ಹುಬ್ಬಳ್ಳಿ: 'ರೈತ ದೇಶದ ಬೆನ್ನೆಲಬು. ಯಾವುದೇ ನಾಡಿನ ಹಿತ ಮತ್ತು ಅಭಿವೃದ್ಧಿ ಅಲ್ಲಿನ ರೈತರ ಉನ್ನತಿಯಲ್ಲಿದೆ. ನವ ಕರ್ನಾಟಕ ನಿರ್ಮಾಣವು ಕೃಷಿ ವಲಯದ ಅಭಿವೃದ್ಧಿಯೊಂದಿಗೆ ಆರಂಭವಾದರೆ, ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವುದರಲ್ಲಿ ಎರಡು ಮಾತಿಲ್ಲ' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
‘ಕೃಷಿ ಮತ್ತು ಕೃಷಿಕನ ಬದುಕು ಹಸನುಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಜಾರಿಯಷ್ಟೇ ಸರ್ಕಾರದ ಕರ್ತವ್ಯವಲ್ಲ. ರೈತರಿಗೆ ತಲುಪಿರುವ ಖಾತ್ರಿ ಮಾಡಿಕೊಳ್ಳಬೇಕು. ಕೃಷಿಯ ಮೌಲ್ಯವರ್ಧನೆಗೂ ಒತ್ತು ನೀಡಬೇಕು. ರೈತ ಸಾಂಪ್ರದಾಯಿಕ ಕೃಷಿಗೆ ಅಂಟಿಕೊಳ್ಳದೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದರು.
‘ಸರ್ಕಾರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುತ್ತದೆ. ಅಗತ್ಯ ಯೋಜನೆಗಳನ್ನು ರೂಪಿಸುತ್ತದೆ. ಜಾರಿಗೆ ತರುವ ಹೊಣೆ ಅಧಿಕಾರಿಗಳ ಮೇಲಿದೆ. ಈ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸೌಲಭ್ಯಗಳು ಸೋರಿಕೆಯಾಗುವ ಜೊತೆಗೆ, ಅನರ್ಹರ ಪಾಲಾಗುತ್ತಿವೆ. ಈ ವ್ಯವಸ್ಥೆ ಯನ್ನು ಸರಿಪಡಿಸುವ ಕೆಲಸವನ್ನು ಸಹ ಸರ್ಕಾರವೇ ಮಾಡಬೇಕಾಗುತ್ತದೆ. ಆಗಲೇ ಯೋಜನೆಗಳು ಜನರನ್ನು ನೇರವಾಗಿ ತಲುಪಲಿವೆ’ ಎಂದು ಹೇಳಿದರು.
‘ಅಭಿವೃದ್ಧಿಗೆ ಪ್ರೇರಣೆ ಮೇಲಿನಿಂದಲೇ ಬರಬೇಕೆಂದೇನೂ ಇಲ್ಲ. ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವನಾಗಿದ್ದಾಗ, ಗ್ರಾಮಸೌಧದಿಂದ ವಿಧಾನಸೌಧಕ್ಕೆ ಎಂಬ ಕಾರ್ಯಕ್ರಮ ಮಾಡಿದ್ದೆವು. ಆಗ, ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಪಂಚಾಯಿತಿಗಳಿಗೆ ನೀಡುವ ಅನುದಾನ ಮೇಲಿನಿಂದ ಪಂಚಾಯಿತಿ ತಲುಪುವವರೆಗೆ ಎಷ್ಟಾಗುತ್ತದೆ ಎಂಬುದರ ಬಗ್ಗೆ ಗಮನ ಸೆಳೆದರು. ಪಂಚಾಯಿತಿಗಳಿಗೆ ನೇರವಾಗಿ ಅನುದಾನ ನೀಡುವಂತೆ ಮನವಿ ಮಾಡಿದರು. ನನಗೂ ಸರಿ ಎನ್ನಿಸಿತು. ಅಧಿಕಾರಿಗಳ ಜೊತೆ ಚರ್ಚಿಸಿ ನೇರವಾಗಿ ಅನುದಾನ ಕೊಡಲು ವ್ಯವಸ್ಥೆ ಮಾಡಿದೆ’ ಎಂದರು.
‘ಬದಲಾವಣೆ ಒಮ್ಮಿಂದೊಮ್ಮೆಲೆ ಘಟಿಸುವುದಿಲ್ಲ. ಚಿಂತನೆ, ಯೋಜನೆ, ಅನುಷ್ಠಾನ, ತಲುಪುವಿಕೆ ಹಾಗೂ ಬದಲಾವಣೆಗೆ ಹೆಚ್ಚಿನ ಸಮಯ ಬೇಕು. ಹಾಗಂತ ನಾವು ಪ್ರಯತ್ನ ಬಿಡಬಾರದು. ಈ ಶೃಂಗವು ನವ ಕರ್ನಾಟಕ ನಿರ್ಮಾಣದ ಎಲ್ಲಾ ಆಯಾಮಗಳನ್ನು ಸಹ ಚರ್ಚಿಸಿ, ಅಭಿವೃದ್ಧಿಗೆ ಹೊಸ ಹೊಳಹುಗಳನ್ನು ಕೊಟ್ಟಿದೆ’ ಎಂದರು.
ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಕೃತಜ್ಞತೆ ಸಲ್ಲಿಸಿ ಮಾತನಾಡಿ, ‘ಮಾಧ್ಯಮ ಕೇವಲ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ. ಹಾಗಂತ ಎಲ್ಲವನ್ನೂ ವಿರೋಧಿಸುವುದೇ ನಮ್ಮ ಕೆಲಸವಲ್ಲ. ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತಹ ಕಾರ್ಯಕ್ರಮಗಳನ್ನೂ ಸಹ ಮಾಡುತ್ತವೆ ಎಂಬುದಕ್ಕೆ ಈ ನವ ಕರ್ನಾಟಕ ಶೃಂಗವೇ ಸಾಕ್ಷಿ’ ಎಂದರು.
*
ಹಲವು ವಿಷಯಗಳ ಚರ್ಚೆಯ ಈ ವೇದಿಕೆ ಅಭೂತಪೂರ್ವ. ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಬದ್ಧತೆ ಶ್ಲಾಘನೀಯ.
-ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.