ ತಾಯಿಯ ಪರ ವಕೀಲರು, ‘ಸ್ವಾಮಿ, ದಯವಿಟ್ಟು ಆ ರೀತಿ ಆದೇಶಿಸಬೇಡಿ. ಅವರು ಮತ್ತೊಂದು ಮದುವೆಯಾಗಿದ್ದಾರೆ. ಹೊಸ ಹೆಂಡತಿಗೂ ಒಂದು ಗಂಡು ಮಗುವಿದೆ’ ಎಂದರು.

ನ್ಯಾಯಮೂರ್ತಿಗಳು, ‘ಇದೇ 24ಕ್ಕೆ ಮಗುವನ್ನು ಕರೆಯಿಸಿ. ಅವನನ್ನು ಛೇಂಬರ್‌ನಲ್ಲೇ ಕೂರಿಸಿಕೊಂಡು, ಅಪ್ಪನನ್ನು ಭೇಟಿ ಮಾಡಲು ಇಚ್ಛೆಯಿದೆಯೊ ಇಲ್ಲವೊ ಎಂಬುದನ್ನು ನಾನೇ ಕೇಳಿ ತೀರ್ಮಾನಿಸುತ್ತೇನೆ’ ಎಂದು ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT