ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ: ಸಚಿವ ಕೆ.ಎಸ್. ಈಶ್ವರಪ್ಪ

Last Updated 7 ಏಪ್ರಿಲ್ 2021, 11:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸವಿದೆ. ಈಗಲೂ ನಮಗೆ ಅವರೇ ನಾಯಕರು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಇನ್ನೊಂದು ಇಲಾಖೆಯನ್ನು ಮುಖ್ಯಮಂತ್ರಿ ನೇರವಾಗಿ ನಿಭಾಯಿಸಲು ಬರುವುದಿಲ್ಲ. ಆದರೆ, ಹಣ ಬಿಡುಗಡೆ ಮಾಡಬಹುದು. ರಾಜ್ಯಪಾಲರು ಗುಜರಾತ್‌ನಲ್ಲಿ ಹಣಕಾಸು ಸಚಿವರಾಗಿದ್ದವರು. ಹೀಗಾಗಿ, ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಅವರ ಬಳಿ ಹೋಗಿದ್ದೆ. ಆದರೆ, ಯಾವುದೇ ಕಾರಣಕ್ಕೂ ನಾನು ಯಡಿಯೂರಪ್ಪನವರ ವಿರುದ್ಧ ದೂರು ಕೊಟ್ಟಿಲ್ಲ. ಮುಂದೆಯೂ ದೂರು ಕೊಡುವುದಿಲ್ಲ’ ಎಂದರು.

‘ಸಿ.ಟಿ ರವಿ ಪಕ್ಷದ ನಾಯಕರು. ಈ ವಿಷಯವನ್ನು ಅವರ ಗಮನಕ್ಕೆ ತಾರದೆ ದೇವೇಗೌಡರಿಗೆ, ಡಿ.ಕೆ. ಶಿವಕುಮಾರ್​ಗೆ ಹೇಳಲು ಆಗುತ್ತಾ? ಅಮಿತ್ ಶಾ, ಸಿ.ಟಿ ರವಿ, ಅರುಣ್ ಸಿಂಗ್ ಎಲ್ಲರೂ ನಮ್ಮ ಪಕ್ಷದ ಕುಟುಂಬದವರು. ಕುಟುಂಬ ಅಂದಾಗ ಇಲಾಖೆಯಲ್ಲಿ ಆದ ವಿಷಯದ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಇದು ಬಿಟ್ಟು ನಾನು ಯಾರಿಗೂ ದೂರು ಕೊಟ್ಟಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಸತ್ಯ ಕಂಡಾಗ ನಾನು ಮುನ್ನುಗ್ಗುವವನು. ಕುತ್ತಿಗೆ ಕೊಯ್ದರೂ ನಾನು ದಾರಿ ತಪ್ಪುವುದಿಲ್ಲ. ನಾನು ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಯಾವನದ್ದಾದರೂ ಅನುಮತಿ ಪಡೆಯಬೇಕಾ’ ಎಂದು ಪ್ರಶ್ನಿಸಿದ ಅವರು, ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷಕ್ಕೆ ಏನೇ ಬೈದರೂ ಅದಕ್ಕೆ ಸೂಕ್ತವಾದ ದಾಖಲೆ ಕೊಟ್ಟು ಮಾತಾಡಬೇಕು. ಅದು ಬಿಟ್ಟು ಸುಮ್ಮನೆ ಏನೇನೋ ಮಾತನಾಡುವುದು ಸರಿಯಲ್ಲ’ ಎಂದರು.

ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂಬ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಈಶ್ವರಪ್ಪ, ‘ಕಥೆ ಕಟ್ಟುವುದರಲ್ಲಿ ಸಿದ್ದರಾಮಯ್ಯ ನುರಿತ. ಅವರಿಗೆ ಜ್ಞಾನಪೀಠ ಪ್ರಶಸ್ತಿಯೊ ಅಥವಾ ನೊಬೆಲ್ ಪ್ರಶಸ್ತಿಯೊ ಕೊಡಬೇಕು. ಅವರಿಗೆ ಮಾಡಲು ಯಾವುದೇ ಉದ್ಯೋಗ ಇಲ್ಲ’ ಎಂದರು.

‘ರಾಜ್ಯದಲ್ಲಿ ಇಂಥ ಒಬ್ಬ ವಿರೋಧ ಪಕ್ಷದ ನಾಯಕರು ಇದ್ದಾರಲ್ಲ ಎಂದು ನನಗೆ ನೋವಾಗುತ್ತಿದೆ. ಅವರನ್ನು ಅವರ ಪಕ್ಷವೇ ತಿರಸ್ಕರಿಸಿದೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಮೈಸೂರು ಮೇಯರ್ ಚುನಾವಣೆಯಲ್ಲಿ ಅವರ ಸ್ಥಿತಿ ನೋಡಿದ್ದೇವೆ. ಸಿದ್ದರಾಮಯ್ಯನವರಿಗೆ ಅವರ ಪಕ್ಷದಲ್ಲಿಯೇ ಮರ್ಯಾದೆ ಇಲ್ಲ. ಈಗ ನಾನು ರಾಜೀನಾಮೆ ಕೊಡಬೇಕಾ? ಅಥವಾ ಅವರೇ ಕೊಡಬೇಕಾ? ಎಂಬುದನ್ನು ಮೊದಲು ನಿರ್ಧರಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT