ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್‌

ಹಿಜಾಬ್‌ ವಿವಾದ: ತುಮಕೂರಿನ ಜೈನ್‌ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿ ರಾಜೀನಾಮೆ
Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಆಗ್ರಹಿಸಿ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಶುಕ್ರವಾರವೂ ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ಕಾಲೇಜು ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು ಪೊಲೀಸ್ ಭದ್ರತೆಯಲ್ಲಿ ತರಗತಿಗಳು ನಡೆದವು. ಪ್ರಮುಖ ಕಾಲೇಜುಗಳ ಎದುರು ಪೊಲೀಸರ ತಂಡ ಬೀಡುಬಿಟ್ಟಿತ್ತು.

ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಆಗ್ರಹಿಸಿ ತುಮಕೂರು ನಗರದ ಬಿಜಿಎಸ್‌ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಎಂಪ್ರೆಸ್‌ ಕರ್ನಾಟಕ ಪಬ್ಲಿಕ್‌ ಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹಿಜಾಬ್‌ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ತುಮಕೂರಿನ ಜೈನ್ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿ ರಾಜೀನಾಮೆ ನೀಡಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ, ಹಣೆಗೆ ತಿಲಕವಿಟ್ಟುಕೊಂಡ ಬಂದ ವಿದ್ಯಾರ್ಥಿಗೆ ತರಗತಿ ಪ್ರವೇಶಕ್ಕೆ ಉಪನ್ಯಾಸಕರು ಅವಕಾಶ ನೀಡಲಿಲ್ಲ. ಹೀಗಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ನಡುವೆ ವಾಗ್ವಾದ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದರು.

ಬೆಳಗಾವಿಯ ಸದಾಶಿವ ನಗರದ ವಿಜಯಾ ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜು, ಗೋಕಾಕದ ಫಾಲ್ಸ್‌ ರಸ್ತೆಯ ಜಿಎಸ್ಎಸ್ ಪಿಯು ಕಾಲೇಜು ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಕೆ.ಎಚ್.ಪಾಟೀಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ, ತರಗತಿಗೆ ಹಾಜರಾಗಲು ಅನುಮತಿಗೆ ಪಟ್ಟು ಹಿಡಿದರು. ಆದರೆ, ಅವಕಾಶ ನೀಡಲಿಲ್ಲ.

ಖಾನಾಪುರ ತಾಲ್ಲೂಕಿನ ನಂದಗಡ ಪದವಿ ಕಾಲೇಜು, ಅಥಣಿ ಪಟ್ಟಣದ ಕೆ.ಎ. ಲೋಕಾಪೂರ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು.

ಚಿತ್ರದುರ್ಗ ನಗರದ ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿಗಳು ‘ಹಿಜಾಬ್‌ ನಮ್ಮ ಹಕ್ಕು’ ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಕಾಲೇಜಿನ ಒಳಾಂಗಣದಲ್ಲಿದ್ದ ವಿದ್ಯಾರ್ಥಿಗಳು ‘ಜೈ ಶ್ರೀರಾಮ್‌’ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನನಿರತ ವಿದ್ಯಾರ್ಥಿನಿಯರು, ‘ನಾವೂ ಅಲ್ಲಾ...’ ಎಂದು ಕೂಗಿದರೆ ಏನಾಗುತ್ತದೆ ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದರು.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಿದ್ದರಿಂದ ವಿದ್ಯಾರ್ಥಿನಿಯರು ಮನೆಗೆ ವಾಪಸಾದರು.

ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಶುಕ್ರವಾರವೂ ಗೈರಾಗಿದ್ದರು. ಉಳಿದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ತರಗತಿಗೆ ಹಾಜರಾದರು.

ಕೋರ್ಟ್‌ಗೆ ದಾಖಲೆ:
‘ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ವೈಯಕ್ತಿಕ ದಾಖಲೆಗಳನ್ನು ಬಹಿರಂಗಪಡಿಸಿಲ್ಲ’ ಎಂದು ಶಾಸಕ ರಘುಪತಿ ಭಟ್‌ ಸ್ಪಷ್ಟಪಡಿಸಿದರು.

‘ಪ್ರತಿಭಟನನಿರತ ವಿದ್ಯಾರ್ಥಿನಿಯರು ಹಿಂದೆಯೂ ಹಿಜಾಬ್ ಧರಿಸುತ್ತಿದ್ದೆವು ಎಂದು ಸುಳ್ಳು ಹೇಳಿದ್ದರು. ತರಗತಿಯಲ್ಲಿ ಹಿಜಾಬ್ ಧರಿಸದೆ ಪಾಠ ಕೇಳುತ್ತಿದ್ದ ಸಿಸಿಟಿವಿ ಕ್ಯಾಮೆರಾ ಸಾಕ್ಷ್ಯಗಳಿದ್ದು, ಅವುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಕೋರ್ಟ್‌ಗೆ ಮಾತ್ರ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಎಫ್‌ಐಆರ್‌:
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಲಾ– ಕಾಲೇಜುಗಳ ಸುತ್ತಮುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ತುಮಕೂರು ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದನ್ನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿನಿಯರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಜೀನಾಮೆ:
ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ನಗರದ ಜೈನ್ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ವಿಷಯದ ಅತಿಥಿ ಉಪನ್ಯಾಸಕಿ ಚಾಂದಿನಿ ರಾಜೀನಾಮೆ ಸಲ್ಲಿಸಿದ್ದಾರೆ.

ಅಮಾನತು:
ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಕರ್ನಾಟಕ ಪಬ್ಲಿಕ್‌ ಶಾಲೆಯ 11 ಮತ್ತು 12ನೇ ತರಗತಿಯ 58 ವಿದ್ಯಾರ್ಥಿನಿಯರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.

ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು, ಡಿವಿಎಸ್‌, ಕಸ್ತೂರಬಾ ಕಾಲೇಜು, ಭದ್ರಾವತಿಯ ಸಂಚಿಹೊನ್ನಮ್ಮ ಕಾಲೇಜಿನ ಮಕ್ಕಳು ತರಗತಿ ಬಹಿಷ್ಕರಿಸಿ ಮನೆಗೆ ಮರಳಿದರು. ಗುಂಡ್ಲುಪೇಟೆಯ ಗೌತಮ ಪ್ರೌಢಶಾಲೆಯಲ್ಲಿ ಹಿಜಾಬ್‌ ಧರಿಸಿ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ತರಗತಿಗೆ ಪ್ರವೇಶ ದೊರಕದೆ ಹೊರಗಡೆಯೇ ಉಳಿದರು. ಹಾಸನದ ಬಾಲಕಿಯರ ಸರ್ಕಾರಿಪದವಿಪೂರ್ವ ಕಾಲೇಜು ಹಾಗೂ ಅರಸೀಕೆರೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪ್ರತಿಭಟಿಸಿದರು.

ಮಾಗಡಿ ತಾಲ್ಲೂಕಿನ ಕುದೂರಿನಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯ ಪಿ.ಯು ವಿಭಾಗದ ವಿದ್ಯಾರ್ಥಿನಿಯರು ಶುಕ್ರವಾರವೂ ಪ್ರತಿಭಟನೆ ನಡೆಸಿದರು.

ದಾವಣಗೆರೆ ಜಿಲ್ಲೆಯ ಹರಿಹರ, ಮಲೇಬೆನ್ನೂರು, ಸಾಸ್ವೇಹಳ್ಳಿಯಲ್ಲಿ ಹಿಜಾಬ್ ಧರಿಸಿ ಬಂದ ಕಾರಣ ತರಗತಿಯೊಳಗೆ ಪ್ರವೇಶಿಸಲು ಅನುಮತಿ ಸಿಗದೆ ವಿದ್ಯಾರ್ಥಿನಿಯರು ಹೊರಗಡೆ ಕಾದು ಕುಳಿತು ಮನೆಗಳಿಗೆ ಮರಳಿದರು.

'ವಿಷ ಕೊಡಲಿ, ಕುಡಿದು ಸಾಯುತ್ತೇವೆ'

ಮೈಸೂರು: ಹಿಜಾಬ್‌ ನಿಷೇಧ ವಿರೋಧಿಸಿ ಮೈಸೂರು ಭಾಗದಲ್ಲಿ ವಿದ್ಯಾರ್ಥಿನಿಯರ ಆಕ್ರೋಶ ಶುಕ್ರವಾರವೂ ಮುಂದುವರಿಯಿತು.

ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ‘ವಿಷ ಕೊಡಲಿ, ಕುಡಿದು ಸಾಯುತ್ತೇವೆ. ಆದರೆ, ಸಮಸ್ಯೆ ಇಂದೇ ಇತ್ಯರ್ಥ ಆಗಬೇಕು’ ಎಂದು ಪಟ್ಟು ಹಿಡಿದರೆ, ಮಡಿಕೇರಿಯ ಜೂನಿಯರ್‌ ಕಾಲೇಜಿನಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿನಿಯರನ್ನು ಬಂಧಿಸುವಂತೆ ಪ್ರಾಂಶುಪಾಲರು ಸ್ಥಳದಲ್ಲಿದ್ದ ಪೊಲೀಸರಿಗೆ ಹೇಳಿದ ಘಟನೆ ನಡೆಯಿತು.

‘ನ್ಯಾಯಾಲಯದ ನಿರ್ದೇಶನದಂತೆ ಹಿಜಾಬ್‌ ತೆಗೆದಿಟ್ಟು ಬನ್ನಿ’ ಎಂಬ ಸೂಚನೆ ಒಪ್ಪದೆ ವಿದ್ಯಾರ್ಥಿನಿಯರು, ತರಗತಿಗೆ ಪ್ರವೇಶಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆಗ ಸಿಟ್ಟಾದ ಪ್ರಾಂಶುಪಾಲ ವಿಜಯ್‌, ‘ನಾನೇ ಇವರ ವಿರುದ್ಧ ದೂರು ಕೊಡುವೆ, ಬಂಧಿಸಿ ಕ್ರಮ ಕೈಗೊಳ್ಳಿ’ ಎಂದು ಸ್ಥಳದಲ್ಲಿದ್ದ ಪೊಲೀಸರಲ್ಲಿ ಮನವಿ ಮಾಡಿದರು.

ಎಸ್‌ಡಿಪಿಐ ಮಧ್ಯ‍ಪ್ರವೇಶ

ಮೈಸೂರು: ಹುಣಸೂರು ನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದು ಪ್ರವೇಶ ನೀಡುವಂತೆ ಪ್ರತಿಭಟಿಸಿದ 35 ವಿದ್ಯಾರ್ಥಿನಿಯರಿಗೆ ಎಸ್‌ಡಿಪಿಐ ಸಂಘಟನೆಯ ಸದಸ್ಯರು ಬೆಂಬಲ ನೀಡಿ, ಸಿಬ್ಬಂದಿಯೊಂದಿಗೆ ವಾಗ್ವಾದ ಆರಂಭಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು, ‘ನಿಷೇಧಾಜ್ಞೆ ಜಾರಿಯಲ್ಲಿದ್ದು, ವಾಪಸ್ ತೆರಳಿ’ ಎಂದು ಸೂಚಿಸಿದರು.

ಹಿಜಾಬ್ ಕಳಚಿ ತರಗತಿಗೆ ಹಾಜರಾಗಲು ನಿರಾಕರಿಸಿದ ಮೈಸೂರು ನಗರದ ರಾಜೀವ್‌ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಾಗಿದೆ.

ಅಭಿಯಾನ:ಕೋಮು ಸಾಮರಸ್ಯ ಕುರಿತು ಸ್ವಾಮಿ ವಿವೇಕಾನಂದ, ಕುವೆಂಪು, ಭಗತ್ ಸಿಂಗ್, ಸುಭಾಷ್‌
ಚಂದ್ರಬೋಸ್‌ ಅವರ ಸೂಕ್ತಿಗಳನ್ನು ಗೋಡೆಗಳ ಮೇಲೆ ಬರೆಯುವ ಅಭಿಯಾನಕ್ಕೆಎಐಡಿಎಸ್‌ಒ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT