ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಕನ್ನಡದ ಫ್ಯಾನ್‌ಗಳಾಗಿದ್ದೆವು!

ಚಿಂತಕ ಸಿ.ಚನ್ನಬಸವಣ್ಣ ಅವರ ಕನ್ನಡ ಪ್ರೇಮದ ನೆನಪುಗಳು..
Last Updated 31 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಒಂದು ಕಾಲದಲ್ಲಿ ತೆಲುಗಿನ ಪ್ರಭಾವ ಹೆಚ್ಚಿದ್ದ ಬಳ್ಳಾರಿಯಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾದರೆ ಪೋಸ್ಟರ್‌ಗಳಲ್ಲಿ ‘ಪ್ರಭಾತ್‌ಲೋ ಕನ್ನಡಂ’ ಎಂದು ಬರೆಯುತ್ತಿದ್ದರು. ಅದನ್ನು ವಿರೋಧಿಸಿ ನಾವು ಹೋರಾಟ ಶುರು ಮಾಡಿದೆವು. ಹಂತಹಂತವಾಗಿ ‘ಪ್ರಭಾತ್‌ನಲ್ಲಿ ಕನ್ನಡ’ ಎಂದು ನಾವೇ ಬರೆದು ಅಂಟಿಸಿದೆವು. ಬಂಟಿಂಗ್‌ಗಳನ್ನು ನಾವೇ ಕಟ್ಟುತ್ತಿದ್ದೆವು. ನಾವು ನಾಯಕ ನಟರ ಫ್ಯಾನ್‌ಗಳಾಗಿರಲಿಲ್ಲ. ಕನ್ನಡದ ಫ್ಯಾನ್‌ಗಳಾಗಿದ್ದೆವು. ..

ಕನ್ನಡದ ಓದುಗರಿಗೆ ವೈವಿಧ್ಯಮಯವಾದ ಪುಸ್ತಕಗಳನ್ನು ಪ್ರಕಟಿಸಿಕೊಟ್ಟ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ತಮ್ಮ ಕನ್ನಡಪರ ಹೋರಾಟದ ನೆನಪುಗಳನ್ನು ಸ್ಮರಿಸಿಕೊಂಡಿದ್ದು ಹೀಗೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಸಿಂಗಲ್‌ ವಿಂಡೋ ಆಪರೇಟರ್‌ ಆಗಿ 1949ರಲ್ಲಿ ಕೆಲಸಕ್ಕೆ ಸೇರಿದ್ದ ಅವರು, ಕನ್ನಡ ಪರ ಕೆಲಸಗಳಿಗೆ, ಓಡಾಟಗಳಿಗೆ, ಪುಸ್ತಕ ಪ್ರಕಾಶನದ ಬದ್ಧತೆಗೆ ತೊಡಕಾಗಬಹುದು, ಬ್ಯಾಂಕ್‌ ಕೆಲಸಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗಬಹುದು ಎಂಬ ಕಾರಣಕ್ಕೇ ಪದೋನ್ನತಿಯನ್ನು ನಿರಾಕರಿಸಿ ಸೇರಿದ್ದ ಹುದ್ದೆಯಲ್ಲೇ ಕೊನೇವರೆಗೂ ಇದ್ದು 2009ರಲ್ಲಿ ನಿವೃತ್ತರಾದವರು.

ನಿವೃತ್ತರಾಗುವವರೆಗೂ ಅವರು ಸುಮಾರು 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದರು. ಅವರು ಏಕಕಾಲಕ್ಕೆ ಹಲವು ಊರುಗಳಲ್ಲಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ನಿವೃತ್ತಿ ನಂತರ 80 ಪುಸ್ತಕಗಳನ್ನು ಪ್ರಕಟಿಸಿರುವ ಅವರು, 72ನೇ ಇಳಿವಯಸ್ಸಿನಲ್ಲೂ ಪುಸ್ತಕಗಳ ಸತತ ಓದಿನಲ್ಲಿ ತೊಡಗಿಕೊಂಡಿದ್ದಾರೆ. ಅವರ ಕನ್ನಡಪರ ಹೋರಾಟದ ನೆನಪುಗಳು ಹಲವು. ಅಂಥ ಮೂರು ನೆನಪುಗಳನ್ನು ಅವರು ರಾಜ್ಯೋತ್ಸವದ ನೆಪದಲ್ಲಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಬೈಸಿಕಲ್‌ನಲ್ಲಿ ಹೊಸಪೇಟೆಗೆ ಹೋಗಿದ್ದು..

‘1970ರಲ್ಲಿ ಕೃಷ್ಣದೇವರಾಯ ಸಿನಿಮಾ ಬಿಡುಗಡೆಯಾದಾಗ ಆಂಧ್ರದ ಉರವಕೊಂಡ, ವಿಡುಪನಕಲ್ಲು, ಗುಂತನಕಲ್ಲು ಸೇರಿದಂತೆ ವಿವಿಧೆಡೆಯ ಬ್ಯಾಂಕ್‌ನ 150 ಸಿಬ್ಬಂದಿ ಹೊಸಪೇಟೆಗೆ ಬೈಸಿಕಲ್‌ನಲ್ಲೇ ಹೋಗಿದ್ದೆವು. ರೀಲಿನ ಬಾಕ್ಸ್‌ ಅನ್ನು ಹಂಪಿಯ ವಿರೂಪಾಕ್ಷ ಗುಡಿಗೆ ಕೊಂಡೊಯ್ದು ಪೂಜೆ ಮಾಡಿಸಿ ಲಕ್ಷ್ಮಿ ಟಾಕೀಸ್‌ನಲ್ಲಿ ಬಿಡುಗಡೆ ಮಾಡಿದ್ದೆವು’

’1969ರ ಫೆಬ್ರುವರಿಯಲ್ಲಿ ಬಳ್ಳಾರಿ ನಗರದಲ್ಲಿ ನಟರಾಜ ಟಾಕೀಸ್‌ ಆರಂಭವಾಯಿತು. ಮಣ್ಣಿನ ಮಗ ಸಿನಿಮಾ ಬಿಡುಗಡೆಯಾಗಿತ್ತು. ನಂತರ 1974ರಲ್ಲಿ ಮಯೂರ ಸಿನಿಮಾ ಬಿಡುಗಡೆಯಾದಾಗದ ಬೇಡಿಕೆ ಹೆಚ್ಚಿದ್ದ ಪರಿಣಾಮವಾಗಿ, ರೀಲಿನ ಬಾಕ್ಸ್‌ ಅನ್ನು ಬಳ್ಳಾರಿಗೆ ಬಿಡುಗಡೆಗೆ ಕೊಡಲಿಲ್ಲ.ಆಗ ಧುರೀಣರಾಗಿದ್ದ ಅಲ್ಲಂ ಕರಿಬಸಪ್ಪನವರು ಇಂಫಾಲಾ ಕಾರಿನಲ್ಲಿ ಮದ್ರಾಸ್‌ಗೆ ಹೋಗಿ ವಿತರಕರು ಕೇಳಿದಷ್ಟು ಹಣ ಕೊಟ್ಟು ಬಾಕ್ಸ್‌ ತಂದರು. ಕನ್ನಡದ ಬಗೆಗಿನ ಕರಿಬಸಪ್ಪ ಅವರ ಅಭಿಮಾನ ಅಂಥದ್ದು. ಅಂದು ಬೆಳಿಗ್ಗೆ ಬದಲಿಗೆ ಸಂಜೆ 6.15ಕ್ಕೆ ಸಿನಿಮಾದ ಮೊದಲ ಪ್ರದರ್ಶನ ನಡೆಯಿತು. ನಗರಕ್ಕೆ ರೀಲಿನ ಬಾಕ್ಸ್‌ ಬರುವುವರೆಗೂ ನಾನು ಅನೌನ್ಸ್‌ ಮಾಡುತ್ತಿದ್ದೆ: ಕೆಲವೇ ನಿಮಿಷಗಳಲ್ಲಿ ಬಾಕ್ಸ್‌ ಬರಲಿದೆ!

ರಜೆ ಹಾಕಿ ಗೋಕಾಕ್‌ ಚಳವಳಿಗೆ ಧುಮುಕಿದ್ದು..

‘1982ರಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದೂವರೆ ತಿಂಗಳು ರಜೆ ಹಾಕಿ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. ಅದೇ ಕಾರಣಕ್ಕಾಗಿ ನನ್ನನ್ನು ಕೆಲಸದಿಂದ ತೆಗೆದರು. ಆಗ ನನ್ನ ಬಳಿ ಇದ್ದ ಬ್ಯಾಂಕಿನ ಬೀಗದ ಕೈಗಳನ್ನುನ್ನು ಸಿಬ್ಬಂದಿಯೊಬ್ಬರಿಗೆ ಕೊಟ್ಟು ಕಳಿಸಿದ್ದೆ. ಈಗ ನಾನು ಏನು ಮಾಡುತ್ತಿದ್ದೇನೆಯೋ ಅದರ ಯಾವ ಅಂಶವನ್ನೂ ಬಿಡದೆ ವರದಿ ಕಳಿಸಿ ಎಂದೂ ಹೇಳಿಬಿಟ್ಟಿದ್ದೆ.

‘ಕನ್ನಡ ಪರವಾಗಿ ಮೈಸೂರು ಬ್ಯಾಂಕ್‌ನಲ್ಲಿರುವವರು ಹೋರಾಟ ಮಾಡದೇ ಬೇರೆ ಯಾರು ಮಾಡುತ್ತಾರೆ ಎಂದು ಆಗಿನ ವ್ಯವಸ್ಥಾಪಕರು ನನ್ನ ಪರವಾಗಿಯೇ ಮಾತನಾಡಿದ್ದರು. ಕನ್ನಡ ಪ್ರೇಮಿಗಳಾದ ವಿ.ಎಂ.ನಟರಾಜನ್‌, ನವರತ್ನರಾಂ ಎಂಬ ಅಧಿಕಾರಿಗಳಿದ್ದರು. ನನ್ನನ್ನು ಇರಿಸಿದ್ದ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲು ಆಗ ಸಾವಿರಾರು ಕನ್ನಡಿಗರು ಬಂದಿದ್ದರು’.

ಮಲೆಯಾಳಂ ಪ್ರಾರ್ಥನೆ, ಇಂಗ್ಲಿಷ್‌ ಸ್ವಾಗತ, ಕನ್ನಡ ಭಾಷಣ!

’1970ರಲ್ಲಿ ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿ ಎಸ್‌ಬಿಎಂ ಶಾಖೆಯನ್ನು ಆರಂಭಿಸಿದ ಸಂದರ್ಭ, ಆ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ತೆಲುಗು ಮತ್ತು ಉರ್ದು ಬಿಟ್ಟರೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಉದ್ಘಾಟನೆ ಕಾರ್ಯಕ್ರಮದಲ್ಲಿ ಗೋಪಾಲಪಿಳ್ಳೈ ಎಂಬ ಸಿಬ್ಬಂದಿ ಮಲೆಯಾಳಂನಲ್ಲಿ ಪ್ರಾರ್ಥನೆ ಮಾಡಿದರು. ಜಮೀರ್‌ ಅಹ್ಮದ್‌ ಎಂಬುವವರು ಉರ್ದುವಿನಲ್ಲಿ ಪ್ರಾರ್ಥನೆ ಮಾಡಿದರು. ಮುಖ್ಯ ವ್ಯವಸ್ಥಾಪಕರಾಗಿದ್ದ ಸತ್ಯನಾರಾಯಣ್‌ ಇಂಗ್ಲಿಷ್‌ನಲ್ಲಿ ಸ್ವಾಗತ ಮಾಡಿದರು’

‘ನಮಗೆ ಮೈಯಲ್ಲಿ ರಕ್ತ ಕುದಿಯುತ್ತಿತ್ತು. ಕನ್ನಡಕ್ಕೇ ಇಲ್ಲಿ ಬೆಲೆಯೇ ಇಲ್ಲವಲ್ಲ ಎಂಬ ಆಕ್ರೋಶವನ್ನು ಹೇಳಿಕೊಳ್ಳಲು ಆಗದ ಪರಿಸ್ಥಿತಿ. ಆದರೆ, ಶಾಖೆ ಉದ್ಘಾಟಿಸಲು ಬಂದಿದ್ದ, ಚಾಮರಾಜನಗರ ಮೂಲಕ ಪ್ರಧಾನ ವ್ಯವಸ್ಥಾಪಕರಾಗಿದ್ದ ಜಿ.ಎಂ.ನಟರಾಜನ್‌ 50 ನಿಮಿಷ ಕನ್ನಡದಲ್ಲೇ ಮಾತನಾಡಿದರು. ಅವರು ನೂರು ವರ್ಷ ಬದುಕಿದ್ದರು’.

‘ಕೊಳ್ಳೇಗಾಲದ ಮೂಲದವರಾದ ಅವರ ಮೂಲ ಹೆಸರು ನಟರಾಜ್‌, ಆದರೆ ಮದ್ರಾಸ್‌ ಆಡಳಿತಕ್ಕೆ ಒಳಪಟ್ಟಿದ್ದ ಶಾಲೆಯಲ್ಲಿ ಅವರು ಓದುತ್ತಿದ್ದ ತಮಿಳು ಭಾಷಿಕರಾದ ಮುಖ್ಯಶಿಕ್ಷಕರು ತಮ್ಮ ಭಾಷೆಯ ಮೇಲಿನ ಅಭಿಮಾನಕ್ಕಾಗಿ ಅವರ ಹೆಸರನ್ನು ನಟರಾಜನ್‌ ಎಂದು ಬರೆದುಕೊಂಡಿದ್ದರು! ಅದನ್ನು ಆ ಅಧಿಕಾರಿಯೇ ಆಗ ನನ್ನ ಬಳಿ ಹೇಳಿದ್ದರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT