ಶನಿವಾರ, ಜುಲೈ 2, 2022
25 °C
ತೆಗೆಸಿ ಹಾಕಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ಅಸಂಸದೀಯ ಪದ ಬಳಕೆ: ರಮೇಶ್‌ ಕುಮಾರ್‌- ಸುಧಾಕರ್ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಕಾಂಗ್ರೆಸ್‌ನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಧ್ಯದ ಜಟಾಪಟಿಗೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಉತ್ತರ ನೀಡಿದ ಸುಧಾಕರ್‌, ‘ಸಚಿವರನ್ನು ಒಳಗೊಂಡ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ ಪಿಪಿಇ ಕಿಟ್‌ಗಳ ಖರೀದಿ ಮಾಡಲಾಗುತ್ತಿದೆ’ ಎಂದರು.

ಆಗ ಎದ್ದು ನಿಂತ ರಮೇಶ್‌ ಕುಮಾರ್‌, ‘ಪಿಪಿಇ ಕಿಟ್‌ಗಳ ಖರೀದಿ ದರದ ಏರಿಳಿತವನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೊದಲು ಕಿಟ್‌ಗಳನ್ನು ₹300ಕ್ಕೆ ಖರೀದಿಸಿದೆವು. ಆ ಬಳಿಕ ಬೆಲೆ ಹೆಚ್ಚಾಯಿತು. ವಿವಿಧ ಸಮಿತಿಗಳು ಪರಿಶೀಲಿಸಿವೆ ಎನ್ನುತ್ತಿದ್ದಾರೆ. ಈ ಸಮಿತಿಯಲ್ಲಿ ಬೃಹಸ್ಪತಿಗಳಿದ್ದಾರೆ. ಹಾಗಿದ್ದರೆ ಆ ದೇಶಭಕ್ತರು ಮಾಡಿರುವ *** ಕೆಲಸವನ್ನು ಒಪ್ಪಿಕೊಳ್ಳಬೇಕೇ’ ಎಂದು ಪ್ರಶ್ನಿಸಿದರು. 

ಸುಧಾಕರ್‌, ‘ಈ ಹಿಂದೆಯೂ ರಮೇಶ್‌ ಕುಮಾರ್ ಇಂತಹುದೇ ಪದ ಬಳಸಿದ್ದರು. ಈಗ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ,‘ರಮೇಶ್‌ ಕುಮಾರ್‌ ಅವರ ಮೇಲೆ ಗೌರವ ಇದೆ. ಅವರನ್ನು ನಾನು *** ವ್ಯಕ್ತಿ ಎಂದು ಕರೆಯಲೇ. ಇದು ರೌಡಿಗಳು ಬಳಸುವ ಭಾಷೆ. ಮಕ್ಕಳು ಅದನ್ನು ಬಳಸಿದರೆ ನಾವು ಗದರಿಸುತ್ತೇವೆ’ ಎಂದರು.

‘ಉದ್ವೇಗದಿಂದ ಈ ಮಾತು ಹೇಳಿದ್ದೇನೆ. ನಾನು ಬಳಸಿದ ಪದ ಅಸಂಸದೀಯವಾಗಿದೆ ಎಂದು ಸಭಾಧ್ಯಕ್ಷರು ರೂಲಿಂಗ್‌ ನೀಡಿದರೆ ಕ್ಷಮೆಯಾಚಿಸುತ್ತೇನೆ’ ಎಂದು ರಮೇಶ್‌ ಕುಮಾರ್ ಹೇಳಿದರು. ಈ ಹಿಂದೆ ಸದನದಲ್ಲಿ ಜೆ.ಎಚ್‌.ಪಟೇಲರು, ಗೋಪಾಲಗೌಡರು ಎಂತಹ ಪದ ಬಳಸಿದ್ದರು ಎಂಬುದನ್ನು ನೋಡಿ ಎಂದೂ ಹೇಳಿದರು. ‘ಇದು ಸೌಜನ್ಯದ ಭಾಷೆ ಅಲ್ಲ’ ಎಂದು ಹೇಳಿದ ಕಾಗೇರಿ ಹೇಳಿದರು. ಈ ಪದವನ್ನೂ ಕಡತದಿಂದ ತೆಗೆದು ಹಾಕಲಾಗುವುದು ಎಂದರು. ಬಳಿಕ ರಮೇಶ್‌ ಕುಮಾರ್ ಕ್ಷಮೆಯಾಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು