ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 3 ಸಾವಿರ ಕೆರೆಗಳ ಒತ್ತುವರಿ: ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ

ಕೆರೆಗಳನ್ನು ಸುಸ್ಥಿತಿಗೆ ತರಲು ಅಗತ್ಯ ಕ್ರಮ
Last Updated 15 ಮಾರ್ಚ್ 2022, 22:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 3,000 ಕೆರೆಗಳು ಒತ್ತುವರಿಯಾಗಿದ್ದು, ಇವುಗಳಲ್ಲಿ ಹೂಳು ತುಂಬಿಕೊಂಡುಬಳ್ಳಾರಿ ಜಾಲಿ ಬೆಳೆದಿವೆ. ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಸುಸ್ಥಿತಿಗೆ ತರಲಾಗುವುದು ಎಂದು ಸಣ್ಣನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಎಂ.ವಿ.ವೀರಭದ್ರಯ್ಯ ಅವರ ಪ್ರಶ್ನೆಗೆ ಉತ್ತರಿಸಿ, ಸರ್ವೆಯರ್‌ಗಳ ಕೊರತೆಯಿಂದ ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ನಡೆಯುತ್ತಿಲ್ಲ. ಕೆರೆಗಳ ಪುನಶ್ಚೇತನ ಕಾರ್ಯಕ್ಕಾಗಿ ಸುಮಾರು ₹300 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ ಒಟ್ಟು 56 ಕೆರೆಗಳಿದ್ದು ಅವುಗಳು ಒತ್ತುವರಿ ಆಗಿವೆ. ಈ ಪೈಕಿ ಒಂದು ಕೆರೆಯ ಸರ್ವೆ ಆಗಿದೆ. ಉಳಿದ 55 ಕೆರೆಗಳ ಸರ್ವೆ ಕಾರ್ಯ ಆಗಬೇಕಾಗಿದೆ. ಕಂದಾಯ ಇಲಾಖೆ ನೆರವಿನೊಂದಿಗೆ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಗಡಿ ಗುರುತಿಸಿ, ಒತ್ತುವರಿ ಇದ್ದರೆ ತೆರವು ಮಾಡಿ, ಗಡಿಕಲ್ಲುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಾವಿಗೆ ಕಾರಣ ಪತ್ತೆ ಮಾಡಿ: ಚಿತ್ರದುರ್ಗ ಜಿಲ್ಲೆಯ ಉಪವಿಭಾಗಾಧಿಕಾರಿ ಜಿ.ವಿ.ಪ್ರಸನ್ನ ಅವರು ವಾಕಿಂಗ್ ಮಾಡುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಗುದ್ದಿಸಿದ ಪರಿಣಾಮ ಸಾವನ್ನಪ್ಪಿದ್ದಾರೆ. ಇದು ಉದ್ದೇಶಪೂರ್ವಕ ಎಂಬ ಸಂಶಯವಿದೆ. ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡಿ ಕಾರಣವನ್ನು ಬಯಲಿಗೆ ತರಬೇಕು ಎಂದು ಕಾಂಗ್ರೆಸ್‌ನ ಟಿ. ರಘುಮೂರ್ತಿ ಒತ್ತಾಯಿಸಿದರು.

2021ರ ಮೇ ತಿಂಗಳಲ್ಲಿ ಈ ಘಟನೆ ನಡೆದಿದ್ದರೂ ಈವರೆಗೆ ಆರೋಪಿಗಳನ್ನು ಪತ್ತೆ ಮಾಡಲಾಗಿಲ್ಲ. ಆರೋಪಿಗಳನ್ನು ಪತ್ತೆ ಮಾಡಿದರೆ ಇದರ ಹಿಂದಿನ ಉದ್ದೇಶ ಗೊತ್ತಾಗುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅಲ್ಲಿ 2000 ದ್ವಿಚಕ್ರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ನೋಡಲಾಗಿದೆ. ಈವರೆಗೂ ಆರೋಪಿಗಳ ಸಣ್ಣ ಸುಳಿವೂ ಸಿಕ್ಕಿಲ್ಲ ಎಂದು ಹೇಳಿದರು.

ಯುಕೆಪಿ ಎಂಡಿ ಕಚೇರಿ ಸ್ಥಳಾಂತರ
ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಗೆ ಕೃಷ್ಣಾ ಭಾಗ್ಯ ಜಲನಿಗಮದ ಕಚೇರಿ ಸ್ಥಳಾಂತರಿಸಿದ್ದು, ಆದಷ್ಟು ಬೇಗ ವ್ಯವಸ್ಥಾಪಕ ನಿರ್ದೇಶಕರ ಕಾರ್ಯಾಲಯವನ್ನೂ ಸ್ಥಳಾಂತರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಕೃಷ್ಣಾ ಭಾಗ್ಯ ಜಲನಿಗಮದ ಕಚೇರಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆದರೆ, ದೈನಂದಿನ ಅತಿ ಮುಖ್ಯ ಕಾರ್ಯಗಳನ್ನು ನಿರ್ವಹಿಸಲು ಸಂಪರ್ಕ ಕಚೇರಿಯನ್ನು ಮುಂದುವರಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯನ್ನು ಮುಂದುವರಿಸಲು ಕೋರಿಕೆ ಸಲ್ಲಿಸಿದ್ದರು. ಆದರೆ, ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಸ್ಥಳಾಂತರಿಸುವುದು ಖಚಿತ ಎಂದರು.

ಜೈಲುಗಳಿಗೆ ಕೈಗಾರಿಕಾಭದ್ರತಾ ಸಿಬ್ಬಂದಿ
ಬೆಂಗಳೂರು, ಮಂಗಳೂರು, ಬಳ್ಳಾರಿ, ವಿಜಯಪುರ ಮತ್ತು ಬೆಳಗಾವಿಯ ಹಿಂಡಲಗಾ ಕಾರಾಗೃಹಗಳಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾಪಡೆಗಳಿಂದ ಭದ್ರತೆ ಒದಗಿಸಲಾಗುತ್ತಿದೆ. ಇದರಿಂದಾಗಿ ಕೈದಿಗಳಿಗೆ ಪೂರೈಕೆ ಆಗುತ್ತಿದ್ದ ಮೊಬೈಲ್‌, ಮಾದಕ ವಸ್ತುಗಳ ಮೇಲೆ ಕಡಿವಾಣ ಬಿದ್ದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೊದಲು ಕಾರಾಗೃಹ ಸಿಬ್ಬಂದಿಯೇ ತಪಾಸಣೆ ನಡೆಸುತ್ತಿದ್ದರು. ಇದೇ ಫೆಬ್ರುವರಿ 28 ರಿಂದ ಕೈಗಾರಿಕಾ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT