ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಕಾಯ್ದೆ: ಸಿಎಂ ಬೊಮ್ಮಾಯಿ, ಬಿ.ಕೆ. ಹರಿಪ್ರಸಾದ್ ಮಧ್ಯೆ ವಾಗ್ಯುದ್ಧ

Last Updated 15 ಸೆಪ್ಟೆಂಬರ್ 2022, 18:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆಯನ್ನು (ಮತಾಂತರ ನಿಷೇಧ) ವಿಧಾನ ಪರಿಷತ್‌ನಲ್ಲಿ ಗುರುವಾರ ಮಂಡಿಸಿದ ಬಳಿಕ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಧ್ಯೆ ವಾಗ್ಯುದ್ಧವೇ ನಡೆಯಿತು. ಅಂಬೇಡ್ಕರ್‌, ಬಸವಣ್ಣ, ಆರ್‌ಎಸ್‌ಎಸ್‌ ಸಿದ್ಧಾಂತಗಳು, ದ್ವೇಷ ಮತ್ತು ಪ್ರೀತಿ ವಿಷಯಗಳು ಉಲ್ಲೇಖವಾದವು. ವಾಗ್ಯುದ್ಧ ಸಂಕ್ಷಿಪ್ತ ನೋಟ ಇಲ್ಲಿದೆ.

******

‘ಮೊಘಲರು, ಬ್ರಿಟಿಷರ ಆಡಳಿತದಲ್ಲಿ ಸಾಮೂಹಿಕ ಮತಾಂತರ ಏಕೆ ನಡೆಯಲಿಲ್ಲ?’

lವಿಧಿ 25ರ ಅನ್ವಯ ಯಾವುದೇ ಧರ್ಮ ಆಚರಿಸಬಹುದಾಗಿದೆ. ಒಂದು ವೇಳೆ, ಕರ್ನಾಟಕದಲ್ಲಿ ಬಲವಂತದ ಮತಾಂತರ ನಡೆಯುತ್ತಿದ್ದರೆ ಇದುವರೆಗೆ ಎಷ್ಟು ಪ್ರಕರಣಗಳನ್ನು ದಾಖಲು ಮಾಡಿದ್ದೀರಿ?

lನೀವು ಲೋಹಿಯಾ ಬಗ್ಗೆ ಮಾತನಾಡುವುದಾದರೆ ಈ ಕಡೆ (ಕಾಂಗ್ರೆಸ್‌) ಬನ್ನಿ. ನೀವು ಅಲ್ಲಿ ಗೋಡ್ಸೆ, ಗೋಳ್ವಾಲ್ಕರ್‌ ಬಗ್ಗೆ ಮಾತ್ರ ಮಾತನಾಡಬೇಕು.

lದ್ವೇಷವನ್ನು ಪ್ರಚೋದಿಸಲಾಗುತ್ತದೆ. ದ್ವೇಷದ ವಿಷ ಬೀಜ ಬಿತ್ತಲಾಗುತ್ತದೆ. ಅದು ಜನ್ಮತಃ ಇರುವುದಿಲ್ಲ.

lಸುಮಾರು 700 ವರ್ಷ ಮೊಘಲರು ಮತ್ತು 200 ವರ್ಷ ಬ್ರಿಟಿಷರು ಆಳಿದರು. ಇವರ ಅವಧಿಯಲ್ಲಿ ಎಲ್ಲರನ್ನೂ ಮತಾಂತರ ಮಾಡಬಹುದಾಗಿತ್ತು. ಆದರೆ, ಈ ದೇಶಕ್ಕೆ ಎಲ್ಲರನ್ನೂ ಒಳಗೊಳ್ಳುವ ಒಂದು ಸಂಸ್ಕೃತಿ ಇದೆ.

lಮತಾಂತರ ನಿಷೇಧ ಮಸೂದೆಯು ಬಸವರಾಜ ಬೊಮ್ಮಾಯಿ ಹೋರಾಟ. ಬಸವಣ್ಣನ ಹೋರಾಟವಲ್ಲ.

lಅಂಬೇಡ್ಕರ್‌ ಅವರು ಮೊದಲ ಮಂತ್ರಿಮಂಡಲದಲ್ಲೇ ಇದ್ದರು. ಅಂಬೇಡ್ಕರ್‌ ಅವರ ಬಗ್ಗೆ ಬಿಜೆಪಿಯವರು ಮೊಸಳೆ ಕಣ್ಣೀರು ಹಾಕುವುದು ಬೇಡ. ಅಂಬೇಡ್ಕರ್‌ ಅವರ ಹತ್ತಿರದ ಸಂಬಂಧಿ, ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ಮೂರು ವರ್ಷಗಳಿಂದ ಜೈಲಿನಲ್ಲಿರಿಸಲಾಗಿದೆ.ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಅನ್ಯಾಯ ಮಾಡಿಲ್ಲ.

lದೇಶದ ಜನಸಂಖ್ಯೆಯಲ್ಲಿಶೇ 80ರಷ್ಟು ಹಿಂದೂಗಳೇ ಇರುವಾಗ ಮತಾಂತರದ ಭಯ ಏಕೆ? ಈ ಕಾಯ್ದೆ ಮೂಲಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿ ಅಸಮಾನತೆ ಸೃಷ್ಟಿಸುವ ಹುನ್ನಾರ ಇದು.

– ಬಿ.ಕೆ. ಹರಿಪ್ರಸಾದ್‌,ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

‘ಕಾಂಗ್ರೆಸ್‌ನಿಂದಲೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ’

lನಾವು ವಿಧಿ 25 ಉಲ್ಲಂಘಿಸಿಲ್ಲ. ಮತಾಂತರ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ. ಶಾಂತಿ, ಸುವ್ಯವಸ್ಥೆಗಾಗಿ ಈ ಕಾನೂನು.

lಸೌಹಾರ್ದಯುತವಾಗಿ ಜನರು ಬದುಕುವ ವಾತಾವರಣ ಸೃಷ್ಟಿಸಲು ಚೌಕಟ್ಟು ನೀಡುವುದೇ ಧರ್ಮ. ಲೋಹಿಯಾ ಅವರುಧರ್ಮವೆನ್ನುವುದು ದೀರ್ಘಾವಧಿಯ ರಾಜಕಾರಣ ಎಂದು ಹೇಳಿದ್ದರು.

lದ್ವೇಷವೂ ಮನುಷ್ಯನಲ್ಲಿದೆ. ಪ್ರೀತಿಯ ಹಾಗೆ ದ್ವೇಷವೂ ಇದೆ. ಪ್ರೀತಿ ಮತ್ತು ದ್ವೇಷವೂ ಮನದಾಳದಿಂದ ಬರುತ್ತದೆ. ಪ್ರೀತಿಯು ವಿಶಾಲವಾದ ಹೃದಯದಿಂದ ಅರಳುತ್ತದೆ.ದ್ವೇಷವು ಪ್ರಚೋದನೆ ಎಂದು ಅನಿಸಿದರೆ ಅದು ನಿಮ್ಮ ದೌರ್ಬಲ್ಯ.

lಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಸಂಸತ್‌ಪ್ರವೇಶಿಸಲು ಕಾಂಗ್ರೆಸ್ ಅವಕಾಶ ನೀಡಿರಲಿಲ್ಲ.ಅನಿವಾರ್ಯವಾಗಿ ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರೇ ಹೊರತು ಪ್ರೀತಿ, ವಿಶ್ವಾಸದಿಂದ ಅಲ್ಲ. ಅಂಬೇಡ್ಕರ್‌ ವಿರುದ್ಧ ಎಸ್‌.ಕೆ. ಪಾಟೀಲ್‌ ಅವರನ್ನು ಕಣಕ್ಕಿಳಿಸಲಾಗಿತ್ತು. ಆಗಅಂಬೇಡ್ಕರ್‌ ಅವರಿಗೆ ಹಿಂದೂ ಮಹಾಸಭಾ ಮಾತ್ರ ಬೆಂಬಲ ನೀಡಿತ್ತು.

lನಿಮ್ಮ ವಿಚಾರಧಾರೆಗಳು ಯಾವ ಶಾಲೆಯದ್ದೂ ಅಲ್ಲ. ನಿಮ್ಮ ಅಧ್ಯಕ್ಷರ ಪಡಸಾಲೆಯಿಂದ ಬಂದ ವಿಚಾರಗಳನ್ನು ಮಾತ್ರ ಮಂಡಿಸುತ್ತಿದ್ದೀರಿ. ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್‌ ಪ್ರಮುಖ ಪಾತ್ರವಹಿಸಿದೆ. ಆದರೆ, ಅಂದಿನ ಮತ್ತು ಇಂದಿನ ಕಾಂಗ್ರೆಸ್‌ ವಿಭಿನ್ನ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ ವಿಸರ್ಜಿಸಿ ಎಂದ ಮಹಾತ್ಮ ಗಾಂಧಿ ಅವರನ್ನೇ ನೀವು ಕೈಬಿಟ್ಟಿದ್ದೀರಿ.

lಶಾಂತಿ ಸುವ್ಯವಸ್ಥೆ ಹದಗೆಡಲು ನೀವೇ ಕಾರಣ. ಕಾನೂನಿನ ದುರುಪಯೋಗ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT