ಬುಧವಾರ, ಜೂನ್ 29, 2022
25 °C

Karnataka Covid Updates: 278 ಹೊಸ ಪ್ರಕರಣ, ಮೂವರು ಸಾವು

ಐಎಎನ್ಎಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 3,286ಕ್ಕೆ ಇಳಿಕೆಯಾಗಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರ ಸಂಖ್ಯೆ 24 ಜಿಲ್ಲೆಗಳಲ್ಲಿ 50ಕ್ಕಿಂತ ಕಡಿಮೆ ಇವೆ. 

ಒಂದು ದಿನದ ಅವಧಿಯಲ್ಲಿ 52 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 278 ‌‌ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕು ದೃಢ ಪ್ರಮಾಣ ಶೇ 0.53 ರಷ್ಟಿದೆ. ಬೆಂಗಳೂರಿನಲ್ಲಿ 182 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಶಿವಮೊಗ್ಗದಲ್ಲಿ 14 ಹಾಗೂ ಮೈಸೂರಿನಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ ಒಂದಂಕಿಯಲ್ಲಿವೆ.

ವಿಜಯಪುರ, ರಾಮನಗರ, ರಾಯಚೂರು, ಮಂಡ್ಯ, ಗದಗ, ದಾವಣಗೆರೆ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರದಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಈವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 39.42 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಬೆಂಗಳೂರಿನಲ್ಲಿ 222 ಮಂದಿ ಸೇರಿದಂತೆ ರಾಜ್ಯದಲ್ಲಿ 458 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 38.99 ಲಕ್ಷಕ್ಕೆ ತಲುಪಿದೆ.  

ಕೊರೊನಾ ಸೋಂಕಿತರಲ್ಲಿ 3 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಬೆಂಗಳೂರು, ಚಿತ್ರದುರ್ಗ ಹಾಗೂ ಧಾರವಾಡದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 1.07 ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 40 ಸಾವಿರದ ಗಡಿ (39,988) ಸಮೀಪಿಸಿದೆ. 

12.26 ಲಕ್ಷ ಮಂದಿಗೆ 3ನೇ ಡೋಸ್
ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಿಂದಾಗಿ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ವಿತರಣೆಗೆ (ಮೂರನೇ ಡೋಸ್) ಹಿನ್ನಡೆಯಾಗಿದೆ. ಎರಡನೇ ಡೋಸ್ ಪಡೆದ 4.78 ಕೋಟಿ ಜನರಲ್ಲಿ 12.25 ಲಕ್ಷ ಮಂದಿ ಮಾತ್ರ ಮೂರನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

2022ರ ಜ.10ರಂದು ಮತ್ತೊಂದು ಡೋಸ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿತ್ತು. ಎರಡನೆ ಡೋಸ್ ಪಡೆದು ಒಂಬತ್ತು ತಿಂಗಳು ಪೂರೈಸಿದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ 45 ವರ್ಷಗಳ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ವಿತರಿಸಲಾಗುತ್ತದೆ.

ಆರೋಗ್ಯ ಕಾರ್ಯಕರ್ತರಲ್ಲಿ 7.51 ಲಕ್ಷ ಮಂದಿ ಹಾಗೂ ಕೋವಿಡ್ ಮುಂಚೂಣಿ ಯೋಧರಲ್ಲಿ 9.33 ಲಕ್ಷ ಮಂದಿ ಎರಡನೆ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಕ್ರಮವಾಗಿ 3.36 ಹಾಗೂ 1.62 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 45 ವರ್ಷಗಳು ಮೇಲ್ಪಟ್ಟವರಲ್ಲಿ 7.25 ಲಕ್ಷ ಹಾಗೂ 60 ವರ್ಷಗಳು ಮೇಲ್ಪಟ್ಟವರಲ್ಲಿ 12.25 ಲಕ್ಷ ಮಂದಿಗೆ ಮತ್ತೊಂದು ಡೋಸ್ ಲಸಿಕೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು