ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂದಾಯ ಕಾಯ್ದೆಯ ‘192 ಎ’ ಗೆ ತಿದ್ದುಪಡಿ: ಮಾಧುಸ್ವಾಮಿ ಭರವಸೆ

ಮುಂಡರಗಿಯಲ್ಲಿ ದೌರ್ಜನ್ಯ, ಮಹಿಳೆಯ ಆತ್ಮಹತ್ಯೆ ಘಟನೆ ಪ್ರಸ್ತಾಪ
Last Updated 8 ಮಾರ್ಚ್ 2022, 11:14 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಭೂಕಂದಾಯ ಕಾಯ್ದೆಯ 192 (ಎ)ರ ವ್ಯಾಪ್ತಿಯಿಂದ ‘ಕೃಷಿ ಭೂಮಿ’ಯನ್ನು ಕೈಬಿಟ್ಟು ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಅವರು ಮುಂಡರಗಿಯ ಕೇಲೂರಿನಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲಾಗುವುದು. ಅಷ್ಟೇ ಅಲ್ಲ, ಈ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗಾಣಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಬೆಂಗಳೂರು ಸುತ್ತಮುತ್ತ ನಡೆಯುತ್ತಿರುವ ಭಾರೀ ಪ್ರಮಾಣದ ಭೂಕಬಳಿಕೆ ಮೇಲೆ ಕಠಿಣ ಕ್ರಮ ಜರುಗಿಸಲು ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಗಾಗಿ ನಡೆದಿರುವ ಒತ್ತುವರಿ ಪ್ರಕರಣಗಳನ್ನೇ ಭೂಕಬಳಿಕೆ ಎಂದು ತರಲಾಗುತ್ತಿದೆ. ಇದರಿಂದ ದೂರದ ಊರುಗಳಿಂದ ರೈತರು ಪ್ರತಿನಿತ್ಯವೂ ನ್ಯಾಯಾಲಯಕ್ಕೆ ಬರಬೇಕಾಗಿದೆ. 8–10 ಬ್ಯಾಚ್‌ಗಳಲ್ಲಿ 300 ರಿಂದ 400 ರೈತರು ಬಂದು ನಿಲ್ಲುವುದನ್ನು ನೋಡಿ ನಾಚಿಕೆ ಆಗುತ್ತದೆ. ಕಾಯ್ದೆಯಲ್ಲಿ ಭೂ ಒತ್ತುವರಿ ಎಂಬುದರ ಬದಲಿಗೆ ಭೂಕಬಳಿಕೆ ಎಂಬ ಪದ ಬಳಸಲಾಗಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿಯ ಕಿರುಕುಳದಿಂದ ಬೇಸತ್ತು ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಅದರಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಹತ್ತಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ ತೋಟವನ್ನು ನಾಶ ಮಾಡಿದ್ದಾರೆ. ಈ ಪ್ರದೇಶದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ರೈತರು ಭೂ ಒತ್ತುವಾರಿ ಮಾಡಿದ್ದಾರೆಯೇ ಹೊರತು ಭೂ ಕಬಳಿಕೆ ಮಾಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸಬೇಕು ಎಂದು ಎಚ್‌.ಕೆ.ಪಾಟೀಲ ಒತ್ತಾಯಿಸಿದರು.

ಅಧಿಕಾರಿಗಳು ದರ್ಪ ಮತ್ತು ದಬ್ಬಾಳಿಕೆಯ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದೂ ಪಾಟೀಲ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ, ಕಿರುಕುಳದಿಂದಾಗಿಯೇ ಮಹಿಳೆಯರು ವಿಷ ಸೇವನೆ ಮಾಡಿದ್ದಾರೆ. ಈ ಘಟನೆ ದುರದೃಷ್ಟಕರ. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸಬಾರದು. ಮುಖ್ಯಮಂತ್ರಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ವಿಶೇಷ ಸಭೆ ಮಾಡಿ ಸದನ ಸಮಿತಿ ರಚಿಸಲು ತೀರ್ಮಾನಿಸಬೇಕು ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅರಣ್ಯ ಅಧಿಕಾರಿಗಳು ಕ್ರೂರವಾಗಿ ನಡೆದುಕೊಂಡ ಕಾರಣ ಮಹಿಳೆಯರು ವಿಷ ಕುಡಿದಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನ ಕೆ.ಆರ್‌. ರಮೇಶ್‌ಕುಮಾರ್‌ ಅವರೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT