ಎರಡೂ ರಾಜ್ಯಗಳಿಗೆ ಮೇಕೆದಾಟು ಯೋಜನೆ ಫಲ: ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಬರೆದ ಪತ್ರಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಪಂದಿಸಬೇಕು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಯಿಂದ ನಮಗೆ ಕುಡಿಯುವ ನೀರು ಸಿಗಲಿದೆ. ಮಳೆ ಕಡಿಮೆಯಾದಾಗ ಅವರ (ತಮಿಳುನಾಡು) ಪಾಲಿನ ನೀರು ಕೊಡಲು ಸಾಧ್ಯವಾಗುತ್ತದೆ. ಇದು ಗೊತ್ತಿದ್ದೂ ಅವರು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದರು.
‘ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಂಡೇ ಮೇಕೆದಾಟು ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ತಮಿಳುನಾಡಿನ ಪಾಲಿನ ನೀರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೂ ಅವರು ಯೋಜನೆಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಾರ್ಕಂಡೇಯ ಜಲಾಶಯ ವಿಷಯವಾಗಿ ಮೊದಲಿನಿಂದಲೂ ತಗಾದೆ ತೆಗೆಯುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಿದೆ. ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಮೇಲೆ ಒತ್ತಡ: ‘15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಪಡೆಯುವ ಕುರಿತು ಕೇಂದ್ರದ ಮೇಲೆ ಒತ್ತಡ ಹಾಕಲಾಗಿದೆ. ಅದನ್ನು ನಾವು ಪಡೆದುಕೊಳ್ಳುತ್ತೇವೆ’ ಎಂದರು.
ಪಕ್ಷದ ತ್ಯಜಿಸಿದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ ಕುರಿತು ಕೇಳಿದ ಪ್ರಶ್ನೆಗೆ, ‘ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೂ, ಅದರಿಂದ ಅವರಿಗೆ ಈಗಿರುವ ಶಕ್ತಿ ಸಾಲದು ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ, ಹೊರಗಿನಿಂದ ನಾಯಕರನ್ನು ಕರೆ ತರಬೇಕು ಎನ್ನುವುದು ಶಿವಕುಮಾರ್ ಉದ್ದೇಶ ಇರಬಹುದು’ ಎಂದು ಅವರು ತಿಳಿಸಿದರು.
ಇದನ್ನೂ ಓದಿ... ಮೇಕೆದಾಟು ಯೋಜನೆ ಕೈಬಿಡಿ: ಬಿಎಸ್‌ವೈಗೆ ಸ್ಟಾಲಿನ್ ಆಗ್ರಹ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.