ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ನಾಗೇಶ್‌ ಮನೆ ಮೇಲಿನ ದಾಳಿ ಹಿಂದೆ ಡಿಕೆಶಿ ಕೈವಾಡವಿರಬಹುದೇ: ಬಿಜೆಪಿ ಪ್ರಶ್ನೆ

ಅಕ್ಷರ ಗಾತ್ರ

ಬೆಂಗಳೂರು: ‘ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ನುಗ್ಗಿ ಎನ್‌ಎಸ್‌ಯುಐ ಕಾರ್ಯಕರ್ತರು ದಾಂಧಲೆ ನಡೆಸಿರುವುದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈವಾಡವಿರಬಹುದೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ಸಚಿವರ ಮನೆ ಮೇಲೆ ನಡೆದ ದಾಳಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದಾಳಿಯ ಗಲಭೆಕೋರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರೇರಣೆಯೇ?, ಈ ಮರಿ ರೌಡಿಗಳು ಕಾಂಗ್ರೆಸ್‌ ಪಕ್ಷ ಸೇರಿಕೊಂಡರೆ ರಾಜ್ಯದ ಗತಿ ಏನಾಗಬಹುದು’ ಎಂದು ಪ್ರಶ್ನಿಸಿದೆ.

‘ಯುವ ಕಾಂಗ್ರೆಸ್ ಅಧ್ಯಕ್ಷ‌ ನಲಪಾಡ್‌ ಪಡೆದಿರುವ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ ಇದೆ. ಮೃಗಿಯ ವರ್ತನೆಯವರನ್ನು ಕಾಂಗ್ರೆಸ್ ಪಕ್ಷ ಯುವ‌ ಘಟಕಕ್ಕೆ ನೇಮಿಸಿದೆ. ಇವರಿಂದ ಪ್ರೇರಣೆ ಪಡೆದ ಎನ್‌ಎಸ್‌ಯುಐ ಸಂಘಟನೆ ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ. ಯಥಾ ಪಕ್ಷದ ಮುಖ್ಯಸ್ಥ, ತಥಾ ಕಾರ್ಯಕರ್ತ! #ಗೂಂಡಾಕಾಂಗ್ರೆಸ್‌ ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

‘ಕನಕಪುರದಲ್ಲಿ ಭಯದ ವಾತಾವರಣ ಹುಟ್ಟಿಸಿ, ಅಕ್ರಮ ಹಣದ ವಹಿವಾಟು ನಡೆಸಿ ತಿಹಾರ್ ಜೈಲುವಾಸ ಮುಗಿಸಿ ಬಂದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದರು. ಮಾರಣಾಂತಿಕ ಹಲ್ಲೆ ಮಾಡಿ ಜೈಲು ವಾಸ ಮುಗಿಸಿ ಬಂದವರನ್ನು ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿದರು. ಸಚಿವರ ಮನೆಮೇಲೆ ದಾಳಿ ಮಾಡಿದವರಿಗೆ ಯಾವ ಹುದ್ದೆ ತಯಾರಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಬುಧವಾರ ತಿಪಟೂರಿನಲ್ಲಿ ಸಚಿವ ಬಿ.ಸಿ.ನಾಗೇಶ್‌ ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT