ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ 19ರಂದು ‘ಬೆಂಗಳೂರು ಚಲೋ’

ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ಎಚ್ಚರಿಕೆ
Last Updated 8 ಫೆಬ್ರುವರಿ 2022, 11:27 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರೀಮಂತ ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡಬೇಕು.ಮರಾಠ ನಿಗಮ ಮಂಡಳಿಗೆ ಕೂಡಲೇ ಅಧ್ಯಕ್ಷ ಹಾಗೂ ನಿರ್ದೇಶಕರನ್ನು ನೇಮಿಸಬೇಕು. ಇಲ್ಲದೆ ಹೋದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುತ್ತದೆ’ ಎಂದುಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶ್ಯಾಮ್‌ಸುಂದರ್‌ ಗಾಯಕ್ವಾಡ್‌, ‘ರಾಜ್ಯದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿರುವ ಮರಾಠ ಸಮುದಾಯದವರಿಗೆ ಬಿಜೆಪಿ ಸರ್ಕಾರದಲ್ಲಿ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಶ್ರೀಮಂತ ಪಾಟೀಲ್‌ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು. ಇದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 19ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಮುಖಂಡರು ಬರಲಿದ್ದು ಅಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ’ ಎಂದರು.

‘ಈ ತಿಂಗಳ ಅಂತ್ಯದೊಳಗೆ ಮರಾಠ ಸಮುದಾಯದವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ಬಿಜೆಪಿ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ’ ಎಂದು ಎಚ್ಚರಿಸಿದರು.

‘ಮರಾಠ ಸಮಾಜವನ್ನು ‘3ಬಿ’ಯಿಂದ ‘2ಎ’ಗೆ ಸೇರ್ಪಡೆ ಮಾಡುವಂತೆ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಬಳಿಕ ಅವರು ಮಾತು ಮರೆತರು. ಬಸವರಾಜ ಬೊಮ್ಮಾಯಿ ಅವರೂ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಬಹಳ ನೋವಾಗಿದೆ’ ಎಂದು ವಿವಿಧ ಜಿಲ್ಲೆಗಳಿಂದ ಬಂದಿದ್ದ ಮುಖಂಡರು ದೂರಿದರು.

‘52ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತದಾರರೇ ನಿರ್ಣಾಯಕರಾಗಿದ್ದಾರೆ. ನಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ತಕ್ಕ ಶಾಸ್ತಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT