ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ದಿಗ್ವಿಜಯ: 1,223 ಶಿಕ್ಷಕರ ಮತ ಅಸಿಂಧು!

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣಾ ಫಲಿತಾಂಶ ಪ್ರಕಟ
Last Updated 15 ಜೂನ್ 2022, 12:35 IST
ಅಕ್ಷರ ಗಾತ್ರ

ಧಾರವಾಡ/ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ 9,266 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು 8ನೇ ಬಾರಿ ಗೆಲುವು ತಮ್ಮದಾಗಿಸಿಕೊಂಡರು. ಆ ಮೂಲಕ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ದಾಖಲೆ ಬರೆದರು.

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಒಳಗೊಂಡು17,973 ಮತದಾರರು ಇರುವ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ 1980ರಿಂದ ಹೊರಟ್ಟಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಈ ಬಾರಿಯೂ ಕ್ಷೇತ್ರದ ಮತದಾರರು ಅವರನ್ನೇ ಬೆಂಬಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿ ಪರಿಷತ್ ಪ್ರವೇಶಿಸಿದ್ದ ಹೊರಟ್ಟಿ, ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆ ಬಯಸಿದ್ದರು.

ಇವರೊಂದಿಗೆ ಈ ಬಾರಿ ಶಿಕ್ಷಕ ಸಂಘಟನೆಗಳ ಮೂಲಕ ಗುರುತಿಸಿಕೊಂಡ ಬಸವರಾಜ ಗುರಿಕಾರ ಕಾಂಗ್ರೆಸ್‌ನಿಂದ, ಶ್ರೀಶೈಲ ಗಡದಿನ್ನಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಮೂವರನ್ನು ಒಳಗೊಂಡು ಒಟ್ಟು ಏಳು ಜನ ಕಣದಲ್ಲಿದ್ದರು.

ಜೂನ್ 13ರಂದು ನಡೆದ ಮತದಾನದಲ್ಲಿ ಒಟ್ಟು 15,583 ಮತಗಳು ಚಲಾವಣೆಯಾಗಿದ್ದವು. ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ಬುಧವಾರ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಹೊರಟ್ಟಿ ಗೆಲುವಿನ ಓಟ ಮುಂದುವರಿಸಿದರು. ಒಟ್ಟು 11 ಮೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಿತು. ಮೊದಲ ಸುತ್ತಿನಲ್ಲಿ ಒಟ್ಟು 11 ಸಾವಿರ ಮತಗಳ ಎಣಿಕೆ ಪೂರ್ಣಗೊಂಡ ನಂತರ, ಹೊರಟ್ಟಿ 6,451 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡರೆ ಕಾಂಗ್ರೆಸ್‌ನ ಬಸವರಾಜ ಗುರಿಕಾರ 3,309 ಮತಗಳನ್ನು ಪಡೆದರು. ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ 205 ಮತಗಳನ್ನು ಪಡೆದರು. ಆದರೆ ಮೊದಲ ಸುತ್ತಿನಲ್ಲೇ 856 ಮತಗಳು ಅಸಿಂಧುವಾಗಿದ್ದರಿಂದ, 10,144 ಮತಗಳನ್ನು ಎಣಿಕೆಗೆ ಪರಿಗಣಿಸಲಾಯಿತು.

ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಉಳಿದ 4,583 ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಯಿತು. ಇದರಲ್ಲಿ 367 ಮತಗಳು ಅಸಿಂಧುವಾದವು. ಎರಡನೇ ಸುತ್ತಿನ ಆರಂಭದಲ್ಲೇ ಗೆಲುವಿಗೆ ಅಗತ್ಯವಾಗಿ ಅಗತ್ಯವಿದ್ದ 7,181 ಮತಗಳನ್ನು ಹೊರಟ್ಟಿ ಪಡೆದು ಕ್ಷೇತ್ರದಲ್ಲಿ ಐತಿಹಾಸಿಕ 8ನೇ ಬಾರಿ ದಾಖಲೆಯ ಗೆಲುವಿನ ನಗೆ ಬೀರಿದರು.

ಕಾಂಗ್ರೆಸ್‌ನ ಬಸವರಾಜ ಗುರಿಕಾರ ಅವರು 4,597 ಮತಗಳನ್ನು ಪಡೆದರು. ಆ ಮೂಲಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತ ಪಡೆದಿದ್ದು ದಾಖಲಾಯಿತು. ಹೊರಟ್ಟಿ ಅವರ ಬಿಜೆಪಿ ಸೇರ್ಪಡೆಯಿಂದ ಕೊನೆ ಕ್ಷಣದಲ್ಲಿ ಶ್ರೀಶೈಲ ಗಡದಿನ್ನಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿತು. ಅವರು 273 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.

ಶಿಕ್ಷಕರ ನೆಮ್ಮದಿಗೆ ಶ್ರಮಿಸುವೆ: ಹೊರಟ್ಟಿ

ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರಬಂದ ಬಸವರಾಜ ಹೊರಟ್ಟಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಶಿಕ್ಷಕರ ಕೆಲಸಗಳನ್ನು ಮಾಡಿದ್ದರಿಂದಲೇ ಹಿಂದಿನಂತೆಯೇ ಈ ಬಾರಿಯೂ ನನ್ನನ್ನು ಬೆಂಬಲಿಸಿದ್ದಾರೆ. ಅವರ ಅಷ್ಟೂ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲದಿದ್ದರೂ, ಅವರು ನೆಮ್ಮದಿಯಿಂದ ಬದುಕು ನಡೆಸಲು ಅಗತ್ಯವಿರುವ ಕೆಲಸಗಳನ್ನು ಮುಂದೆಯೂ ಮಾಡುತ್ತೇನೆ’ ಎಂದರು.

‘1980ರಲ್ಲಿ ಇದ್ದ ಶಿಕ್ಷಕ ಮತದಾರರು ಈಗ ನಿವೃತ್ತರಾಗಿದ್ದಾರೆ. ಆದರೆ ಅವರ ಮಕ್ಕಳು, ಸೊಸೆಯಂದಿರು ಈಗ ಮತದಾರರಾಗಿದ್ದಾರೆ. ಹೀಗಾಗಿ 2ನೇ ತಲೆಮಾರಿನ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಮುಂದೆ ಸಭಾಪತಿ ಅಥವಾ ಸಚಿವನಾಗುವುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಬಿಟ್ಟ ವಿಷಯ’ ಎಂದರು.

ಹೊರಟ್ಟಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬಣ್ಣ ಎರಚಿ ಸಂಭ್ರಮಿಸಿದರು.

***

ಅಸಿಂಧು ಓಟುಗಳು ನಾಚಿಕೆಯ ಸಂಗತಿ

ಶಿಕ್ಷಕರ ಕ್ಷೇತ್ರದಲ್ಲಿ ಅಸಿಂಧು ಓಟುಗಳು ಹೆಚ್ಚಾಗಿರುವುದು ನಾಚಿಕೆಯ ಸಂಗತಿ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಗೆದ್ದ ಅಭ್ಯರ್ಥಿ ಬಸವರಾರ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.‘ಈ ಬಾರಿ 1,223 ಮತಗಳು ಅಸಿಂಧುವಾಗಿವೆ. ಇದು ಈವರೆಗಿನ ಅತಿ ಹೆಚ್ಚು ಮತಗಳಾಗಿವೆ. ಕಳೆದ ಬಾರಿ 784 ಮತಗಳು ಅಸಿಂಧುವಾಗಿದ್ದವು’ ಎಂದರು.

ಅಸಿಂಧು ಮತಗಳೇ ಮೂರನೇ ಸ್ಥಾನ!

ವಿಚಿತ್ರವೆಂದರೆ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಹೊರತುಪಡಿಸಿ ಉಳಿದ ಎಲ್ಲ ಅಭ್ಯರ್ಥಿಗಳೂ ಕೂಡ ಅಸಿಂಧುಮತಗಳಷ್ಟು ಮತಪಡೆದಿಲ್ಲ. ಅಸಿಂಧು ಮತಗಳು1,223 ಇದ್ದರೆ, ಗುರಿಕಾರ ಹೊರತಪಡಿಸಿ ಉಳಿದವವರೆಲ್ಲರೂ ಸೇರಿ 497 ಮತ ಪಡೆದಿದ್ದಾರೆ.

ಪಶ್ಚಿಮ ಶಿಕ್ಷಕರ ಮತಕ್ಷೆತ್ರದಲ್ಲಿ ಮತಗಳ ಹಂಚಿಕೆ

ಬಸವರಾಜ ಹೊರಟ್ಟಿ (ಬಿಜೆಪಿ)– 9266

ಬಸವರಾಜ ಗುರಿಕಾರ (ಕಾಂಗ್ರೆಸ್)– 4597

ಶ್ರೀಶೈಲ ಗಡದಿನ್ನಿ (ಜೆಡಿಎಸ್)– 273

ಎಂ.ಪಿ.ಕರಿಬಸಪ್ಪ ಮಧ್ಯಾಹ್ನದ– 60

ಕೃಷ್ಣವೇಣಿ– 58

ಪ್ರೊ. ಎಫ್‌.ವಿ.ಕಲ್ಲಣ್ಣಗೌಡರ– 27

ಗೋವಿಂದಗೌಡರ ರಂಗನಗೌಡ– 79

ಒಟ್ಟು ಸಿಂಧು ಮತಗಳು– 14360

ಅಸಿಂಧು ಮತಗಳು– 1223

***

ಗೊಂದಲ ಸೃಷ್ಟಿಸಿದ ಹೆಚ್ಚುವರಿ ಮತಗಳು

ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಮತದಾನದ ದಿನ ದಾಖಲಾದ ಮತಗಳಿಗಿಂತ 6 ಹೆಚ್ಚುವರಿ ಮತಗಳು ಸೇರಿದ್ದವು. ಮತದಾನದ ದಿನ 15,577 ಮತಗಳು ಚಲಾವಣೆಗೊಂಡಿದ್ದವು. ಆದರೆ ಎಣಿಕೆ ದಿನ 15,583 ಬಂದಿವೆ ಎಂದು ದಾಖಲಿಸಲಾಗಿದೆ. ಹೀಗಾಗಿ ಹೆಚ್ವುವರಿ 6 ಮತಗಳ ಲೆಕ್ಕ ಗೊಂದಲ ಮೂಡಿಸಿತು.

ಮತ ಎಣಿಕೆಯ ಆರಂಭದಲ್ಲೇ ಮತಪೆಟ್ಟಿಗೆಯೊಂದರಲ್ಲಿ ಸಿಕ್ಕ ಎರಡು ಹೆಚ್ಚುವರಿ ಮತಗಳು ಗೊಂದಲ ಸೃಷ್ಟಿಸಿತ್ತು. ನಂತರ ಇದಕ್ಕೆ ಸ್ಪಷ್ಟನೆ ನೀಡಿದ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ‘ಮತ ಎಣಿಕೆ ಕೇಂದ್ರದಲ್ಲಿನ ಮತಗಳ ಸಂಖ್ಯೆಯೇ ಅಂತಿಮ. ಮತಗಳ ಸಂಖ್ಯೆ ಎಣಿಸುವಾಗ ಮತಗಟ್ಟೆ ಅಧಿಕಾರಿಯೊಬ್ಬರು ಸರಿಯಾಗಿ ಲೆಕ್ಕ ಮಾಡದೆ ತಪ್ಪು ಮಾಡಿದ್ದರು. ಹೀಗಾಗಿ ಆರಂಭದಲ್ಲಿ ಸ್ವಲ್ಪ ಗೊಂದಲ ಉಂಟಾಗಿತ್ತು’ ಎಂದರು.

* * *

ನರಸಿಂಹಮೂರ್ತಿ 4 ಬಾರಿ ಗೆದ್ದಿದ್ದರು...

‘ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಇದು ನನ್ನ 8ನೇ ಗಲುವು. ಈ ಹಿಂದೆ ಟಿ.ಎನ್.ನರಸಿಂಹಮೂರ್ತಿ ಎಂಬುವವರು ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದರು. ಉತ್ತರ ಪ್ರದೇಶದ ಒಬ್ಬ ಶಾಸಕ ಐದು ಬಾರಿ ಗೆದ್ದಿದ್ದಾರೆ. ಅದನ್ನು ಹೊರತುಪಡಿಸಿದರೆ ವಿಧಾನ ಪರಿಷತ್ತಿಗೆ ದೇಶದಲ್ಲೇ ಅತಿ ಹೆಚ್ಚು ಬಾರಿ ಆಯ್ಕೆಯಾಗಿದ್ದು ನಾನೇ’ ಎಂದು ಬಸವರಾಜ ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT