ಭಾನುವಾರ, ಜೂನ್ 13, 2021
21 °C

ಕೆಲಸವೇ ಇಲ್ಲ: ಇಲ್ಲಿದ್ದು ಏನ್ಮಾಡೋದು... ಮುಂದುವರಿದ ಕಾರ್ಮಿಕರ ವಲಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಿರುವ ಕಾರಣ ಭಾನುವಾರವೂ ರೈಲು ನಿಲ್ದಾಣದ ಎದುರು ಮತ್ತು ಟೋಲ್‌ಗಳ ಬಳಿ ಭಾರಿ ಸಂಖ್ಯೆಯಲ್ಲಿ ಜನ ಮತ್ತು ವಾಹನಗಳ ಸಂದಣಿ ಕಂಡು ಬಂದಿತು.

ಕಾರ್ಮಿಕರು ಕುಟುಂಬದೊಂದಿಗೆ ಗಂಟು ಮೂಟೆ ಹೊತ್ತು ನಿಲ್ದಾಣದತ್ತ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೂರದ ಊರಿಗೆ ಹೊರಟಿದ್ದ ವ್ಯಕ್ತಿಯೊಬ್ಬರು ಪ್ರಯಾಣದ ವೇಳೆ ದಾಹ ನೀಗಿಸಿಕೊಳ್ಳಲು ನೀರು ತುಂಬಿದ್ದ ದೊಡ್ಡ ಕ್ಯಾನ್‌ವೊಂದನ್ನು ಮನೆಯಿಂದಲೇ ಹೊತ್ತು ತಂದಿದ್ದರು.

ಹಲವರು ದ್ವಿಚಕ್ರ ಹಾಗೂ ಕಾರಿನ ಮೇಲೆ ಬಟ್ಟೆ ತುಂಬಿದ ಬ್ಯಾಗ್‌ಗಳನ್ನು ಇಟ್ಟುಕೊಂಡು ಮುಂಜಾನೆಯೇ ಊರಿನತ್ತ ಹೊರಟಿದ್ದ ದೃಶ್ಯ ನೆಲಮಂಗಲದ ಬಳಿ ಕಂಡುಬಂತು. ಕೆಲವರು ಗೂಡ್ಸ್‌ ಆಟೊದಲ್ಲಿ ಸಾಮಾನು ಸರಂಜಾಮು ತುಂಬಿಕೊಂಡು ಹೋಗುತ್ತಿದ್ದರು. ಹೀಗಾಗಿ ನವಯುಗ ಟೋಲ್‌ಗೇಟ್‌ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು.

ಇಲ್ಲಿ ಇದ್ದು ಏನು ಮಾಡೋದು?: ‘ಗಾರೆ ಕೆಲಸ ಮಾಡಿಕೊಂಡು ಹೇಗೊ ಬದುಕು ಸಾಗಿಸುತ್ತಿದ್ದೆವು. ಲಾಕ್‌ಡೌನ್‌ ಕಾರಣ ಕೆಲಸಕ್ಕೆ ಕುತ್ತು ಬಂದಿದೆ. ಕೈಯಲ್ಲಿ ಕಾಸೇ ಇಲ್ಲದ ಮೇಲೆ ಬೆಂಗಳೂರಿನಲ್ಲಿ ಇದ್ದುಕೊಂಡು ಏನು ಮಾಡುವುದು– ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರು ಕುಟುಂಬದ ಸದಸ್ಯರೊಂದಿಗೆ ಹರಟುತ್ತಾ ನಿಂತಿದ್ದ ಗಂಗಪ್ಪ ಪ್ರಶ್ನಿಸಿದ್ದು ಹೀಗೆ.

‘ಹೆಂಡತಿ ಮಕ್ಕಳ ಜೊತೆ ಕುಂಬಳಗೋಡಿನಲ್ಲಿ ನೆಲೆಸಿದ್ದೆ. ಗಾರೆ ಕೆಲಸ ಮಾಡುತ್ತಿದ್ದುದರಿಂದ ಮೂರು ಹೊತ್ತಿನ ಊಟಕ್ಕೇನೂ ಸಮಸ್ಯೆ ಇರಲಿಲ್ಲ. ಕೋವಿಡ್‌ನಿಂದಾಗಿ ದುಡಿಮೆಗೆ ಪೆಟ್ಟು ಬಿದ್ದಿದೆ. ಸರ್ಕಾರ ದಿನಕ್ಕೊಂದು ನಿರ್ಧಾರ ಕೈಗೊಳ್ಳುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶವೇನೋ ನೀಡಿದೆ. ಅದಕ್ಕೆ ಹಣ ಬೇಕಲ್ಲ. ದಿನಗೂಲಿಯನ್ನೇ ನಂಬಿರುವ ನಮ್ಮಂತಹವರ ಗತಿ ಏನು. ಲಾಕ್‌ಡೌನ್‌ ಕಾರಣ ದಿನಪೂರ್ತಿ ಮನೆಯಲ್ಲೇ ಇರಬೇಕಂತೆ. ಹಾಗಾದರೆ ಹೊಟ್ಟೆಗೇನು ಮಾಡುವುದು’ ಎಂದು ಕೇಳಿದರು.

‘ನಾವು ರಾಯಚೂರು ಜಿಲ್ಲೆ ಲಿಂಗಸುಗೂರಿನವರು. ಮನೆಯಲ್ಲಿ ಬಡತನವಿದ್ದ ಕಾರಣ ದುಡಿಮೆ ಅರಸಿ ಇಲ್ಲಿಗೆ ಬಂದಿದ್ದೆವು. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಇರುವುದು ಸುರಕ್ಷಿತವಲ್ಲ. ಹೀಗಾಗಿ ಊರ ಹಾದಿ ಹಿಡಿದಿದ್ದೇವೆ. ಅಲ್ಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ದಿನ ದೂಡುತ್ತೇವೆ’ ಎಂದರು.

‘ಲಾಕ್‌ಡೌನ್‌ ಅವಧಿಯಲ್ಲಿ ಕೆಲಸಕ್ಕೂ ಹೋಗುವಂತಿಲ್ಲ. ಹೀಗಾಗಿ ಊರಿಗೆ ಹೊರಟಿದ್ದೇವೆ. ಪರಿಸ್ಥಿತಿ ಸರಿಹೋದ ಮೇಲೆ ಮತ್ತೆ ವಾಪಸ್ಸು ಬರುತ್ತೇವೆ’ ಎಂದು ಕುಟುಂಬದ ಜೊತೆ ಕಲಬುರ್ಗಿಗೆ ಹೋಗುತ್ತಿದ್ದ ಈಶ್ವರ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು