ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜು

Last Updated 13 ಫೆಬ್ರುವರಿ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ಈಸಾಲಿನ ಮೊದಲ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಹತ್ತು ದಿನಗಳ ಕಲಾಪದಲ್ಲಿ ಸರ್ಕಾರದ ಮೇಲೆ ಮುಗಿಬೀಳಲು ವಿರೋಧಪಕ್ಷಗಳು ಸಜ್ಜಾಗಿವೆ. ಹಿಜಾಬ್‌– ಕೇಸರಿ ಶಾಲು ವಿವಾದ, ಕಾನೂನು ಸುವ್ಯವಸ್ಥೆ ವೈಫಲ್ಯ, ಸರ್ಕಾರಿ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್‌ ಆರೋಪ ಸೇರಿದಂತೆ ಹಲವು ವಿಷಯಗಳು ಸದನದಲ್ಲಿ ಸದ್ದುಮಾಡುವ ಸಾಧ್ಯತೆ ಇದೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಇದು ಮೊದಲ ಅಧಿವೇಶನ. ಸೋಮವಾರ ಬೆಳಿಗ್ಗೆ 11ಕ್ಕೆ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡುವರು. ಮಂಗಳವಾರದಿಂದ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ, ಪ್ರಶ್ನೋತ್ತರ ಸೇರಿದಂತೆ ದೈನಂದಿನ ಕಲಾಪಗಳು ನಡೆಯಲಿವೆ.

ಶಾಲೆ ಮತ್ತು ಕಾಲೇಜುಗಳಲ್ಲಿ ಮುಸ್ಲಿಂವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ ನಂತರದ ಬೆಳವಣಿಗೆಗಳು, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬರಲು ಅವಕಾಶ ಕೋರಿ ಬೇಡಿಕೆ ಇಟ್ಟಿರುವುದು, ಇದೇ ವಿಚಾರದಲ್ಲಿ ರಾಜ್ಯದ ವಿವಿಧೆಡೆ ಹಿಂಸಾಚಾರ ನಡೆದಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಜ್ಜಾಗಿವೆ.

ಶಾಲೆ, ಕಾಲೇಜುಗಳಲ್ಲಿ ‘ವಸ್ತ್ರ ರಾಜಕೀಯ’ದ ವಿವಾದವು ಮೊದಲ ದಿನದಿಂದಲೇ ವಿಧಾನಮಂಡಲದಲ್ಲಿ
ಪ್ರತಿಧ್ವನಿಸುವ ಸಾಧ್ಯತೆ ಇದೆ. ಕೋವಿಡ್‌ಮಾರ್ಗಸೂಚಿಗಳ ಪಾಲನೆ, ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದ ಘಟನಾವಳಿಗಳನ್ನೂ ಸದನದಲ್ಲಿ ಪ್ರಸ್ತಾಪಿಸಿ, ವಾಗ್ದಾಳಿ ನಡೆಸುವುದಕ್ಕೆ ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ.

ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಮೊತ್ತದಲ್ಲಿ ಶೇ 40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪದ ಕುರಿತು ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಹೆಚ್ಚು ಚರ್ಚೆಯಾಗಿರಲಿಲ್ಲ.

ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳ ಪ್ರಮುಖರು ತಯಾರಿ ನಡೆಸಿದ್ದಾರೆ. ಅನುದಾನ ಬಿಡುಗಡೆಯಲ್ಲಿನ ತಾರತಮ್ಯ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸುವ ಸಾಧ್ಯತೆಯೂ ಇದೆ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆ ಮತ್ತು ಇತರ ಸಂದರ್ಭಗಳಲ್ಲಿ ಪ್ರತಿಪಕ್ಷಗಳಿಂದ ತೂರಿ ಬರಬಹುದಾದ ವಾಗ್ಬಾಣಗಳನ್ನು ಎದುರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಸದಸ್ಯರೂ ಸಜ್ಜಾಗಿದ್ದಾರೆ. ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ, ಪ್ರತಿಪಕ್ಷಗಳ ಸವಾಲುಗಳಿಗೆ ಅಂಕಿ-ಅಂಶಗಳ ಸಮೇತ ಜವಾಬು ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

ಹಿಂದಿನ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಗೆ ವಿಧಾನ ಪರಿಷತ್‌ನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪರಿಷತ್‌ನಲ್ಲೂ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಲು ಪ್ರಯತ್ನಿಸುವ ಸಾಧ್ಯತೆ ಇದೆ. 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ಪರೀಕ್ಷೆಯ ಆಯ್ಕೆಪಟ್ಟಿಯನ್ನು ಊರ್ಜಿತಗೊಳಿಸುವ ಮಸೂದೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಸೂದೆಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ.

ಹಲವು ಬದಲಾವಣೆಗಳು:

ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ನೇಮಕವಾಗಿದ್ದಾರೆ. ಉಪ ನಾಯಕರಾಗಿ ಕೆ.ಗೋವಿಂದರಾಜು ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಕೆ.ಪ್ರಕಾಶ್ ರಾಠೋಡ್‌ ನೇಮಕಗೊಂಡಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕರಾಗಿ ಕಾಂಗ್ರೆಸ್‌ನ ಯು.ಟಿ. ಖಾದರ್‌ ನೇಮಕಗೊಂಡಿದ್ದಾರೆ. ಈ ಎಲ್ಲರೂ ಹೊಸ ಜವಾಬ್ದಾರಿಗಳೊಂದಿಗೆ ಅಧಿವೇಶನಕ್ಕೆ ಬರುತ್ತಿದ್ದಾರೆ. ಸಭಾನಾಯಕರಾಗಿ ಶ್ರೀನಿವಾಸಪೂಜಾರಿ ಮುಂದುವರೆಯಲಿದ್ದಾರೆ. ಆದರೆ, ಉಪಸಭಾಪತಿ ಮತ್ತು ಮುಖ್ಯ ಸಚೇತಕರ ಆಯ್ಕೆ ಆಗಬೇಕಾಗಿದೆ. ಉಪಸಭಾಪತಿ ಸ್ಥಾನಕ್ಕೆ ಆಯನೂರು ಮಂಜುನಾಥ, ಅರುಣ್‌ ಶಹಪೂರ ಮತ್ತು ವೈ.ಎ.ನಾರಾಯಣ ಸ್ವಾಮಿ ಅವರು ಹೆಸರು ಕೇಳಿ ಬಂದಿದೆ. ಸೋಮವಾರ ಆಯ್ಕೆ ಪ್ರಕಟವಾಗುವ ಸಾಧ್ಯತೆ ಇದೆ.

2021ರ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವವರ ಪೈಕಿ ಹಲವರು ಇದೇ ಮೊದಲ ಬಾರಿ ಮೇಲ್ಮನೆ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT