ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನವಣೆ ಫಲಿತಾಂಶ: ಚಿಂತಕರ ಚಾವಡಿ ಸೇರಿದ ಹುಕ್ಕೇರಿ

Last Updated 15 ಜೂನ್ 2022, 20:00 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 5,055 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕ್ಷೇತ್ರ ರಚನೆಯಾದಾಗಿನಿಂದ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಖಾತೆ ತೆರೆದಿದೆ.

ಹ್ಯಾಟ್ರಿಕ್‌ ಬಾರಿಸುವ ಉಮೇದಿನಲ್ಲಿದ್ದ ಹಾಲಿ ಸದಸ್ಯ ಅರುಣ ಶಹಾಪುರ ಅವರ ಓಟಕ್ಕೆ ತಡೆ ಬಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಬಹುಪಾಲು ಸಚಿವರು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ‘ವಯಸ್ಸಾದ ಎತ್ತು’ ಎಂದು ಪ್ರಕಾಶ ಹುಕ್ಕೇರಿ ಅವರನ್ನು ಪದೇಪದೇ ಮೂದಲಿಸಿದ್ದರು. ಇದೆಲ್ಲವನ್ನೂ ನಿರ್ಲಕ್ಷಿಸಿ ಮತದಾರ ತೀರ್ಪು ನೀಡಿದ್ದಾನೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ತಿಕ್ಕಾಟದ ಮಧ್ಯೆ ತಮಗೆ ಹೆಚ್ಚು ಮತ ಬರುತ್ತವೆ ಎಂಬ ಬನ್ನೂರ ಅವರ ಲೆಕ್ಕಾಚಾರ ತಲೆ ಕೆಳಗಾಯಿತು. ಇವರ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳು ಒಡೆದುಹೋಗಬಹುದು ಎಂಬ ಬಿಜೆಪಿ ಲೆಕ್ಕಾಚಾರವೂ ಬುಡಮೇಲಾಯಿತು.

ಗೆಲುವಿಗೆ ಕಾರಣವೇನು?: ವಿಜಯಪುರ ಜಿಲ್ಲೆಯವರಾದ ಅರುಣ ಶಹಾಪುರ ಬೆಳಗಾವಿ ಜಿಲ್ಲೆಯ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದು ಕಡಿಮೆ. ಅಲ್ಲದೇ, ಜಿಲ್ಲೆಯ ಶಾಸಕರೊಂದಿಗೂ ಸಂ‍ಪರ್ಕಕ್ಕೆ ಬಂದಿಲ್ಲ ಎಂಬ ತಕರಾರು ಬಿಜೆಪಿಯಲ್ಲಿ ಮೊದಲಿನಿಂದಲೂ ಕೇಳಿಬಂದಿತ್ತು. ಅಲ್ಲದೇ, ಕ್ಷೇತ್ರದಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ ಬೆಳಗಾವಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಜೊತೆಗೂ ಅವರ ಒಡನಾಟ ಅಷ್ಟಕ್ಕಷ್ಟೇ ಇತ್ತು. ಇದೇ ಅವರ ಹಿನ್ನಡೆಗೆ ಕಾರಣ ಎಂಬ ಮಾತು ಬಿಜೆಪಿ ಮುಖಂಡರಿಂದ ಕೇಳಿಬಂದಿದೆ. ಜಿಲ್ಲೆಯಲ್ಲಿ ಬಿಜೆಪಿಯ 13 ಶಾಸಕರಿದ್ದರೂ ಪ್ರಚಾರದಲ್ಲಿ ಸಕ್ರಿಯಾಗದಿರುವುದೂ ಸೋಲಿಗೆ ಕಾರಣವಾಯಿತು.

‘ಹಿರಿಯರ ಮನೆ’ ಎಂದೇ ಹೇಳಲಾದ ವಿಧಾನ ಪರಿಷತ್ತಿನ ಅನುಭವಿ ರಾಜಕಾರಣಿಯ ಅಗತ್ಯವನ್ನೂ ಮತದಾರರು ಮನಗಂಡರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸಾಮೂಹಿಕ ಯತ್ನವೂ ಫಲ ನೀಡಿತು.

ಆರು ತಿಂಗಳಲ್ಲಿ ಎರಡನೇ ಪೆಟ್ಟು: 2021ರ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಈಗ ಪ್ರಕಾಶ ಹುಕ್ಕೇರಿ ಗೆಲುವು ಜಿಲ್ಲೆಯ ಬಿಜೆಪಿ ನಾಯಕರಿಗೆ ಆರು ತಿಂಗಳಲ್ಲಿ ಎರಡನೇ ಪೆಟ್ಟು ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT