ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಂಆರ್ ‘ಅಕ್ರಮ’ ಎಸಗಿ 7ನೇ ರ‍್ಯಾಂಕ್

545 ಪಿಎಸ್‌ಐ ಹುದ್ದೆಗಳ ನೇಮಕಾತಿ l ಸಿಐಡಿ ಅಧಿಕಾರಿಗಳ ವಿಚಾರಣೆಯಿಂದ ಬಯಲು
Last Updated 10 ಏಪ್ರಿಲ್ 2022, 18:21 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್ಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಪುರಾವೆ ಪತ್ತೆಯಾಗಿದೆ. ಒಎಂಆರ್‌ (ಆಪ್ಟಿಕಲ್ ಮಾರ್ಕ್ಸ್ ರೆಕಗ್ನಿಷನ್) ಹಾಳೆ ತಿದ್ದಿ 7 ನೇ ರ‍್ಯಾಂಕ್ ಗಿಟ್ಟಿಸಿದ್ದ ಅಭ್ಯರ್ಥಿ ವೀರೇಶ್ ಎಂಬಾತನ ಅಕ್ರಮವನ್ನು ಸಿಐಡಿ ಅಧಿಕಾರಿಗಳು ಬಯಲು ಮಾಡಿದ್ದಾರೆ.

545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ದೈಹಿಕ ಹಾಗೂ ಲಿಖಿತ ಪರೀಕ್ಷೆ ನಡೆಸಿ 2022ರ ಜನವರಿ 19ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದ್ದವು. ‘ಪಿಎಸ್‌ಐ ನೇಮಕಾತಿಯಲ್ಲೂ ಅಕ್ರಮ’ ಶೀರ್ಷಿಕೆಯಡಿ 2022ರ ಜನವರಿ 25 ರ ‘ಪ್ರಜಾವಾಣಿ’ಯ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಆಯ್ಕೆಯಾಗಿದ್ದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಪರಿಶೀಲನೆ ನಡೆಸಿದ್ದ ನೇಮಕಾತಿ ವಿಭಾಗಕ್ಕೂ ಅನುಮಾನ ಬಂದಿತ್ತು. ಹೀಗಾಗಿ, ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಅಕ್ರಮದ ಬಗ್ಗೆ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರವು ಸಿಐಡಿಯ ಆರ್ಥಿಕ ಗುಪ್ತವಾರ್ತೆ ಘಟಕಕ್ಕೆ (ಎಫ್‌ಐಯು) ಸೂಚಿಸಿತ್ತು. ಎರಡು ತಿಂಗಳು ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು, ಕೆಲ ಅಭ್ಯರ್ಥಿಗಳು ಎಸಗಿದ್ದ ಅಕ್ರಮವನ್ನು ಪತ್ತೆ ಹಚ್ಚಿದ್ದಾರೆ.

ಸದ್ಯ ಅಭ್ಯರ್ಥಿ ವೀರೇಶ್ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ), ಸಹಿ ನಕಲು (ಐಪಿಸಿ 465), ಕೆಲಸ ಕೊಡಿಸುವುದಾಗಿ ವಂಚನೆ (417), ವಂಚನೆ (ಐಪಿಸಿ 420), ಅಪರಾಧ ಸಂಚು (ಐಪಿಸಿ 34) ಆರೋಪದಡಿ ಕಲಬುರಗಿಯ ಚೌಕ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ. ಮತ್ತಷ್ಟು ಅಭ್ಯರ್ಥಿಗಳ ವಿರುದ್ಧ ರಾಜ್ಯದಾದ್ಯಂತ ಪ್ರಕರಣಗಳು ದಾಖಲಾಗುವ ಸಾಧ್ಯತೆಯೂ ಇದೆ.

‘ಅಕ್ರಮದ ಬಗ್ಗೆ ಇನ್‌ಸ್ಪೆಕ್ಟರ್ ಕೆ.ಎಚ್. ದಿಲೀಪ್‌ಕುಮಾರ್ ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಅದರನ್ವಯ ದಾಖಲಾಗಿರುವ ಪ್ರಕರಣದಲ್ಲಿ ಅಭ್ಯರ್ಥಿ ವೀರೇಶ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆತನನ್ನು ಕಸ್ಟಡಿಗೆ ಪಡೆದು ಬೆಂಗಳೂರಿಗೆ ಕರೆತಂದು ತನಿಖೆ ಮುಂದುವರಿಸಲಾಗುವುದು’ ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

21 ಪ್ರಶ್ನೆಗೆ ಉತ್ತರಿಸಿ, 121.87 ಅಂಕ: ‘ಪಿಎಸ್‌ಐ ಹುದ್ದೆಗೆ ಅರ್ಜಿ (ಸಂಖ್ಯೆ 2271151) ಸಲ್ಲಿಸಿದ್ದ ವೀರೇಶ್‌ ಅವರಿಗೆ ನೋಂದಣಿ ಸಂಖ್ಯೆ– 9221946 ನೀಡಲಾಗಿತ್ತು. ಕಲಬುರಗಿಯ ಜಿಡಿಎ ಬಡಾವಣೆಯ ಗೋಕುಲ್‌ ನಗರದಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು’ ಎಂದು ಸಿಐಡಿ ಅಧಿಕಾರಿ ಹೇಳಿದರು.

‘ಪತ್ರಿಕೆ –2ರ (ಸಾಮಾನ್ಯ ಅಧ್ಯಯನ) ಒಎಂಆರ್‌ ಹಾಳೆಯಲ್ಲಿ ಕೇವಲ 21 ಪ್ರಶ್ನೆಗಳಿಗೆ ವೀರೇಶ್ ಉತ್ತರಿಸಿದ್ದರು. ಅದರ ನಕಲು ಪ್ರತಿಯನ್ನು ಅಭ್ಯರ್ಥಿಗೆ ನೀಡಿ, ಅಸಲಿ ಪ್ರತಿಯನ್ನು ಬೆಂಗಳೂರಿನ ಸಿಐಡಿ ಕಚೇರಿ ಆವರಣದಲ್ಲಿರುವ ನೇಮಕಾತಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ, ವಿಭಾಗದಲ್ಲಿದ್ದ ಒಎಂಆರ್‌ ಅಸಲಿ ಪ್ರತಿಯಲ್ಲಿ 100 ಪ್ರಶ್ನೆಗಳಿಗೂ ಉತ್ತರಿಸಿರುವುದು ದಾಖಲಾಗಿದೆ. ಅದೇ ಪ್ರತಿಯನ್ನು ಮೌಲ್ಯಮಾಪನ ಮಾಡಿ, 121.875 ಅಂಕಗಳನ್ನು ನೀಡಲಾಗಿದೆ’ ಎಂದೂ ತಿಳಿಸಿದರು.

‘ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 35 ಅಂಕ ಹಾಗೂ ಪತ್ರಿಕೆ–2ರಲ್ಲಿ 121.875 ಅಂಕ ಪಡೆದಿದ್ದ ವೀರೇಶ್‌, ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ 7ನೇ ರ‍್ಯಾಂಕ್ ಪಡೆದು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಯನ್ನು ರದ್ದುಪಡಿಸುವಂತೆ ವರದಿಯಲ್ಲಿ ಕೋರಲಾಗಿದೆ’ ಎಂದರು.

ಒಎಂಆರ್‌ ತಿದ್ದಿ ಅಕ್ರಮ: ‘ಆರೋಪಿ ವೀರೇಶ್, ಪರೀಕ್ಷೆ ನಂತರ ಇತರರ ಸಹಾಯದಿಂದ ಅಸಲಿ ಒಎಂಆರ್‌ ಹಾಳೆ ಪಡೆದುಕೊಂಡಿದ್ದಾನೆ. ತಾನು ಬಿಟ್ಟಿದ್ದ ಜಾಗದಲ್ಲಿ ಸರಿ ಉತ್ತರಗಳನ್ನು ಭರ್ತಿ ಮಾಡಿದ್ದಾನೆ. ಅದೇ ಒಎಂಆರ್ ಹಾಳೆಯನ್ನು ನೇಮಕಾತಿ ವಿಭಾಗದಲ್ಲಿದ್ದ ಬಂಡಲ್‌ನಲ್ಲಿ ಸೇರಿಸುವಂತೆ ಮಾಡಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಸಿಐಡಿ
ಅಧಿಕಾರಿ ತಿಳಿಸಿದರು.

‘ಲಕ್ಷಾಂತರ ರೂಪಾಯಿ ನೀಡಿರುವ ಶಂಕೆ’

‘ಪಿಎಸ್‌ಐ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದ ವೀರೇಶ್, ಲಕ್ಷಾಂತರ ರೂಪಾಯಿ ನೀಡಿ ಒಎಂಆರ್‌ ಅಸಲಿ ಹಾಳೆ ಪಡೆದುಕೊಂಡಿರುವ ಶಂಕೆ ಇದೆ. ಈತನಿಂದ ಹಣ ಪಡೆದಿರುವವರು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ವೀರೇಶ್‌ ಎಎಸ್‌ಐ ಪುತ್ರ’

‘ಆರೋಪಿ ವೀರೇಶ್ ಅವರ ತಂದೆ ಸಹಾಯಕ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ಆಗಿದ್ದು, ಕಲಬುರಗಿ ಜಿಲ್ಲೆಯ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನ ಅಕ್ರಮದ ಬಗ್ಗೆ ತಂದೆಯಿಂದಲೂ ಮಾಹಿತಿ ಪಡೆಯಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

ತನಿಖೆ ಆರಂಭ: ಆರಗ

ಬೆಂಗಳೂರು: 545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ. ಅಲ್ಲಿನ ಚೌಕ್‌ ಠಾಣೆಯಲ್ಲಿ ವೀರೇಶ್‌ ಮತ್ತು ಇತರರ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಿಸಿದ್ದು, ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದರು.

***

ಸಿಐಡಿ ಅಧಿಕಾರಿಗಳೇ ನಗರಕ್ಕೆ ಬಂದು ವೀರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆಗಾಗಿ ಕರೆದೊಯ್ದಿದ್ದಾರೆ

–ವೈ.ಎಸ್. ರವಿಕುಮಾರ್, ಕಲಬುರಗಿ ನಗರ ಪೊಲೀಸ್‌ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT