ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಎಸೆದ ಮಹಿಳೆಗೆ ತಪ್ಪಿನ ಅರಿವಾಗಿದೆ, ಕ್ಷಮೆ ಕೇಳುವ ಅಗತ್ಯವಿಲ್ಲ: ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು: ‘ಕೆರೂರಿನಲ್ಲಿ ನಾನು ತೆರಳುತ್ತಿದ್ದ ಕಾರಿನ ಮೇಲೆ ಹಣ ಎಸೆದಿದ್ದ ಮಹಿಳೆಗೆ ತನ್ನ ತಪ್ಪಿನ ಅರಿವಾಗಿದೆ. ನನ್ನ ಬಳಿ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಹಿಳೆ ಮಾತನಾಡಿರುವ ವಿಡಿಯೊ ಸಮೇತ ಟ್ವೀಟ್ ಮಾಡಿರುವ ಅವರು, ‘ಕೆರೂರಿನಲ್ಲಿ ನಾನು ತೆರಳುತ್ತಿದ್ದ ಕಾರಿನ ಮೇಲೆ ಹಣ ಎಸೆದಿದ್ದ ಸೋದರಿಗೆ ತನ್ನ ತಪ್ಪಿನ ಅರಿವಾಗಿದೆ. ತಮ್ಮ ಕುಟುಂಬದ ಮೇಲಿನ ಹಲ್ಲೆಯಿಂದ ನೊಂದ ಅವರ ಭಾವುಕ ಪ್ರತಿಕ್ರಿಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’ ಎಂದಿದ್ದಾರೆ.

‘ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿ ಮಾಡಿ ನನಗೆ ಶುಭ ಹಾರೈಸಿದ ಸೋದರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

‘ಬಾಗಲಕೋಟೆಯ ಕೆರೂರ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಗಲಭೆಯಲ್ಲಿ ಗಾಯಗೊಂಡವರು ಮತ್ತು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಘಟನೆಯ ಸುದ್ದಿ ಗೊತ್ತಾದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠರ ಜೊತೆ ಮಾತನಾಡಿ ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗೆ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ ₹2 ಲಕ್ಷವನ್ನು ಅವರ ಕುಟುಂಬದ ಸದಸ್ಯರು ಸಿದ್ದರಾಮಯ್ಯ ಅವರ ವಾಹನದ ಮೇಲೆ‌ ಎಸೆದಿದ್ದರು.

ಘಟನೆ ನಡೆದು ಇಷ್ಟು ದಿನವಾದರೂ ಯಾರು ಬಂದು ಮಾತನಾಡಿಸಿಲ್ಲ. ಸಚಿವರು ಬಂದರೂ ಕೆಲವರನ್ನಷ್ಟೇ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ. ನೀವು ಸಮಾಧಾನ ಮಾಡುವುದಕ್ಕೆ ಈಗ ಬಂದಿದ್ದೀರಿ ಎಂದು ಕುಟುಂಬಸ್ಥರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹಲ್ಲೆಯಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನೀಫ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿ ತಲಾ‌ ₹50 ಸಾವಿರ ಮೊತ್ತವನ್ನು ಸಿದ್ದರಾಮಯ್ಯ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT