ಶುಕ್ರವಾರ, ಮೇ 20, 2022
23 °C
ದಳಕ್ಕೆ ಎರಡೇ ಸ್ಥಾನ: ಮೇಲ್ಮನೆಗೆ ಬಂದ ಗೌಡರ ಕುಟುಂಬದ ಕುಡಿ

ಮೇಲ್ಮನೆ ಚುನಾವಣೆ ಫಲಿತಾಂಶ: ಕೈ–ಕಮಲ ಸಮಬಲ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ರಾಜಕೀಯ ಪಡಸಾಲೆಯೊಳಗೆ ಕುತೂಹಲಕ್ಕೆ ಕಾರಣವಾಗಿದ್ದ ಮೇಲ್ಮನೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಬಿಜೆಪಿ ಏದುಸಿರು ಬಿಡುತ್ತಲೇ ಹಿಂದಿಗಿಂತ ಐದು ಸ್ಥಾನಗಳನ್ನು ಹೆಚ್ಚುವರಿಯಾಗಿ ದಕ್ಕಿಸಿಕೊಂಡಿದ್ದರೆ, ಕಾಂಗ್ರೆಸ್ ಮೂರು ಸ್ಥಾನ‌ ಕಳೆದುಕೊಂಡರೂ ಎದುರಾಳಿಗಳಿಗೆ ತೀವ್ರ ಪೈಪೋಟಿ ಒಡ್ಡಿ 11ರಲ್ಲಿ ಗೆದ್ದಿದೆ. ಬಿಜೆಪಿ–ಜೆಡಿಎಸ್‌ ಅಭ್ಯರ್ಥಿಗಳಿಗೆ ಗೆಲುವಿನ ಕಷ್ಟವೇನೆಂದು ತೋರಿಸಿದ ಕಾಂಗ್ರೆಸ್‌ ವಿರೋಧ ಪಕ್ಷವಾಗಿಯೂ ಬಲಿಷ್ಠವಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದೆ.

ಆರೇ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ಗೆ ತನ್ನ ಭದ್ರಕೋಟೆಯಲ್ಲೇ ಬುಡ ಅಲ್ಲಾಡತೊಡಗಿರುವುದರ ಅನುಭವವನ್ನು ಈ ಚುನಾವಣೆ ತೋರಿಸಿದೆ. ಈ ಹಿಂದೆ ಗಳಿಸಿದ್ದ ನಾಲ್ಕರಲ್ಲಿ ಎರಡನ್ನು ಕಳೆದುಕೊಂಡು ಎರಡನ್ನು ಮಾತ್ರ ಉಳಿಸಿಕೊಳ್ಳಲು ಆ ಪಕ್ಷ ಶಕ್ತವಾಗಿದೆ.

ಈ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಪರಿಷತ್ತಿನಲ್ಲಿ ತನ್ನ ಬಲವನ್ನು 37ಕ್ಕೆ ಹೆಚ್ಚಿಸಿಕೊಂಡ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಜನವರಿ 5ಕ್ಕೆ ಅವಧಿ ಪೂರ್ಣಗೊಳ್ಳಲಿರುವ ವಿಧಾನಪರಿಷತ್ತಿನ 25 ಸದಸ್ಯರ (ಐದು ದ್ವಿಸದಸ್ಯ ಕ್ಷೇತ್ರಗಳೂ ಸೇರಿ) ಆಯ್ಕೆಗಾಗಿ ಡಿ.10ರಂದು ಮತದಾನ ನಡೆದಿತ್ತು. ಸ್ಥಳೀಯ ಸಂಸ್ಥೆಗಳ ಸದಸ್ಯರು ವಿಧಾನಪರಿಷತ್ತಿಗೆ ತಮ್ಮ ಪ್ರತಿನಿಧಿಗಳು ಆಯ್ಕೆ ಮಾಡುವ ಚುನಾವಣೆ ಇದಾಗಿತ್ತು.

ಬಿಜೆಪಿ ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ದ್ವಿಸದಸ್ಯ ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಬಿಜೆಪಿ–ಕಾಂಗ್ರೆಸ್‌ ತಲಾ ಒಂದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಪಾಲನ್ನು ಹಂಚಿಕೊಳ್ಳುವ ಲೆಕ್ಕಾಚಾರ ಹಾಕಿದ್ದವು. ಮೈಸೂರು–ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಇದ್ದುದರಿಂದ ತ್ರಿಕೋನ ಸ್ಪರ್ಧೆ ಎದುರಾಗಿತ್ತು. ಆದರೆ, ಬೆಳಗಾವಿಯಲ್ಲಿ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿ, ಬಿಜೆಪಿಗೆ ಪೈಪೋಟಿ ಒಡ್ಡಿದರು.

ವಿಜಯಪುರದಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ, ಮತ ಎಣಿಕೆಯ ಕೊನೆ ಕ್ಷಣದವರೆಗೂ ಬಿಜೆಪಿಯ ಪಿ.ಎಚ್. ಪೂಜಾರ್‌ಗೆ ಸೋಲಿನ ಸವಾಲನ್ನು ಒಡ್ಡುತ್ತಲೇ ಬಂದರು. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಗೆದ್ದೇ ಬಿಟ್ಟೆನೆಂದು ಬೀಗಿದ್ದರು. ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ವೇಳೆ ಜೆಡಿಎಸ್‌ನ ಮಂಜೇಗೌಡ ಮುಂಚೂಣಿಗೆ ಬಂದು ‘ಕೌಟಿಲ್ಯ‘ನ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದರು. ಎರಡನೇ ಪ್ರಾಶಸ್ತ್ಯದಲ್ಲಿ ಪಡೆದ ಮತದ ಮೌಲ್ಯ ಎಷ್ಟೆಂದು ನಿಗದಿ ಮಾಡಿದ ಬಳಿಕ ಯಾವ ಅಭ್ಯರ್ಥಿಯನ್ನು ಕೈಬಿಡಬೇಕು ಎಂಬ ನಿರ್ಣಯದ ಸುತ್ತಿನಲ್ಲಿ (ಎಲಿಮಿನೇಷನ್‌), ಮಂಜೇಗೌಡರು ಗೆದ್ದು ಜೆಡಿಎಸ್‌ಗೆ ‘ಉಸಿರು’ ತಂದುಕೊಟ್ಟರು.

₹30 ಸಾವಿರದಿಂದ ₹3 ಲಕ್ಷದವರೆಗೆ ಒಂದು ಮತ ಬಿಕರಿಯಾಗಿದ್ದು, ಹಣದ ಹೊಳೆಯೇ ಚುನಾವಣೆಯಲ್ಲಿ ಹರಿಯಿತು. ಇದು ಪ್ರಜಾತಾಂತ್ರಿಕವಾಗಿ ನಡೆದ ಚುನಾವಣೆಯಲ್ಲ; ಮತ ಮಾರಾಟದ ಮತದಾನ ಎಂದು ಮೂರು ಪಕ್ಷಗಳ ನೇತಾರರೇ ವಿಶ್ಲೇಷಣೆ ಮಾಡುವಷ್ಟು, ಅಭ್ಯರ್ಥಿಗಳ ಸಂಪತ್ತು ಕರಗಿತು. ಹಾಗಿದ್ದರೂ ₹1746 ಕೋಟಿ ಆಸ್ತಿ ಘೋಷಿಸಿ, ಅತಿ ಶ್ರೀಮಂತ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್‌ (ಕೆಜಿಎಫ್ ಬಾಬು) ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲೇ ಇಲ್ಲ.

ಬಿಜೆಪಿಗೆ ಸಂಭ್ರಮ ತರದ ಸಾಧನೆ: ಆರು ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿದ್ದ ಬಿಜೆಪಿ ಈ ಚುನಾವಣೆಯಲ್ಲಿ ತನ್ನ ಬಲ 11ಕ್ಕೆ ಏರಿಸಿಕೊಂಡಿದೆ. ತಮ್ಮ ತವರು ಜಿಲ್ಲೆಗೆ ಸೇರಿದ ತಾವು ಪ್ರತಿನಿಧಿಸುವ ಕ್ಷೇತ್ರದ ನೆರೆಯ ಕ್ಷೇತ್ರ ಹಾನಗಲ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಾಗದೇ ಮುಗ್ಗರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಚುನಾವಣೆ ತುಸು ಸಮಾಧಾನ ತಂದಿದೆ. ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಹಳೆ ಮೈಸೂರು ಭಾಗ ಬಿಟ್ಟರೆ ಉಳಿದ ಕಡೆ ಹೆಚ್ಚಿನ ಶಾಸಕರು, ಸಂಸದರನ್ನು ಹೊಂದಿರುವ ಬಿಜೆಪಿಗೆ ಈ ಗೆಲುವು ಸಂಭ್ರಮ ಪಡುವಂತಹದ್ದೇನಲ್ಲ.

ಏಕೆಂದರೆ, ಸಂಘಟನಾ ಬಲವುಳ್ಳ ಆಡಳಿತಾರೂಢ ಬಿಜೆಪಿಗೆ ಜೆಡಿಎಸ್ ಕೋಟೆಯೊಳಗೆ ನುಗ್ಗಿ ಗೆಲ್ಲುವ ಅಥವಾ ಕಾಂಗ್ರೆಸ್‌ ಅನ್ನು ಹೆಡೆಮುರಿ ಕಟ್ಟಲು ಸಾಧ್ಯವಾಗಿಲ್ಲ. ತನ್ನ ಭದ್ರಕೋಟೆ ಎಂದೇ ಆ ಪಕ್ಷದ ನಾಯಕರು ಹೇಳಿಕೊಳ್ಳುವ ಕಡೆಗಳಲ್ಲಿ ಸಲೀಸಿನ ಜಯ ಸಿಕ್ಕಿಲ್ಲ. ದ್ವಿಸದಸ್ಯ ಕ್ಷೇತ್ರದ ಪೈಕಿ ದಕ್ಷಿಣ ಕನ್ನಡದಲ್ಲಿ ಮಾತ್ರ ಮೊದಲ ಪ್ರಾಶಸ್ತ್ಯದ ಮತದಿಂದ ಅದು ಗೆದ್ದಿದ್ದರೆ, ಬೆಳಗಾವಿಯಲ್ಲಿ ಸೋತಿದೆ. ಧಾರವಾಡದಲ್ಲಿ ಎರಡನೇ ಸ್ಥಾನ ಸಿಕ್ಕಿದರೆ, ಮೈಸೂರಿನಲ್ಲಿ ಸೋಲನುಭವಿಸಿದೆ. ವಿಜಯಪುರದಲ್ಲಿ ಕಷ್ಟಪಟ್ಟು ಗೆಲುವು ಪಡೆದಿದೆ. ಏಕ ಸದಸ್ಯ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು, ಕೊಡಗಿನಲ್ಲಿ ಪ್ರಯಾಸದಲ್ಲೇ ಗೆದ್ದಿದೆ. ಹಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲುಣಿಸಿ ಕೆಲವು ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿದೆ. ಭಾರಿ ಪ್ರಯತ್ನ ಪಟ್ಟಿದ್ದ ಕೋಲಾರ, ತುಮಕೂರಿನಲ್ಲಿ ತೀವ್ರ ಹಿನ್ನಡೆ
ಕಂಡಿದೆ.

ಪಕ್ಷದ ಒಳಗಿನ ಅತೃಪ್ತಿ ಹೇಗೆ ಸೋಲಾಗಿ ಪರಿಣಮಿಸಿತು ಎಂಬುದನ್ನು ಬಿಜೆಪಿ ನಾಯಕರಿಗೆ ಈ ಚುನಾವಣೆ ತೋರಿಸಿದೆ. ಏಕೆಂದರೆ, ಬೆಳಗಾವಿಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಲಖನ್ ಅವರನ್ನು ಕಣಕ್ಕೆ ಇಳಿಸಿದ್ದರಿಂದಾಗಿ ಪರಿಷತ್ತಿನ ಮುಖ್ಯಸಚೇತಕರೂ ಆಗಿರುವ ಅಧಿಕೃತ ಅಭ್ಯರ್ಥಿ ಮಹಂತೇಶ ಕವಟಗಿಮಠ ಸೋತು ಮನೆ ಸೇರಬೇಕಾದ ಸ್ಥಿತಿ ಬಂದಿತು.

ಕಾಂಗ್ರೆಸ್‌ಗೆ ತೃಪ್ತಿ: ಪ್ರತಿನಿಧಿಸುತ್ತಿದ್ದ 14 ಕ್ಷೇತ್ರಗಳಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದರೂ ಜೆಡಿಎಸ್‌ನ ಕಾರ್ಯಸ್ಥಾನ ಹೊಕ್ಕು ಗೆಲುವು ಸಾಧಿಸಿರುವುದು ಕಾಂಗ್ರೆಸ್‌ ನಾಯಕರಿಗೆ ಸಮಾಧಾನ ತರುವ ಅಂಶ. ಆದರೆ, ಕೆ.ಸಿ.ಕೊಂಡಯ್ಯ ಅವರನ್ನು ಗೆಲ್ಲಿಸಿಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ.

ಒಕ್ಕಲಿಗರ ಪ್ರಾಬಲ್ಯವಿರುವ, ಜೆಡಿಎಸ್ ಶಾಸಕರೇ ಹೆಚ್ಚಿರುವ ಮಂಡ್ಯ, ಬೆಂಗಳೂರು ಗ್ರಾಮಾಂತರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಇನ್ನು ತುಮಕೂರು, ಕೋಲಾರ–ಚಿಕ್ಕಬಳ್ಳಾಪುರ ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಲ್ಲೇ ಇದ್ದವು. ಅಲ್ಲಿ ಗೆಲ್ಲುವ ರಣತಂತ್ರವನ್ನು ಬಿಜೆಪಿ ಪ್ರತಿನಿಧಿಸುವ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹೆಣೆದಿದ್ದರು. ಈ ಕ್ಷೇತ್ರಗಳನ್ನು ಈಗ ಪ್ರತಿನಿಧಿಸುತ್ತಿರುವ ಜೆಡಿಎಸ್ ಸದಸ್ಯರು, ಕಾಂಗ್ರೆಸ್ ಸೇರಿದ್ದು ’ಕೈ‘ ಪಾಳಯಕ್ಕೆ ವರದಾನವಾಯಿತು.

ಮಂಡ್ಯದಲ್ಲಿ ಜೆಡಿಎಸ್‌ ಸೋಲಿಸಲೇಬೇಕು ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ನಡೆಸಿದ ತಂತ್ರ ಯಶಸ್ವಿಯಾಯಿತು. ‘ಇಲ್ಲಿನ ಸೋಲಿಗೆ ಕಾಂಗ್ರೆಸ್–ಬಿಜೆಪಿ ನಾಯಕರ ಒಳಒಪ್ಪಂದವೇ ಕಾರಣ’ ಎಂದು ಕುಮಾರಸ್ವಾಮಿ ದೂರಿರುವುದರಲ್ಲಿ ಸುಳ್ಳು ಇದ್ದಂತಿಲ್ಲ.

ಜೆಡಿಎಸ್‌ಗೆ ಪಾಠ: ಚುನಾವಣೆ ಆರಂಭದಿಂದಲೂ ಗೊಂದಲದಲ್ಲೇ ಕಾರ್ಯಕರ್ತರನ್ನು ಇಟ್ಟು ತಮ್ಮದೇ ‘ರಾಜಕಾರಣ’ವನ್ನು ನಡೆಸಲು ಹೊರಟ ಎಚ್.ಡಿ. ಕುಮಾರಸ್ವಾಮಿಯವರ ಧೋರಣೆ ಅವರಿಗೇ ಮುಳುವಾಗಿದೆ. ಮತದಾನದ ದಿನಾಂಕ ಹತ್ತಿರವಾದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಎಚ್.ಡಿ. ದೇವೇಗೌಡರು, ಸಂದೇಶವೊಂದನ್ನು ಕೊಡಲು ನೋಡಿದರು. ಅದು ಫಲಕೊಡುವ ಬದಲು, ಮರ್ಮದೇಟು ನೀಡಿತು. ಬಿಜೆಪಿ ಜತೆಗೆ ಒಪ್ಪಂದ ಕುರಿತು ಕೊನೆಕ್ಷಣದವರೆಗೂ ದ್ವಂದ್ವ ಹೇಳಿಕೆ ನೀಡುತ್ತಾ ಬಂದ ಕುಮಾರಸ್ವಾಮಿಯವರ ನಡೆಯೂ ಪರಿಣಾಮ ಬೀರಿತು.

ತನ್ನ ಪ್ರಭಾವಳಿಯ ನೆಲದಲ್ಲೇ ಗೆಲ್ಲಲಾಗದಷ್ಟು ದುರ್ಬಲಗೊಳ್ಳುತ್ತಿರುವುದರ ಅರಿವನ್ನು ಈ ಫಲಿತಾಂಶ ದಳಪತಿಗಳಿಗೆ ಮೂಡಿಸಿದೆ. ಸ್ಪಷ್ಟ ನಿಲುವಿಲ್ಲದಿದ್ದರೆ ಇರುವ ಅಸ್ತಿತ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬ ಪಾಠವನ್ನು ಕಲಿಸಿಕೊಟ್ಟಿದೆ.

ನಾಲ್ಕೂ ಮನೆಗಳಲ್ಲಿ ಗೌಡರ ಕುಟುಂಬ ಪ್ರಾತಿನಿಧ್ಯ
ಹಾಸನದಲ್ಲಿ ಸೂರಜ್ ರೇವಣ್ಣ ಗೆಲ್ಲುವ ಮೂಲಕ ಪ್ರಜಾತಂತ್ರದ ನಾಲ್ಕೂ ಮನೆಗಳಲ್ಲಿ ಪ್ರಾತಿನಿಧ್ಯ ಪಡೆದ ಕರ್ನಾಟಕದ ಏಕೈಕ ಕುಟುಂಬ ಎಂಬ ವಿಶೇಷಣ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬಕ್ಕೆ ಸಲ್ಲುತ್ತದೆ.

ರಾಜ್ಯಸಭೆಯಲ್ಲಿ ಕುಟುಂಬದ ಹಿರಿಯಜ್ಜ ದೇವೇಗೌಡರು, ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ, ವಿಧಾನಸಭೆಯಲ್ಲಿ ಎಚ್‌.ಡಿ. ರೇವಣ್ಣ, ಎಚ್‌.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪರಿಷತ್ತಿನಲ್ಲಿ ಸೂರಜ್‌ ಸದಸ್ಯರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಅವಧಿ ಮುಗಿಯುವವರೆಗೆ ಭವಾನಿ ರೇವಣ್ಣ ಸದಸ್ಯರಾಗಿದ್ದು, ಅವರೂ ಅಧಿಕಾರದಲ್ಲಿದ್ದರೆ ತಳಹಂತದವರೆಗೂ ಅವರ ಕುಟುಂಬ ಪ್ರಾತಿನಿಧ್ಯ ಪಡೆದಂತಾಗುತ್ತಿತ್ತು. ಇವರಲ್ಲದೇ ಕುಟುಂಬದ ಬೀಗರಾದ ಡಿ.ಸಿ. ತಮ್ಮಣ್ಣ, ಸಿ.ಎನ್‌. ಬಾಲಕೃಷ್ಣ ಕೂಡ ವಿಧಾನಸಭೆ ಪ್ರತಿನಿಧಿಸುತ್ತಿದ್ದಾರೆ.

*

13–14 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಸ್ವಲ್ಪದರಲ್ಲಿ ಹೆಚ್ಚು ಕಡಿಮೆಯಾಗಿದೆ. ಐದು ಸ್ಥಾನ ಹೆಚ್ಚಿಸಿಕೊಂಡಿರುವುದು ತೃಪ್ತಿ ತಂದಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

*

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ನಿರ್ಮಾಣವಾಗಿದೆ ಎನ್ನುವುದಕ್ಕೆ ಚುನಾವಣೆಯ ಫಲಿತಾಂಶವೇ ಸಾಕ್ಷಿ.
-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

*

ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

*

ಫಲಿತಾಂಶ ಸಮಾಧಾನ ತಂದಿದೆ. ಜನರ ಭಾವನೆ ಗೊತ್ತಾಗಿದೆ. ಇದು ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು