ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಹಾ ಮೇಳಾವ್‌ಗೆ ತಡೆ, ‘ಮಹಾ’ ಮುಖಂಡರ ಮೇಲೆ ಲಘು ಲಾಠಿಚಾರ್ಜ್‌

Last Updated 19 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಮಹಾ ಮೇಳಾವ್‌’ಗೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತ, 30ಕ್ಕೂ ಹೆಚ್ಚು ಎಂಇಎಸ್‌ ನಾಯಕರನ್ನು ವಶಕ್ಕೆ ಪಡೆಯಿತು.

ಇಲ್ಲಿ ವಿಧಾನಮಂಡಲ ಅಧಿವೇಶನವನ್ನು (2006) ಆರಂಭಿಸಿದಾಗಿನಿಂದ ಇದಕ್ಕೆ ಅಡ್ಡಗಾಲು ಹಾಕಲು ಮಹಾ ಮೇಳಾವ್‌ ಆಯೋಜಿಸುತ್ತ ಬರಲಾಗಿದೆ. ಈಗ ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ ಹೊತ್ತಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅನುಮತಿ ನಿರಾಕರಿಸಿತು.

ಎಡಿಜಿಪಿ ಅಲೋಕ್‌ಕುಮಾರ್‌ ಸ್ಥಳದಲ್ಲಿಯೇ ನಿಂತು, ಮರಾಠಿಗರು ಹಾಕಿದ್ದ ವೇದಿಕೆ ತೆರವುಗೊಳಿಸಿದರು. ‘ನಿಷೇಧಾಜ್ಞೆ ಜಾರಿ ಇದ್ದು, ಸಮಾವೇಶ ನಡೆಸಲು ಅನುಮತಿ ಇಲ್ಲ’ ಎಂದು ಎಂಇಎಸ್‌ ಮುಖಂಡರಿಗೆ ತಾಕೀತು ಮಾಡಿದರು.

ಎಂಇಎಸ್‌ ಮುಖಂಡರಾದ ರೇಣು ಕಿಲ್ಲೇಕರ್‌, ಸರಿತಾ ಪಾಟೀಲ, ಶಿವಾಜಿ ಸುಂಠಕರ, ರವಿ ಸಾಳುಂಕೆ ಸೇರಿ ಹಲವರು ಮೇಳಾವ್‌ ಆಯೋಜಿಸಿದ್ದ ವ್ಯಾಕ್ಸಿನ್‌ ಡಿಪೊ ಆವರಣಕ್ಕೆ ನುಗ್ಗಿದರು.‘ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್‌, ಭಾಲ್ಕಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್‌ ಪಾಹಿಜೆ’ ಎಂದು ಘೋಷಣೆಕೂಗಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಗಡಿಯೊಳಗೆ ನುಗ್ಗಲು ಯತ್ನ, ಲಾಠಿಚಾರ್ಜ್‌: ಮಹಾ ಮೇಳಾವ್‌ಗೆ ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ, ಬೆಳಗಾವಿ ಗಡಿಯೊಳಗೆ ನುಗ್ಗಲು ಮುಂದಾದ ‘ಮಹಾ ವಿಕಾಸ್ ಅಘಾಡಿ’ ನಾಯಕರನ್ನು ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ಜಿಲ್ಲಾ ಪೊಲೀಸರು ತಡೆದರು.

ಪೊಲೀಸರ ಸರ್ಪಗಾವಲು ಭೇದಿಸಿ ನುಗ್ಗಲು ಯತ್ನಿಸಿದಾಗ ಲಘು ಲಾಠಿಚಾರ್ಜ್‌ ಮಾಡಿದರು.

ಎನ್‌ಸಿಪಿ ಮುಖಂಡ, ಶಾಸಕ ಹಸನ್ ಮುಶ್ರಿಫ್, ಶಿವಸೇನೆ (ಯು) ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ದೇವಣೆ, ಪ್ರತಾಪ್‌ ಮಾನೆ, ಸುನೀಲ ಮಾಳಿ, ಸಚಿನ ಚವ್ಹಾಣ ಸೇರಿ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಹಾರಾಷ್ಟ್ರದ ಪೊಲೀಸರೇ ವಶಕ್ಕೆ ಪಡೆದುಕೊಂಡರು.

ಮತ್ತೊಂದೆಡೆ, ಮಹಾರಾಷ್ಟ್ರದ ಚಂದಗಡ ತಾಲ್ಲೂಕಿನ ಶಿನೋಳಿಯಿಂದ ಬೆಳಗಾವಿಗೆ ಬರಲು ಮಹಾ ವಿಕಾಸ್ ಅಘಾಡಿ ನಾಯಕರು ಯತ್ನಿಸಿದರು. ಗಡಿಯಂಚಿನ ಬಾಚಿ ಬಳಿ ಅವರನ್ನು ತಡೆದು ವಾಪಸ್‌ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT